ಕೊಡಗಿನಲ್ಲಿ ಬಿಎಸ್‌ಎನ್‌ಎಲ್‌ ಸೇವೆ ಸರಿಪಡಿಸಲು ಕೇಂದ್ರ ಸಚಿವರಿಗೆ ಯದುವೀರ್‌ ಮನವಿ

KannadaprabhaNewsNetwork |  
Published : Jun 22, 2025, 01:18 AM IST
ಚಿತ್ರ :  18ಎಂಡಿಕೆ1 : ಕೊಡಗಿನಲ್ಲಿ ಬಿಎಸ್‌ಎನ್‌ಎಲ್‌ ಸೇವೆ ಸರಿಪಡಿಸಲು ಕೇಂದ್ರ ಸಚಿವರಿಗೆ ಯದುವೀರ್‌ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಕೊಡಗಿನಲ್ಲಿ ಹೆಚ್ಚಾಗಿರುವ ಬಿಎಸ್‌ಎನ್‌ಎಲ್‌ ಜಾಲ ವ್ಯವಸ್ಥೆಯನ್ನು ಸರಿಪಡಿಸಬೇಕು. ಈ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು.

ಕನ್ನಡಪರ್ಭ ವಾರ್ತೆ ಮಡಿಕೇರಿ

ಕೊಡಗಿನಲ್ಲಿ ಹೆಚ್ಚಾಗಿರುವ ಬಿಎಸ್‌ಎನ್‌ಎಲ್‌ ಜಾಲ ವ್ಯವಸ್ಥೆಯನ್ನು ಸರಿಪಡಿಸಬೇಕು. ಈ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಯದುವೀರ್‌, ಕೊಡಗಿನಲ್ಲಿ ಈಗ ಅತ್ಯಂತ ತುರ್ತಾಗಿ ಈ ಸಮಸ್ಯೆ ಪರಿಹರಿಸಬೇಕು ಎಂದರು.

ಈ ಸಂಬಂಧ ಯದುವೀರ್‌ ಅವರು ಪತ್ರವೊಂದನ್ನು ಸಚಿವರಿಗೆ ನೀಡಿದ ನಂತರ ಮಾಧ್ಯಮ ಹೇಳಿಕೆ ನೀಡಿದ್ದಾರೆ.

ಕೊಡಗಿನಲ್ಲಿ ಇತ್ತೀಚೆಗೆ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದ ವಿದ್ಯುತ್‌ ಕಂಬಗಳು, ಟೆಲಿಫೋನ್‌ ಕಂಬಗಳು ನೆಲಕ್ಕುರುಳಿವೆ. ಅವುಗಳ ದುರಸ್ತಿಗೂ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೊಡಗಿನಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸೇವೆ ಅತ್ಯಂತ ಕಳಪೆಯಾಗಿದೆ. ಇಲ್ಲಿ ಟವರ್‌ಗಳನ್ನು ಬದಲಿಸಬೇಕು, ಉತ್ತಮ ಕನೆಕ್ಟೆವಿಟಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಈ ಬಗ್ಗೆಯೂ ಸಚಿವರ ಗಮನಕ್ಕೆ ತರಲಾಗಿದೆ ಎಂದು ಸಂಸದರು ವಿವರಿಸಿದ್ದಾರೆ.

ಕಳಪೆ ನೆಟ್‌ವರ್ಕ್ ಸಂಪರ್ಕದಿಂದ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ, ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅಥವಾ ಡಿಜಿಟಲ್ ಕೋರ್ಸ್‌ಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೇ ಸರ್ಕಾರಿ ಕಚೇರಿಗಳ ದಿನನಿತ್ಯದ ಕೆಲಸಗಳಿಗೂ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.

ಕೊಡಗಿನಲ್ಲಿ ನನ್ನ ಗಮನಕ್ಕೆ ಬಂದಿರುವ ಪ್ರಮುಖ ವಿಷಯ ಎಂದರೆ ಪವರ್‌ ಬ್ಯಾಕ್‌ ಅಪ್‌. ಬ್ಯಾಕ್‌ ಅಪ್‌ ಬ್ಯಾಟರಿಗಳು ಸಂಪೂರ್ಣ ನಿಷ್ಕ್ರಿಯವಾದರೆ, ಅವುಗಳನ್ನು ಮತ್ತೆ ಸರಿಪಡಿಸಲು ಸಾಕಷ್ಟು ಸಮಯ ಮತ್ತು ಪ್ರಯಾಸದ ಕೆಲಸವಾಗಿದೆ. ಕಳೆದ ಮಾರ್ಚ್‌ 8ರಂದು ದಿಶಾ ಸಭೆ ನಡೆಸಿದ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿ ಎಲ್ಲವನ್ನೂ ಸರಿಪಡಿಸಲು ತಿಳಿಸಿದ್ದೆ. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಯದುವೀರ್‌ ವಿವರಿಸಿದ್ದಾರೆ.

ಕೊಡಗಿನಲ್ಲಿರುವ ಈ ಸಮಸ್ಯೆಯನ್ನು ಅತ್ಯಂತ ತ್ವರಿತವಾಗಿ ಪರಿಹರಿಸಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಈ ಕುರಿತು ಸಚಿವರು ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸುವ ಭರವಸೆ ನೀಡಿದ್ದಾರೆ ಎಂದು ಸಂಸದ ಯದುವೀರ್‌ ಒಡೆಯರ್‌ ಮಾಹಿತಿ ನೀಡಿದ್ದಾರೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