)
ಬಳ್ಳಾರಿ: ಗಡಿ ಭಾಗಗಳಲ್ಲಿ ಕನ್ನಡ ಶಾಲೆ ಆರಂಭಿಸಿ ಕನ್ನಡ ಭಾಷೆ, ಸಂಸ್ಕೃತಿ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ವೈ. ಮಹಾಬಲೇಶ್ವರಪ್ಪನವರು ಜಿಲ್ಲೆಯ ಸಮಷ್ಠಿ ಪ್ರಜ್ಞೆಯಂತೆ ಕೆಲಸ ಮಾಡಿದರು. ತಮ್ಮ ಆಯುಷ್ಯದ ಬಹುಭಾಗ ಸಮಾಜಮುಖಿ ಸೇವೆಯಲ್ಲಿಯೇ ತೊಡಗಿಸಿಕೊಂಡಿದ್ದರು ಎಂದು ಹಿರಿಯ ಚಿಂತಕ ಹಾಗೂ ಲೋಹಿಯಾ ಪ್ರಕಾಶನದ ಮುಖ್ಯಸ್ಥ ಸಿ. ಚನ್ನಬಸವಣ್ಣ ಸ್ಮರಿಸಿದರು.
ಮಹಾಬಲೇಶ್ವರಪ್ಪ ಬರೀ ಕನ್ನಡಪ್ರೇಮಿ, ಶಿಕ್ಷಣ ಪ್ರೇಮಿಯಷ್ಟೇ ಅಲ್ಲ; ದೂರದೃಷ್ಟಿಯುಳ್ಳ ಜನನಾಯಕರಾಗಿದ್ದರು. ಭಾಷೆ ಮತ್ತು ಸಂಸ್ಕೃತಿಯ ಜತನಕ್ಕಾಗಿ ಅಪಾರವಾಗಿ ಶ್ರಮಿಸಿದ ಮಹನೀಯರು. ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದರೂ ಸರಳ ಜೀವನ ಶೈಲಿ ಅಳವಡಿಸಿಕೊಂಡಿದ್ದರು. ಸರ್ವದರ್ಶನ ತೀರ್ಥ ವೈ. ನಾಗೇಶ ಶಾಸ್ತ್ರಿಗಳ ಸಂಪರ್ಕ ಬಂದ ಬಳಿಕ ವೈ. ಮಹಾಬಲೇಶ್ವಪ್ಪನವರ ಬದುಕಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಸಣ್ಣ ವಯಸ್ಸಿನಲ್ಲಿಯೇ ಜಿಲ್ಲಾಡಳಿತ ಚುಕ್ಕಾಣಿ ಹಿಡಿದ ವೈ. ಮಹಾಬಲೇಶ್ವರಪ್ಪ ತಮ್ಮ ಕಾರ್ಯ ವೈಖರಿ ಮೂಲಕ ಮತ್ತಷ್ಟು ಜನಮನ್ನಣೆ ಗಳಿಸಿದರು. ತಮ್ಮ ಅಧಿಕಾರ ಅವಧಿಯಲ್ಲಿ ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ ನೀಡಿ ಹಳ್ಳಿಗಳ ಮೂಲ ಸೌಕರ್ಯ ಹೆಚ್ಚಿಸಿದರು ಎಂದು ತಿಳಿಸಿದರು.
