ಯಕ್ಲಾಸಪುರ ಜನಕ್ಕೆ ಕಿರಿಕಿರಿಯಾದ ಜಿಲ್ಲಾಡಳಿತ ಭವನ

KannadaprabhaNewsNetwork |  
Published : Feb 10, 2025, 01:45 AM IST
09ಕೆಪಿಆರ್‌ಸಿಆರ್01 | Kannada Prabha

ಸಾರಾಂಶ

ಸಮೀಪದ ಯಕ್ಲಾಸಪುರ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಿರುವ ಜಿಲ್ಲಾಡಳಿತ ಭವನದಿಂದಾಗಿ ಕೇವಲ ಜಿಲ್ಲೆ ಸಾರ್ವಜನಿಕರಿಗೆ, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರಿಗಷ್ಟೇ ಅಲ್ಲ, ಅಲ್ಲಿಯ ಗ್ರಾಮಸ್ಥರಿಗೂ ಹಲವಾರು ರೀತಿಯಲ್ಲಿ ಕಿರಿಕಿರಿ ಶುರುವಾಗಿದೆ.

ವಾಹನಗಳ ಸಂಚಾರ ದಟ್ಟಣೆ, ಧೂಳು, ಶಬ್ಧ ಮಾಲಿನ್ಯ ಹೆಚ್ಚಳ ಆರೋಪ । ಬಹಿರ್ದೆಸೆಗೂ ಸಮಸ್ಯೆ, ಏನು ಮಾಡದ ಸ್ಥಿತಿಯಲ್ಲಿ ಜನರು

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಸಮೀಪದ ಯಕ್ಲಾಸಪುರ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಿರುವ ಜಿಲ್ಲಾಡಳಿತ ಭವನದಿಂದಾಗಿ ಕೇವಲ ಜಿಲ್ಲೆ ಸಾರ್ವಜನಿಕರಿಗೆ, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರಿಗಷ್ಟೇ ಅಲ್ಲ, ಅಲ್ಲಿಯ ಗ್ರಾಮಸ್ಥರಿಗೂ ಹಲವಾರು ರೀತಿಯಲ್ಲಿ ಕಿರಿಕಿರಿ ಶುರುವಾಗಿದೆ.

ಹಿಂದಿನ ನಗರಸಭೆಯ ವಾರ್ಡ್‌ ನಂ.34 ವ್ಯಾಪ್ತಿಗೆ ಯಕ್ಲಾಸಪುರ ಗ್ರಾಮವು ಬರುತ್ತಿದ್ದು, ಬೆಳೆಯುತ್ತಿರುವ ನಗರಕ್ಕೆ ತಕ್ಕಂತೆ ಜಲ್ಲಾಡಳಿತ ಭವನವನ್ನು ಇದೇ ಗ್ರಾಮದ ಸಮೀಪದಲ್ಲಿ ನಿರ್ಮಿಸಲಾಗಿದೆ. ಆದರೆ ಇಷ್ಟು ದಿನ ನೆಮ್ಮದಿಯಿಂದ ಇದ್ದ ಗ್ರಾಮಸ್ಥರಿಗೆ ಹೊಸ ಜಿಲ್ಲಾಡಳಿತ ಭವನಕ್ಕೆ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಹಲವಾರು ಇಲಾಖೆಗಳು ಸ್ಥಳಾಂತರಗೊಂಡ ಬಳಿಕ ಸಮಸ್ಯೆಗಳು ಎದುರಾಗುತ್ತಿವೆ.

ಇಷ್ಟು ದಿನ ಅಷ್ಟಾಗಿ ವಾಹನ ದಟ್ಟಣೆ, ಧೂಳು ಇಲ್ಲದೇ ಇದ್ದ ಯಕ್ಲಾಸಪುರ ಮಂದಿ ಇದೀಗ ಕಾರು, ದ್ವಿಚಕ್ರ ವಾಹನ, ಆಟೋ, ಸಾರಿಗೆ ಬಸ್‌ ಸಂಚಾರವು ನಿದಾನಗತಿಯಲ್ಲಿ ಹೆಚ್ಚಾಗುತ್ತಿರುವುದರಿಂದ ಶಬ್ಧ, ವಾಯುಮಾಲಿನ್ಯ, ವಾಹನಗಳ ಕಿರಿಕಿರಿಗೆ ಬೇಸತ್ತು ಹೋಗುತ್ತಿದ್ದಾರೆ.

ಬಹಿರ್ದೆಸೆಗೂ ಸಮಸ್ಯೆ:

ಗ್ರಾಮದ ಹೊರವಲಯದ ರಸ್ತೆಯಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಿದ್ದರಿಂದ ಈ ಮಾರ್ಗದಲ್ಲಿಯೇ ಊರಿನ ಜನ ಬಹಿರ್ದೇಸೆಗೆ ಹೋಗುತ್ತಿದ್ದರು ಇದೀಗ ಜನರ ಓಡಾಟ ಹೆಚ್ಚಾಗಿದ್ದರಿಂದ ಮಕ್ಕಳು,ಮಹಿಳೆಯರು ಹಾಗೂ ಪುರುಷರು ಬಹಿರ್ದೆಸೆಗೆ ಹೋಗಲು ಸಮಸ್ಯೆ ಅನುಭವಿಸುವಮಂತಾಗಿದೆ. ನಗರದ ಸಮೀಪದಲ್ಲಿಯೇ ಯಕ್ಲಾಸಪುರ ಗ್ರಾಮವಿದ್ದರು ಸಹ ವೈಯಕ್ತಿಕ ಶೌಚಾಲಯ ಬಳಕೆ ಅಪರೂಪವಾಗಿದದರಿಂದ ಬಹಿರ್ದೇಸೆ ಪದ್ಧತಿ ಜೀವಂತವಾಗಿದ್ದು ಇದೀಗ ಜಿಲ್ಲಾಡಳಿತ ಭವನದಿಂದಾಗಿ ಈ ಮಾರ್ಗದಲ್ಲಿ ಹಗಲು-ರಾತ್ರಿ ಜನರ ಓಡಾಟವು ಜಾಸ್ತಿಯಾಗುತ್ತಿದ್ದು ಮುಂದೆ ಏನು ಮಾಡಬೇಕು ಎನ್ನುವ ಅರ್ಥವಾಗದ ಸ್ಥಿತಿಯಲ್ಲಿ ನಿವಾಸಿಗಳಿದ್ದಾರೆ.

