ವಿಘ್ನೇಶ್ ಎಂ. ಭೂತನಕಾಡು
ಲೋಕಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲೊಂದಾದ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರಗಳಿಂದ 73,859 ಮತಗಳ ಲೀಡ್ ದೊರಕಿದೆ.
ಕೊಡಗಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಕೈ ಕೊಟ್ಟಿರುವುದು ಕಂಡುಬಂದಿದೆ. ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಅವರಿಗೆ 208,206 ಮತಗಳು ಹಾಗೂ ಕಾಂಗ್ರೆಸ್ ನ ಎಂ. ಲಕ್ಷ್ಮಣ್ ಅವರಿಗೆ 1,34,347 ಮತಗಳು ದೊರಕಿವೆ.ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯ ಯದುವೀರ್ ಒಡೆಯರ್ 7,95,503 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಎಂ. ಲಕ್ಷ್ಮಣ್ 6,56,241 ಮತಗಳನ್ನು ಪಡೆದಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಯದುವೀರ್ 1,08,402, ಲಕ್ಷ್ಮಣ್ 66,994 ಮತಗಳನ್ನು ಗಳಿಸಿ ಬಿಜೆಪಿಗೆ 41,408 ಮತಗಳ ಅಂತರ ಕಂಡುಬಂದಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಯದುವೀರ್ 99,804 ಮತಗಳು, ಲಕ್ಷ್ಮಣ್ 67,353 ಮತಗಳನ್ನು ಗಳಿಸಿದ್ದಾರೆ. 32,451 ಮತಗಳ ಅಂತರ ಕಂಡುಬಂದಿದೆ.
2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ ಸಿಂಹ ಮಡಿಕೇರಿ ಕ್ಷೇತ್ರದಲ್ಲಿ 43,976 ಹಾಗೂ ವಿರಾಜಪೇಟೆಯಲ್ಲಿ 41,497 ಮತ ಗಳಿಸಿ ತಮ್ಮ ವಿರುದ್ಧ ಸ್ಪರ್ಧಿಸಿದ್ದ ಮೈತ್ರಿ ಕೂಟದ ಅಭ್ಯರ್ಥಿ ವಿಜಯಶಂಕರ್ ವಿರುದ್ಧ ಗೆಲುವಿನ ಅಂತರ ಹೆಚ್ಚಿಸಿಕೊಂಡಿದ್ದರು. ವಿಜಯಶಂಕರ್ ಮಡಿಕೇರಿ ಕ್ಷೇತ್ರದಲ್ಲಿ 58,185 ಹಾಗೂ ವಿರಾಜಪೇಟೆಯಲ್ಲಿ 54,738 ಮತ ಗಳಿಸಿ ಎರಡೂ ಕ್ಷೇತ್ರಗಳಲ್ಲಿ ಒಟ್ಟು 1,12,923 ಮತಗಳನ್ನು ಪಡೆದಿದ್ದರು. ಪ್ರತಾಪ ಸಿಂಹ ಎರಡೂ ಕ್ಷೇತ್ರಗಳಲ್ಲಿ 1,98,396 ಮತಗಳನ್ನು ಗಳಿಸಿದ್ದರು.
ದೇಶದಲ್ಲಿ ಬಿಜೆಪಿಗೆ ಸ್ಥಾನಗಳು ಸ್ವಲ್ಪ ಕಡಿಮೆಯಾಗಿವೆ. ಆದರೂ ಅತ್ಯಧಿಕ ಮತ ಪಡೆದ ದೊಡ್ಡ ಪಕ್ಷ ಬಿಜೆಪಿ. ಯುಪಿ, ಪಶ್ಚಿಮ ಬಂಗಾಲ, ಮಹಾರಾಷ್ಟ್ರದಲ್ಲಿ ಪಕ್ಷಕ್ಕೆಪೆಟ್ಟು ಬಿದ್ದಿದೆ. ಬಿಜೆಪಿಗೆ ಮಡಿಕೇರಿ ಕ್ಷೇತ್ರದಲ್ಲಿ 2 ಸಾವಿರ ಹಾಗೂ ವಿರಾಜಪೇಟೆಯಲ್ಲಿ 9 ಸಾವಿರ ಮತಗಳ ಅಂತರ ಕಂಡು ಬಂದಿದೆ. ಕೊಡಗಿನಲ್ಲಿ ಇಬ್ಬರೂ ಕಾಂಗ್ರೆಸ್ ಶಾಸಕರು ಗೆದ್ದಿದ್ದರೂ ಕೂಡ ಅವರನ್ನು ಜನ ತಿರಸ್ಕಾರ ಮಾಡಿದ್ದಾರೆ. ಈ ಬಾರಿಯೂ ಸರ್ಕಾರ ನಮ್ಮದೇ ಬರಲಿದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ.
..............
-ರವಿ ಕಾಳಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