ಯಾದಗಿರಿ : ಮಳೆ ನಿಂತು ಹೋದ ಮೇಲೆ..!

KannadaprabhaNewsNetwork |  
Published : Sep 30, 2025, 02:00 AM IST
ಯಾದಗಿರಿ ಜಿಲ್ಲೆಯಲ್ಲಿ ಅತೀವೃಷ್ಟಿ ಹಾಗೂ ಭೀಮಾ ಪ್ರವಾಹದಿಂದಾಗಿ ಆದ ಅನಾಹುತಗಳು, ಜಲಾವೃತಗೊಂಡ ಹೊಲಗದ್ದೆಗಳ ಪಕ್ಷಿನೋಟ. (ಡ್ರೋಣ್‌ ಚಿತ್ರ : ಮಲ್ಲು ನಾಯಕ್‌, ಯಾದಗಿರಿ) | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಬಿಟ್ಟೂ ಬಿಡದೇ ಸುರಿಯುತ್ತಿದ್ದ ಮಳೆರಾಯ, ಸೋಮವಾರ ಕೊಂಚ ಮುನಿಸು ತಣ್ಣಗಾಗಿಸಿದಂತೆ ಕಂಡುಬಂದಿತ್ತು. ಸತತ ಮಳೆಯಿಂದ ಜರ್ಝರಿತಗೊಂಡಿದ್ದ ಜನಜೀವನ ಸೋಮವಾರ ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಮೋಡಗಳ ಮಧ್ಯೆ ಮರೆಯಾಗಿದ್ದ ಸೂರ್ಯ ಸೋಮವಾರ ಇಣುಕಿದ್ದರಿಂದ, ಮಳೆನಾಡಿನಂತಾಗಿದ್ದ ಯಾದಗಿರಿ ಜಿಲ್ಲೆ ಬಿಸಿಲನಾಡ ಜನತೆ ಕೊಂಚ ಸಾವರಿಸಿಕೊಳ್ಳುವಂತಾಗಿತ್ತು.

ಯಾದಗಿರಿ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಬಿಟ್ಟೂ ಬಿಡದೇ ಸುರಿಯುತ್ತಿದ್ದ ಮಳೆರಾಯ, ಸೋಮವಾರ ಕೊಂಚ ಮುನಿಸು ತಣ್ಣಗಾಗಿಸಿದಂತೆ ಕಂಡುಬಂದಿತ್ತು. ಸತತ ಮಳೆಯಿಂದ ಜರ್ಝರಿತಗೊಂಡಿದ್ದ ಜನಜೀವನ ಸೋಮವಾರ ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಮೋಡಗಳ ಮಧ್ಯೆ ಮರೆಯಾಗಿದ್ದ ಸೂರ್ಯ ಸೋಮವಾರ ಇಣುಕಿದ್ದರಿಂದ, ಮಳೆನಾಡಿನಂತಾಗಿದ್ದ ಯಾದಗಿರಿ ಜಿಲ್ಲೆ ಬಿಸಿಲನಾಡ ಜನತೆ ಕೊಂಚ ಸಾವರಿಸಿಕೊಳ್ಳುವಂತಾಗಿತ್ತು.

ಆದರೆ, ಮಹಾರಾಷ್ಟ್ರದಲ್ಲಿನ ಮಳೆಯಿಂದಾಗಿ ಭೀಮಾ ನದಿಪಾತ್ರದಲ್ಲಿ ಹರಿಯುತ್ತಿದ್ದ ನೀರಿನ ಅರ್ಭಟ ಹಾಗೆಯೇ ಮುಂದುವರಿದಿತ್ತು. ಮಳೆ ನಿಂತು ಹೋದ ಮೇಲೆ ಪ್ರವಾಹದ ಭೀತಿ ಪೀಡಿತ ಪ್ರದೇಶಗಳಲ್ಲಿನ ಜನರ ಕಣ್ಗಳಲ್ಲಿ ಕಾಣುತ್ತಿತ್ತು. ಭೀಮೆ ಅಪಾಯದಮಟ್ಟ ಮೀರಿ ಹರಿಯುತ್ತಿದ್ದುದು ಇದಕ್ಕೆ ಸಾಕ್ಷಿಯಾಗಿತ್ತು.