ಮೂಲೆಗುಂಪಾದ ಸಾಧಕ-ಬಾಧಕ ಚರ್ಚೆ:

ಜಿಲ್ಲೆಯ ಆಡಳಿತ ವರ್ಗದ ವ್ಯವಸ್ಥೆಯೇ ಬದಲಾಗಿರುವ ಈ ತರುಣದಲ್ಲಿ ಹೊಸ ಜಿಲ್ಲಾಡಳಿತ ಭವನದಲ್ಲಿ ಯಾವ ರೀತಿಯಾಗಿ ಕೆಲಸ ಕಾರ್ಯಗಳು ಸಾಗುತ್ತಿವೆ? ಇನ್ನು ಏನು ಸವಲತ್ತುಗಳನ್ನು ಒದಗಿಸಬೇಕು? ಅಧಿಕಾರಿ, ಸಿಬ್ಬಂದಿ ಹಾಗೂ ನೌಕರರ ಸಮಸ್ಯೆಗಳೇನು? ಜನರಿಗೆ ಎದುರಾಗಿರುವ ಸಮಸ್ಯೆಗಳನ್ನು ಯಾವ ರೀತಿಯಾಗಿ ಪರಿಹರಿಸಬೇಕು ಎಂಬುವುದು ಸೇರಿದಂತೆ ತಲೆ ಎತ್ತಿರುವ ಹತ್ತು ಹಲವು ರೀತಿಯ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಲು ಜಿಲ್ಲೆಜನಪ್ರತಿನಿಧಿಗಳು, ಅಧಿಕಾರಿಗಳ ಆಸಕ್ತಿ ತೋರದಿರುವುದು ಎದ್ದು ಕಾಣುತಿದೆ. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌, ಜಿಲ್ಲೆ ಸಚಿವ ಎನ್‌.ಎಸ್‌.ಬೋಸರಾಜು, ಶಾಸಕರು, ಎಂಎಲ್ಸಿ, ಎಂಪಿಗಳು ಈ ಬಗ್ಗೆ ಮುಕ್ತ ಸಂವಾದ ನಡೆಸದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿರುವ ವಿಷಯವನ್ನು ಮೂಲೆಗುಂಪಾಗಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಗ್ರಾಮಸ್ಥರ ಮನವಿ:

ಹೊಸ ಕಟ್ಟಡದಲ್ಲಿ ಜಿಲ್ಲಾಡಳಿತ ಭವನವೇನು ಕಾರ್ಯಾರಂಭಗೊಂಡಿದೆ ಆದರೆ ಇದರಿಂದಾಗಿ ಸಮೀಪದ ಯಕ್ಲಾಸಪುರ ಜನರ

ಅಭಿಪ್ರಾಯಗಳು, ಎದುರಾಗಿರುವ ಸವಾಲು, ಸಮಸ್ಯೆಗಳು, ಪರಿಹಾರ ಹಾಗೂ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಆಲೋಚನೆ ಮಾಡಬೇಕು ಎಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಕೆಪಿ ಮುಂದೆ ಸಿಬ್ಬಂದಿ ಅಳಲು

ಕನಿಷ್ಠ ಮಟ್ಟದ ಸವಲತ್ತುಗಳನ್ನು ಕಲ್ಪಿಸದೇ ಹೊಸ ಜಿಲ್ಲಾಡಳಿತ ಭವನ ಕಾರ್ಯಾರಂಭಗೊಳಿಸಿದ್ದರಿಂದ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಓಡಾಟಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ. ಇಷ್ಟೇ ಅಲ್ಲದೇ ಕುಡಿಯುವ ನೀರು, ಹೋಟೆಲ್‌ ಇತರೆ ವ್ಯವಸ್ಥೆ ಇಲ್ಲದಕ್ಕೆ ನೌಕರರು ಸಮಸ್ಯೆ ಅನುಭವಿಸುವಂತಾಗಿದೆ. ಬೇಸಿಗೆ ಆರಂಭಗೊಂಡಿದ್ದರಿಂದ ಹೆಚ್ಚಾಗಿ ಓಡಾಟ ನಡೆಸಲು ಸಾಧ್ಯವಾಗುತ್ತಿಲ್ಲ. ಎಲ್ಲ ಕಚೇರಿಗಳನ್ನು ಒಂದೇ ಕಟ್ಟಡಕ್ಕೆ ಸ್ಥಳಾಂತರಿಸಿ, ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸಿದಲ್ಲಿ ಸಮಸ್ಯೆ ಎಂದು ಹೆಸರು ಹೇಳಲು ಇಚ್ಛಿಸದ ಕಚೇರಿ ಸಿಬ್ಬಂದಿ ಕನ್ನಡಪ್ರಭದ ಮುಂದೆ ಅಳಲು ತೋಡಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