ವೀರಶೈವ ಕಾಲೇಜು ಹೆಸರಿನ ಹಿಂದೆ ವೈ. ಮಹಾಬಲೇಶ್ವರಪ್ಪನವರ ಹೋರಾಟದ ಕೊಡುಗೆ ದೊಡ್ದದಿದೆ. ಶಿಕ್ಷಣ ಸಂಸ್ಥೆಗೆ ವೀರಶೈವ ಕಾಲೇಜು ಎಂಬ ಹೆಸರನ್ನಿಡಲು ನಿರ್ಧರಿಸಿದಾಗ ಅಂದಿನ ಮದ್ರಾಸ್ ವಿಶ್ವವಿದ್ಯಾಲಯದ ಆಡಳಿತ ವಲಯದಿಂದ ಆಕ್ಷೇಪ ವ್ಯಕ್ತವಾಯಿತು. ವೀರಶೈವ ಎಂಬ ಪದವು ಒಂದು ನಿರ್ದಿಷ್ಟ ಸಮುದಾಯ ಅಥವಾ ಜಾತಿ ಸೂಚಿಸುವುದರಿಂದ ಶಿಕ್ಷಣ ಸಂಸ್ಥೆಗೆ ಇಂತಹ ಹೆಸರನ್ನು ಇಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವಿಶ್ವವಿದ್ಯಾಲಯದ ಪ್ರಮುಖರು ವ್ಯಕ್ತಪಡಿಸಿದ್ದರು. ಆದರೆ, ವಿಶ್ವವಿದ್ಯಾಲಯದ ಈ ಆಕ್ಷೇಪಕ್ಕೆ ಮಹಾಬಲೇಶ್ವರಪ್ಪನವರು ಸುಮ್ಮನೆ ಮಣಿಯಲಿಲ್ಲ. ತಾವು ಆಯ್ಕೆ ಮಾಡಿಕೊಂಡ ಹೆಸರಿನ ಹಿಂದೆ ಯಾವುದೇ ತಪ್ಪು ಉದ್ದೇಶವಿಲ್ಲ ಎಂಬುದನ್ನು ಸಮರ್ಥಿಸಿಕೊಳ್ಳುವುದರ ಜತೆಗೆ, ತಮ್ಮ ವಾದವನ್ನು ತಾರ್ಕಿಕವಾಗಿ ಮಂಡಿಸಲು ಮುಂದಾದರು. ಶಿಕ್ಷಣ ಸಂಸ್ಥೆಯ ಹೆಸರಿನ ವಿಚಾರದಲ್ಲಿ ಒಂದು ರೀತಿಯ ಮಾನದಂಡ ಅನುಸರಿಸಬೇಕಾದರೆ ಅದು ಎಲ್ಲ ಸಂಸ್ಥೆಗಳಿಗೂ ಸಮಾನವಾಗಿ ಅನ್ವಯವಾಗಬೇಕು ಎಂಬುದು ಅವರ ನಿಲುವಾಗಿತ್ತು. ಈ ಸಂದರ್ಭದಲ್ಲಿ ಅವರು ವಿಶ್ವವಿದ್ಯಾಲಯದ ಪ್ರಮುಖರ ಮುಂದಿಟ್ಟ ಪ್ರಶ್ನೆ ಅತ್ಯಂತ ಗಮನಾರ್ಹವಾಗಿತ್ತು. ವೀರಶೈವ ಎಂಬ ಪದ ಜಾತಿಸೂಚಕವಾಗಿದ್ದರೆ ಮದ್ರಾಸಿನಲ್ಲಿ ಈಗಾಗಲೇ ಕ್ರಿಶ್ಚಿಯನ್ ಕಾಲೇಜು, ಹಿಂದೂ ಕಾಲೇಜು ಎಂಬ ಹೆಸರುಗಳಿಂದ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆಯಲ್ಲವೇ? ಅವುಗಳ ಹೆಸರುಗಳು ನಿರ್ದಿಷ್ಟ ಧರ್ಮ ಪ್ರತಿನಿಧಿಸುವುದಿಲ್ಲವೇ? ಹಾಗಾದರೆ, ವೀರಶೈವ ಎಂಬ ಹೆಸರನ್ನು ಮಾತ್ರ ಏಕೆ ಆಕ್ಷೇಪಿಸಬೇಕು? ಎಂಬ ಪ್ರಶ್ನೆ ಮುಂದಿಟ್ಟರು. ಅಷ್ಟೇ ಅಲ್ಲ ಮದ್ರಾಸಿನಲ್ಲಿರುವ ಕ್ರಿಶ್ಚಿಯನ್ ಕಾಲೇಜು ಮತ್ತು ಹಿಂದೂ ಕಾಲೇಜುಗಳ ಹೆಸರು ಬದಲಾಯಿಸುವುದಾದರೆ, ತಾವು ಕೂಡ ವೀರಶೈವ ಎಂಬ ಹೆಸರನ್ನು ಬದಲಾಯಿಸಲು ಸಿದ್ಧರಿರುವುದಾಗಿ ಸ್ಪಷ್ಟಪಡಿಸಿದರು.