ಹಾಗೆ ನೋಡಿದರೆ, ಭಾನುವಾರ 5.10 ಲಕ್ಷ ಕ್ಯೂಸೆಕ್‌ ಪ್ರಮಾಣದಷ್ಟು ನೀರನ್ನು ಭೀಮಾ ನದಿಗೆ ಹರಿಬಿಡಲಾಗಿತ್ತು. ಸೋಮವಾರ ಹೊರಹರಿವಿನ ಪ್ರಮಾಣ 4.75 ಲಕ್ಷ ಕ್ಯೂಸೆಕ್‌ಗಿಳಿದಿದ್ದರೂ, ಯಾದಗಿರಿ ನಗರದ ಭೀಮಾ ನದಿಗಂಟಿಕೊಂಡ ಬಡಾವಣೆಗಳು ಸೇರಿದಂತೆ, ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಮನೆ ಮಾಡಿತ್ತು. ಜಲಾವೃತಗೊಂಡಿದ್ದ ಬಡಾವಣೆಗಳಲ್ಲಿನ ಜನರನ್ನು ಭಾನುವಾರ ರಾತ್ರಿಯಿಂದ ಸೋಮವಾರ ನಸುಕಿನವರೆಗೂ ನಿವಾಸಿಗಳನ್ನು ಎಸ್‌ಡಿಆರ್‌ಎಫ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ನೆರವಿನ ಮೂಲಕ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಯಿತು. ಅನೇಕ ಮನೆಗಳು ಭಾಗಶ: ನೀರಲ್ಲಿ ಮುಳುಗಿದ್ದರಿಂದ ಹಾಗೂ ನೀರಿನಮಟ್ಟ ಹೆಚ್ಚತ್ತಿದ್ದ ಕಾರಣ ಕೆಲವರು ಮನೆಯ ಮಾಳಿಗೆಗಳ ಮೇಲೆ ಅಂಗೈಲಿ ಜೀವ ಹಿಡಿದು ರಾತ್ರಿ ಕಳೆದರು. ಜಿಲ್ಲಾಡಳಿತ, ಪೊಲೀಸ್‌ ಹಾಗೂ ರಕ್ಷಣಾ ಸಿಬ್ಬಂದಿ ಜೀವ ಪಣಕ್ಕಿಟ್ಟು ಪರಿಹಾರ ಹಾಗೂ ನೆರವಿನ ಕಾರ್ಯಾಚರಣೆಗಳಲ್ಲಿ ತೊಡಗಿದ್ದುದು ಕಂಡುಬಂತು.

====ಬಾಕ್ಸ್‌:1=====

* ಜಿಲ್ಲಾಡಳಿತ ಕೈಗೊಂಡ ಪರಿಹಾರ ಕ್ರಮಗಳು

ಮುಂಗಾರು ಹಂಗಾಮು ಪ್ರಾರಂಭವಾಗುವ ಮುಂಚೆಯೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಭೀಮಾ ಹಾಗೂ ಕೃಷ್ಣಾ ನದಿ ಪಾತ್ರದ ಗ್ರಾಮಗಳನ್ನು ಗುರುತಿಸಿದ್ದ ಜಿಲ್ಲಾಡಳಿತ, ಪ್ರವಾಹ ಸಂಭವಿಸಬಹುದಾದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡಂಗೂರ ಸಾರಿ, ಗ್ರಾಮಸ್ಥರಲ್ಲಿ ಪ್ರವಾಹದ ಕುರಿತು ಸೂಕ್ತ ಮುನ್ನೆಚ್ಚರಿಕೆ ನೀಡಿದ್ದರಿಂದ ಹೆಚ್ಚಿನ ಹಾನಿ ತಪ್ಪಲು ಕಾರಣವಾಗಿದೆ.

ಜಲಾವೃತ ಗ್ರಾಮಗಳ ಜನರನ್ನು ರಕ್ಷಣೆ ಮಾಡಲು ಬೋಟ್‌ಗಳನ್ನು ಸನ್ನದ್ಧವಾಗಿಟ್ಟುಕೊಳ್ಳುವಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಭೀಮಾ ನದಿ ಪಾತ್ರದ 35 ಗ್ರಾಮಗಳ ಜನ-ಜಾನುವಾರುಗಳ ಸುರಕ್ಷತೆಗಾಗಿ ಮುಂಜಾಗ್ರತಾಕ್ರಮವಾಗಿ 9 ಜಿಲ್ಲಾಮಟ್ಟದ ಅಧಿಕಾರಿಗಳನ್ನು ಹಾಗೂ ಕೃಷ್ಣಾ ನದಿ ಪಾತ್ರದ 45 ಗ್ರಾಮಗಳ ಜನ-ಜಾನುವಾರುಗಳ ಸುರಕ್ಷತೆಗಾಗಿ 9 ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿತ್ತು. ಈ ಅಧಿಕಾರಿಗಳು ತಮಗೆ ವಹಿಸಲಾದ ಗ್ರಾಮಗಳಲ್ಲಿದ್ದು, ಕರ್ತವ್ಯ ನಿರ್ವಹಿಸುತ್ತಿದ್ದರು.

