ಕನ್ನಡಪ್ರಭ ವಾರ್ತೆ ಯಾದಗಿರಿ
ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಸುಪ್ರಸಿದ್ಧ ಮಲ್ಲಯ್ಯನ ಜಾತ್ರೆ ಅಂಗವಾಗಿ ಕಳೆದೆರಡು ದಿನಗಳಿಂದ ಭಕ್ತಸಾಗರ ಮೈಲಾಪುರದತ್ತ ಹರಿದು ಬರತೊಡಗಿತ್ತು.
ಹೊನ್ನೆಕೆರೆಯಲ್ಲಿ ಮಿಂದೆದ್ದು ಬಂದ ಭಕ್ತರು, ಮಲ್ಲಯ್ಯನ ದರುಶನಕ್ಕೆ ಬೆಟ್ಟ ಏರಿ ಹರಕೆ ತೀರಿಸಿದರು. ಏಳು ಕೋಟಿಗೆ ಏಳು ಕೋಟಿ.. ಉಘೇ ಘೋಷಣೆಗಳು ಮುಗಿಲು ಮುಟ್ಟಿದ್ದವು. ಭಂಡಾರದ ಬಣ್ಣದಿಂದಾಗಿ ಇಡೀ ವಾತಾವರಣ ಅರಿಶನಮಯವಾಗಿತ್ತು, ಭಕ್ತರ ಜೈಕಾರಗಳು ಪ್ರತಿಧ್ವನಿಸುತ್ತಿದ್ದವು.ಪ್ರತಿ ವರ್ಷ ಮಕರ ಸಂಕ್ರಾಂತಿ ಹಬ್ಬದ ದಿನದಂದು ನಡೆಯುವ ಅದ್ಧೂರಿ ಜಾತ್ರೆ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು. ಹೊನ್ನಕೆರೆಯಿಂದ ಉತ್ಸವ ಮೂರ್ತಿ ತೀರ್ಥಾಭಿಷೇಕದ ನಂತರ ಬರುವ ಪಲ್ಲಕ್ಕಿ ಮೇಲೆ ಹರಕೆ ಕುರಿಗಳ ಎಸೆಯುವದನ್ನು ತಡೆಯಲು ಆಡಳಿತ ಭಾರಿ ಬಂದೋಬಸ್ತ್ ಮಾಡಿದ್ದರಿಂದ ಇದಕ್ಕೆ ಕಡಿವಾಣ ಬಿದ್ದಂತಾಗಿತ್ತು. ಕುರಿ ಉಣ್ಣೆ, ಹಣ್ಣು ಹಾಗೂ ಜೋಳದ ತೆನೆಯ ದಂಟುಗಳ ಎಸೆದು ಭಕ್ತರು ತೃಪ್ತಿಪಟ್ಟುಕೊಂಡರು.
ಮೂವರು ಡಿವೈಎಸ್ಪಿಗಳು, 17 ಜನ ಸಿಪಿಐಗಳು, 36 ಪಿಎಸ್ಐ, 600 ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆಂದು ನಿಯೋಜನೆ ಮಾಡಲಾಗಿತ್ತು. ಬಸ್, ರೈಲು ಹಾಗೂ ವಿವಿಧ ವಾಹನಗಳ ಮೂಲಕ ಜಾತ್ರೆಯಲ್ಲಿ ಪಾಲ್ಗೊಳ್ಳಲು ಭಕ್ತರು ಯಾದಗಿರಿಗೆ ಆಗಮಿಸಿದ್ದರು.
ಮೈಲಾಪುರದ ಜಾತ್ರೆ ಮತ್ತೊಂದು ವಿಶೇಷತೆ ಸರಪಳಿ ಹರಿಯುವುದು. ಅಲ್ಲಿ ಪೂಜಾರಿ ಸರಪಳಿ ಹರಿಯುವ ದೃಶ್ಯವನ್ನು ವೀಕ್ಷಿಸಲು ಭಕ್ತಸಾಗರ ಸೇರಿರುತ್ತದೆ. ಇದು ದೇಗುಲಕ್ಕೆ ಹೋಗುವ ಮಾರ್ಗಮಧ್ಯೆ ಬರುತ್ತದೆ. ಮಧ್ಯಾಹ್ನ ಸರಪಳಿ ಹರಿಯುತ್ತಲೇ ಜನರ ಹರ್ಷೋದ್ಗಾರಗಳು ಮುಗಿಲು ಮುಟ್ಟಿದ್ದವು.