ಕನ್ನಡಪ್ರಭ ವಾರ್ತೆ ಗುರುಮಠಕಲ್ ಕುರುಬ ಸಮುದಾಯ ಎಸ್ಟಿಗೆ ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬ ಗೊಂಡ ಸಂಘದಿಂದ, ಲಿಂಗ ಬೀರದೇವರ ನೇತೃತ್ವದಲ್ಲಿ ಕುರುಬರೇ ಗೊಂಡರು, ಗೊಂಡರೆ ಕುರುಬರು ಎಂದು ಘೋಷವಾಕ್ಯದೊಂದಿಗೆ ಪಟ್ಟಣದ ನಗರೇಶ್ವರ ಗುಡಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣದ ಮೂಲಕ ತಹಸೀಲ್ದಾರ್ ಕಚೇರಿವರೆಗೆ ತಲುಪಿ, ಬೃಹತ್ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.
ಸಂಘದ ತಾಲೂಕಾಧ್ಯಕ್ಷ ಮಲ್ಲು ಪೂಜಾರಿ ತೋರಣತಿಪ್ಪ ಮಾತನಾಡಿ, ಕುರುಬರ ಗೊಂಡರು, ಗೊಂಡರೆ ಕುರುಬರು ಎಂದು ಪರಿಗಣಿಸಿ ಎಸ್ಟಿಗೆ ಸೇರ್ಪಡೆ ಮಾಡಬೇಕು. ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಗೊಂಡರು ಕುರುಬರು ಎರಡು ಒಂದೇ ಪದಗಳಾಗಿದ್ದು, ರಾಜ್ಯ ಸರ್ಕಾರವು 1996-97ಹಾಗೂ 2014ರಲ್ಲಿ ಕುರುಬ ಗೊಂಡ ಸಮಾಜಕ್ಕೆ ಎಸ್ಟಿಯಲ್ಲಿ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೆ, ಕೇಂದ್ರ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ್ ಮಾತನಾಡಿ, ಕಳೆದ 70 ವರ್ಷಗಳಲ್ಲಿ ಅನೇಕ ಸರ್ಕಾರಗಳು ಅಧಿಕಾರಕ್ಕೆ ಬಂದುಹೋಗಿವೆ. ಆದರೆ, ಕುರುಬ ಸಮಾಜಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾಗಿವೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟಿಷರ ಆಡಳಿತದಲ್ಲಿ ರಾಣಿ ಎಲಿಜೆಬತ್ ಕಾಲದಲ್ಲಿ 1936ರಲ್ಲಿ ಕುರುಬ ಸಮಾಜ ಎಸ್ಟಿಯಲ್ಲಿತ್ತು. ಆದರೆ, ಕೆಲ ಕುತಂತ್ರಿಗಳಿಂದ ನಮಗೆ ಅನ್ಯಾಯವಾಗಿದೆ. ಕಳೆದ 40-50 ವರ್ಷಗಳಿಂದ ನಮ್ಮ ಹಕ್ಕು ನಮಗೆ ನೀಡದೆ ಬಿಜೆಪಿ, ಕಾಂಗ್ರೆಸ್ ಅನ್ಯಾಯ ಮಾಡುತ್ತಾ ಬಂದಿವೆ ಎಂದರು.
ಸಮಾಜದ ಮುಖಂಡರಾದ ಸಿದ್ದನಗೌಡ ವಡಗೇರಾ, ಮರಿಗೌಡ ಹುಲಕಲ್, ವಿಶ್ವನಾಥ್ ನೀಲಹಳ್ಳಿ, ಚಂದ್ರಶೇಖರ್ ವಾರದ, ಭೀಮಶೆಪ್ಪ ಕಣೆಕಲ್, ಪ್ರಭುಲಿಂಗ ವಾರದ, ಚನ್ನಕೇಶವ, ಬೀರೇಶ್, ವೆಂಕೋಬ ತುರುಕನ್ ದೊಡ್ಡಿ, ವೆಂಕಟೇಶ್ ಕೊಂಕಲ್ ಇತರರಿದ್ದರು.