ಇನ್ನು ನದಿಯ ನೀರು ಮನೆಗಳಿಗೆ ನುಗ್ಗಿ ನಿರಾಶ್ರಿತರಾಗಿರುವ ಗ್ರಾಮಸ್ಥರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದ್ದು, ಅವರಿಗೆ ಊಟ, ವಸತಿ, ಕುಡಿಯುವ ನೀರು ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನದಿ ನೀರಿನಿಂದ ರಸ್ತೆ ಸಂಪರ್ಕ ಸ್ಥಗಿತಗೊಂಡಿರುವ ಶಹಾಪುರ ತಾಲೂಕಿನ ರೋಜಾ ಎಸ್ ಶಿರವಾಳ, ಯಾದಗಿರಿ ತಾಲೂಕಿನ ತಳಕ ಗ್ರಾಮಗಳ ಜನರನ್ನು ಅಗ್ನಿಶಾಮಕ ಸಿಬ್ಬಂದಿಯವರು ಬೋಟ್ ಮೂಲಕ ರಕ್ಷಣೆ ಮಾಡಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 419 ಮನೆಗಳು ಹಾನಿಯಾಗಿದ್ದು, ₹ 60.93 ಲಕ್ಷ ಪರಿಹಾರವನ್ನು ಸಂಬಂಧಿಸಿದ ಫಲಾನುಭವಿಗಳಿಗೆ ಸಂದಾಯ ಮಾಡಲಾಗಿದೆ. ಮುಂದುವರಿದು ಪ್ರಸ್ತುತ ಮಳೆಯಿಂದ 104 ಮನೆಗಳು ಹಾನಿಯಾಗಿದ್ದು, ಜಂಟಿ ಸಮೀಕ್ಷೆ ಕಾರ್ಯ ಪೂರ್ಣಗೊಂಡ ನಂತರ ಪರಿಹಾರ ವಿತರಿಸಲಾಗುವುದು.

ಹುಣಸಗಿ ತಾಲೂಕಿನ ಮದಲಿಂಗನಾಳ ಗ್ರಾಮದಲ್ಲಿ ಒಬ್ಬ ಹಾಗೂ ಸುರಪುರ ತಾಲೂಕಿನ ಹಾಳ ಅಮ್ಮಾಪೂರ ಗ್ರಾಮದಲ್ಲಿ ಒಬ್ಬ ಸಿಡಿಲು ಬಡಿದು ಮರಣ ಹೊಂದಿದ್ದು, ಮೃತರ ವಾರಸುದಾರರಿಗೆ ತಲಾ ₹5 ಲಕ್ಷದಂತೆ ಒಟ್ಟು ₹10 ಲಕ್ಷ ಪರಿಹಾರ ಪಾವತಿಸಲಾಗಿರುತ್ತದೆ. ಜಿಲ್ಲೆಯಲ್ಲಿ ದೊಡ್ಡ/ಸಣ್ಣ ಜಾನುವಾರು ಹಾಗೂ ಕೋಳಿಗಳು ಸೇರಿ ಒಟ್ಟು 150 ಪ್ರಾಣ ಹಾನಿಯಾಗಿದ್ದು, ಒಟ್ಟು ₹ 7.95 ಲಕ್ಷ ಪರಿಹಾರ ಪಾವತಿಸಲಾಗಿದೆ. ಗೋಡೆ ಬಿದ್ದು 22 ಕುರಿಗಳು ಮರಣ ಹೊಂದಿದ್ದು, ಪರಿಹಾರ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ತುರ್ತು ರಕ್ಷಣಾ ಕ್ರಮಕೈಗೊಳ್ಳುವ ಸಂಬಂಧ ಜಿಲ್ಲೆಗೆ ಈಗಾಗಲೇ ಎನ್‌ಡಿಆರ್‌ಎಫ್‌ ತಂಡ ಆಗಮಿಸಿದೆ.

ಸತತ ಮಳೆಯಲ್ಲೂ ವಿದ್ಯುತ್

ಸಂಪರ್ಕ ಕಲ್ಪಿಸಿದ ಜೆಸ್ಕಾಂ.

