ಕನ್ನಡಪ್ರಭ ವಾರ್ತೆ ಶಹಾಪುರ
ನಗರದಲ್ಲಿ 6077 ಕ್ವಿಂಟಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ, ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದಿಂದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಕೈಗೊಂಡರು.ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಪಡುಕೋಟೆ, ನಗರದಲ್ಲಿ 2.6 ಕೋಟಿ ರು. ಮೊತ್ತದ ಪಡಿತರ ಅಕ್ಕಿ ಪ್ರಕರಣ ಸೂಕ್ಷ್ಮವಾಗಿ ಗಮನಿಸಿದರೆ ಇದು ಮುಚ್ಚಿ ಹಾಕುವ ತಂತ್ರಗಾರಿಕೆ ನಡೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಪೊಲೀಸರು ನಿಜವಾದ ಅಪರಾಧಿಗಳನ್ನು ಹೊರಗೆ ಬಿಟ್ಟು ಅಮಾಯಕರನ್ನು ಬಂಧಿಸಿರುವುದು ಕಾನೂನು ಹದಗೆಟ್ಟಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಅಪರಾಧಿಗಳು ಎಷ್ಟೇ ಪ್ರಬಲವಾಗಿರಲಿ, ಯಾರದೇ ಬಲಗೈ ಬಂಟರೆ ಆಗಿರಲಿ. ಸಚಿವರು ಇದರ ಬಗ್ಗೆ ದೃಢ ನಿರ್ಧಾರ ತೆಗೆದುಕೊಂಡು ನಿಜವಾದ ಅಪರಾಧಿಗಳಿಗೆ ಬಂಧಿಸಲು ಸೂಕ್ತ ನಿರ್ದೇಶನ ನೀಡಬೇಕು. ಈ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸುವವರಿಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸಂಚಾಲಕ ಭೀಮಣ್ಣ ಶಖಾಪುರ ಮಾತನಾಡಿ, ಈ ಪ್ರಕರಣ ನಡೆದು ಎರಡು, ಮೂರು ತಿಂಗಳಾದರೂ ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಿದರೂ ಕೂಡ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದ ಅಕ್ಕಿ ಅಕ್ರಮ ಪ್ರಕರಣ ನಡೆದಿದ್ದು, ಇದನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ತಾಲೂಕಾಧ್ಯಕ್ಷ ಸಿದ್ದು ಪಟ್ಟೇದಾರ್, ಶ್ರೀದೇವಿ ಕಟ್ಟಿಮನಿ, ಮಹಾದೇವಸ್ವಾಮಿ, ವಿಜಯ ಸಿಂಗ್, ಅಂಬರೀಶ್ ತೆಲ್ಗೂರ್, ಚಂದ್ರು ಹಲಿಗಿ, ಸದ್ದಾಮ್, ಬಾಪುಗೌಡ, ಶಾಂತು ಗುತ್ತೆದಾರ್, ಬಾಬು ಹೋತಪೇಟ ಇತರರಿದ್ದರು.
ಅಕ್ಕಿ ನಾಪತ್ತೆ ಪ್ರಕರಣ ತನಿಖೆಗೆ ಒಪ್ಪಿಸಿದಾಗ ಮಾತ್ರ ನಿಜವಾದ ಆರೋಪಿ ಪತ್ತೆಹಚ್ಚಲು ಸಾಧ್ಯ. ಆರೋಪಿಗಳು ಎಷ್ಟೇ ಪ್ರಬಲವಾಗಿರಲಿ, ರಾಜಕೀಯ ವ್ಯಕ್ತಿಯ ಬಲಗೈ ಬಂಟರಾಗಿರಲಿ ಮುಲಾಜಿಲ್ಲದೆ ಬಂಧಿಸಬೇಕು. ಸಿಐಡಿ ತನಿಖೆಗೆ ಒಪ್ಪಿಸವವರೆಗೂ ಈ ಹೋರಾಟ ನಿಲ್ಲುವುದಿಲ್ಲ.ಬಸವರಾಜ ಪಡುಕೋಟೆ. ರಾಜ್ಯಾಧ್ಯಕ್ಷರು, ನಮ್ಮ ಕರ್ನಾಟಕ ಸೇನೆ ಬೆಂಗಳೂರು.