ಕನ್ನಡಪ್ರಭ ವಾರ್ತೆ ಬೆಳ್ತಂಗಡಿಮೈಸೂರು ಜಿಲ್ಲೆ ಕೃಷ್ಣರಾಜ ನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶಂಕರ ಭಾರತೀ ಸ್ವಾಮೀಜಿ ಮಂಗಳವಾರ ಉಜಿರೆಗೆ ಆಗಮಿಸಿದ್ದು ಉಜಿರೆ ಎಸ್‌ಡಿಎಂ ಕಾಲೇಜ್ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ ಭಟ್ ಅವರ ಪೆರ್ಲ ರಸ್ತೆಯ ಮನೆ ‘ಈಶಾವಾಸ್ಯಮ್’ನಲ್ಲಿ ಮೊಕ್ಕಾಂ ಹೂಡಿದ್ದಾರೆ. ಅವರು ಶುಕ್ರವಾರ ಹಟ್ಟಿಅಂಗಡಿಗಾಗಿ ಶೃಂಗೇರಿಗೆ ತೆರಳಲಿದ್ದಾರೆ. ಬುಧವಾರ ಬೆಳಗ್ಗೆ ಶ್ರೀಗಳು ಶ್ರೀಚಕ್ರ ಪೂಜೆ ನೆರವೇರಿಸಿ ಭಕ್ತಾದಿಗಳಿಗೆ ತೀರ್ಥಪ್ರಸಾದ, ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಈ ಸಂದರ್ಭ ಪ್ರಾಸ್ತಾವಿಕ ಮಾತನಾಡಿದ ಡಾ. ಶ್ರೀಧರ ಭಟ್ ಅವರು, ಸ್ವಾಮೀಜಿ ಶ್ರೀ ಶಂಕರಾಚಾರ್ಯರ ತತ್ವೋಪದೇಶಗಳನ್ನು ಜನ ಮಾನಸಕ್ಕೆ ತಲುಪಿಸಿ, ರಾಷ್ಟ್ರೀಯ ಭಾವೈಕ್ಯ ಮೂಡಿಸುವಂತಹ ಅನೇಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರೀ ಸ್ತೋತ್ರ ಮಹಾಭಿಯಾನ, ವಿದ್ಯಾರ್ಥಿಗಳಿಗಾಗಿ ವಿವೇಕದೀಪಿನೀ ಮಹಾಭಿಯಾನ ಮುಂತಾದ ಹತ್ತು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಎಂದರು.ಕಳೆದ ನಾಲ್ಕೈದು ವರ್ಷಗಳಲ್ಲಿ ದೇಶದ ಮೂಲೆ ಮೂಲೆಗಳಿಗೂ ಸಂಚರಿಸಿ, ಆಧ್ಯಾತ್ಮಿಕ ಶಿಬಿರಗಳನ್ನು ಆಯೋಜಿಸಿ, ಶಂಕರರ ಉಪಪದೇಶಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಾಚೀನವಾದ ವೇದಾಂತ ಶಾಸ್ತ್ರ ಮತ್ತು ಆಧುನಿಕ ವೈಜ್ಞಾನಿಕ ದೃಷ್ಟಿಕೋನಗಳ ನಡುವೆ ಸಮತೋಲನ ಸಾಧಿಸಲು ಸಾಂಪ್ರದಾಯಿಕ ವಿದ್ವಾಂಸರು ಮತ್ತು ವೈಜ್ಞಾನಿಕ ಸಮುದಾಯವನ್ನು ಒಟ್ಟುಗೂಡಿಸುತ್ತಿದ್ದಾರೆ ಎಂದರು. ಪ್ರಸ್ತುತ ಶ್ರೀ ಶಂಕರಾಚಾರ್ಯರ ಸಾಧನೆ ಮತ್ತು ಅವರು ದೇಶಾದ್ಯಂತ ಪ್ರವಾಸ ಮಾಡಿದ ಕ್ಷೇತ್ರಗಳು ಹಾಗೂ ಅಲ್ಲಿಯ ಐತಿಹ್ಯಗಳನ್ನು ಸಂಗ್ರಹಿಸಿ ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ‘ಶಾಂಕರ ಜ್ಯೋತಿ ಪ್ರಕಾಶ’ ಹೆಸರಿನಲ್ಲಿ ಯೋಜನೆ ರೂಪಿಸಿದ್ದಾರೆ ಎಂದು ವಿವರಿಸಿದರು.