ಕನ್ನಡಪ್ರಭ ವಾರ್ತೆ ಯಾದಗಿರಿ

ಸತತ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಭಾಗ ಜಲಾವೃತ್ತಗೊಂಡ ಪರಿಣಾಮ ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕವನ್ನು ಕೂಡಲೇ ಒದಗಿಸಿಕೊಡುವಲ್ಲಿ ಇಲ್ಲಿನ ಜೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ವಡಗೇರಾ, ಖಾನಾಪುರ ಮತ್ತು ಯಾದಗಿರಿ ನಗರ ವಿಭಾಗಳು ಸೇರಿದಂತೆ, ವಿವಿಧ ಸೆಕ್ಷನ್ ವ್ಯಾಪ್ತಿಯಲ್ಲಿ ಬರುವ ಅನೇಕ ಹಳ್ಳಿಗಳಲ್ಲಿನ ಟಿಸಿಗಳು ನೀರಿನಲ್ಲಿ ಮುಳುಗಿದ್ದರಿಂದ ಸಂಪೂರ್ಣ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಜೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳಾದ ಖಂಡಪ್ಪ ಸೋನವಾಣೆ ಹಾಗೂ ರಾಘವೇಂದ್ರ ಅವರು ಆಯಾ ವಿಭಾಗಗಳ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಪರ್ಯಾಯ ಟಿಸಿಗಳ ವ್ಯವಸ್ಥೆ ಮಾಡಿ ವಿದ್ಯುತ್ ಸಂಪರ್ಕ ನೀಡಲು ಸೂಚಿಸಿದರು.

ಅದರಂತೆ,, ಅಧಿಕಾರಿ ಮತ್ತು ಸಿಬ್ಬಂದಿ ಕಳೆದ ಭಾನುವಾರ ರಾತ್ರಿಯೇ ಸ್ಥಳಕ್ಕೆ ತೆರಳಿ ಅಲ್ಲಿನ ಪರಸ್ಥಿತಿ ಪರಿಶೀಲಿಸಿ ಕೂಡಲೇ ಬೇರೆ ಕಡೆಯಿಂದ ಟಿಸಿಗಳನ್ನು ತರಿಸಿ ಕೂಡಿಸುವ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ನಗರದ ವೀರಭದ್ರರೇಶ್ವರ ಬಡಾವಣೆಗಳಲ್ಲಿ 70 ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು, ಸಂಪೂರ್ಣ ಕತ್ತಲೆ ಆವರಿಸಿತ್ತು. ಅಲ್ಲಿಗೆ ಆಗಮಿಸಿದ ಎಇಇ ಮಾಕೇಂಡೇಶ್ವರ, ಶಾಖಾಧಿಖಾರಿ ಅಶೋಕ ಚವ್ಹಾಣ ಹಾಗೂ ಸಿಬ್ಬಂದಿ ಅಲ್ಲಿ 250 ಕೆವಿ ಟಿಸಿ ಕೂಡಿಸಿ ವಿದ್ಯುತ್ ಸಂಪರ್ಕಕಲ್ಪಿಸಿದರು.

ಠಾಣಾಗುಂದಿ 33 ಕೆವಿ ಸ್ಟೇಷನ್ ನೀರಿನಲ್ಲಿ‌ ಮುಳುಗಿದ್ದರಿಂದ ಕತ್ತಲಲ್ಲಿ ಮುಳುಗಿದ್ದ 32 ಹಳ್ಳಿಗಳಿಗೆ ಯಾದಗಿರಿ ನಾರ್ಥ್‌ 110 ಕೆವಿ ಸ್ಟೇಷನ್‌ನಿಂದ ಶಾಖಾಧಿಕಾರಿ ಶೇಖ್ ಮಹಿಬೂಬ್ ಅವರು ತಮ್ಮ ಸಿಬ್ಬಂದಿ ಸಹಾಯದಿಂದ ವಿದ್ಯುತ್ ಸಂಪರ್ಕ ಕಲ್ಪಿಸಿದರು. ವಡಗೇರಾ ವ್ಯಾಪ್ತಿಯಲ್ಲಿನ ನಾಯ್ಕಲ್, ಬಲ್‌ಕಲ್ ಗ್ರಾಮ ಸೇರಿದಂತೆಯೇ ವಿವಿಧ ಗ್ರಾಮಗಳು ಸಂಪೂರ್ಣ ಕತ್ತಲಲ್ಲಿ ಮುಳುಗಿದ್ದವು. ಅಲ್ಲೂ ಶಾಖಾಧಿಕಾರಿ ಥಾಮಸ್, ಎಇಇ ಮಾರ್ಕಂಡೆಶ್ವರ ಅವರು ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿ ಟಿಸಿಗಳನ್ನು ಚೆಕ್ ಮಾಡಿ ಬೇಕಾದ ವ್ಯವಸ್ಥೆ ಕಲ್ಪಿಸಿ ಬೆಳಕಿನ ವ್ಯವಸ್ಥೆ ಮಾಡಿದರು.

ಈ ಮೂಲಕ ಜಿಲ್ಲೆಯಲ್ಲಿ ಭಾರಿ ಮಳೆಯಾದರೂ ವಿದ್ಯುತ್‌ನ ತೊಂದರೆಯಾಗದಂತೇ ವ್ಯವಸ್ಥೆ ಮಾಡಿದ್ದು, ನಗರ ಮತ್ತು ಹಳ್ಳಿಗರಲ್ಲಿ ನಿಟ್ಟುಸಿರು ಮೂಡಿತ್ತು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