ಹೆಸರಿನ ವಿಚಾರದಲ್ಲಿ ಎಲ್ಲರಿಗೂ ಒಂದೇ ರೀತಿಯ ನಿಯಮ ಇರಬೇಕು. ಒಂದು ಹೆಸರಿಗೆ ಅನುಮತಿ ನೀಡಿ, ಮತ್ತೊಂದು ಹೆಸರಿಗೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂಬ ಸಮಾನತೆಯ ತತ್ವ ತಮ್ಮ ವಾದದ ಮೂಲಕ ಪ್ರತಿಪಾದಿಸಿದರು. ಮಹಾಬಲೇಶ್ವರಪ್ಪನವರ ಈ ಪ್ರಶ್ನೆ ಮತ್ತು ವಾದದಲ್ಲಿ ಅಡಕವಾಗಿದ್ದ ನ್ಯಾಯಸಮ್ಮತತೆ ವಿಶ್ವವಿದ್ಯಾಲಯದ ಪ್ರಮುಖರ ಗಮನ ಸೆಳೆಯಿತು. ಕೇವಲ ಭಾವನಾತ್ಮಕವಾಗಿ ಮಾತನಾಡದೆ, ಉದಾಹರಣೆಗಳ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡ ಅವರ ತಾರ್ಕಿಕ ಚಿಂತನೆಗೆ ಆಡಳಿತ ವಲಯದವರು ಒಪ್ಪಿಗೆ ಸೂಚಿಸಿದರು. ಅಂತಿಮವಾಗಿ ವೀರಶೈವ ಕಾಲೇಜು ಎಂಬ ಹೆಸರಿನೊಂದಿಗೆ ಸಂಸ್ಥೆ ಮುಂದುವರಿಯಲು ಅನುಮತಿ ದೊರೆಯಿತು ಎಂದು ತಿಳಿಸಿದರು.
ಕನ್ನಡಪ್ರಭ ಪ್ರತಿವರ್ಷ ನನ್ನ ತಾತನ ಕುರಿತಾದ ಪುರವಣಿ ಹೊರತಂದು ಸಾರ್ಥಕತೆಯ ಕಾರ್ಯ ನಿರ್ವಹಿಸುತ್ತಿದೆ ಎಂದು ಸ್ಮರಿಸಿದರು.
ಲೇಖಕ ಸಿದ್ಧರಾಮ ಕಲ್ಮಠ, ದಸ್ತಗೀರ್ ಸಾಬ್ ದಿನ್ನಿ, ವೀರೇಂದ್ರ ರಾವಿಹಾಳು, ಸಂಘಟಕ ಪ್ರಭುದೇವ ಕಪ್ಪಗಲ್ಲು, ಯಲ್ಲನಗೌಡ ಶಂಕರಬಂಡೆ, ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್ಲು, ಹಿರಿಯ ವಕೀಲ ಅಂಕಲಯ್ಯ, ಲೆಕ್ಕ ಪರಿಶೋಧಕ ಸಿದ್ಧರಾಮೇಶ್ವರಗೌಡ ಕರೂರು, ಪತ್ರಕರ್ತ ಶಶಿಧರ ಮೇಟಿ, ತಿಮ್ಮಪ್ಪ ಜೋಳದರಾಶಿ, ಸಿಎ ಎರಿಸ್ವಾಮಿ ಚಿಲ್ಕರಾಯಿ, ಎಸ್ಜಿ ಕಾಲೇಜು ಪ್ರಾಂಶುಪಾಲ ಗೋವಿಂದರಾಜು, ನಿವೃತ್ತ ಪ್ರಾಂಶುಪಾಲ ಲಿಂಗರಾಜ್, ಅಡವಿಸ್ವಾಮಿ,ರಂಗಕರ್ಮಿ ಶಿವೇಶ್ವರಗೌಡ ಕಲ್ಲುಕಂಬ, ಜೋಳದರಾಶಿ ಪಂಪನಗೌಡ, ಪಿ.ಎಂ. ಮಂಜುನಾಥ, ಜೋಳದರಾಶಿ ಬಸವರಾಜಸ್ವಾಮಿ, ಸಿದ್ಧಲಿಂಗ ಸ್ವಾಮಿ, ಉಪನ್ಯಾಸಕ ಜೆ. ಸೋಮಶೇಖರ್, ವಿ.ಶಿವಾಚಾರಿ, ಪತ್ರಕರ್ತರಾದ ಮಾರುತಿ ಸುಣಗಾರ, ಆರಾಧ್ಯ, ಬಸವರಾಜ ಹರನಹಳ್ಳಿ, ಅಂಬರೇಷ್ ಯಾದಗಿರಿ, ವಿನಯ್ ಕುಮಾರ್ ಸೇರಿದಂತೆ ಕನ್ನಡಪ್ರಭ ಓದುಗರ ಬಳಗದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.