ಗಣೇಶ್ ಕಾಮತ್
ಬಂಟ್ವಾಳ ದರ್ಬೆಯ ಭಾಗವತ ದಿ. ಚಂದಪ್ಪ ಪೂಜಾರಿ - ಜಯಂತಿ ದಂಪತಿಯ ಪುತ್ರಿ ಸಂಧ್ಯಾ ತುಳುನಾಡಿನ ಆರಾಧ್ಯ ದೈವ ಮಂತ್ರದೇವತೆಯ ಚರಿತ್ರೆಯ ಕಥಾನಕವನ್ನೇ ತನ್ನ ಚೊಚ್ಚಲ ಪ್ರಯತ್ನದಲ್ಲಿ ಯಕ್ಷರಂಗಕ್ಕೆ ತರುವ ಸಾಹಸಕ್ಕೆ ಮುಂದಾಗಿದ್ದಾರೆ. ಭಾಗತಿಕೆಯ ಯಶಸ್ಸಿನ ಜತೆಗೆ ಪ್ರಸಂಗ ಕರ್ತೆಯಾಗಿ, ನಿರ್ದೇಶನವನ್ನೂ ಕೈಗೆತ್ತಿಕೊಳ್ಳುವ ಉತ್ಸಾಹದಲ್ಲಿ ಸಂಧ್ಯಾ ಯಕ್ಷರಂಗದಲ್ಲಿ ಮಹಿಳಾ ಸಾಧಕಿಯರ ಹೊಸ ಅಧ್ಯಾಯ ಬರೆಯಲು ಮುಂದಾಗಿರುವುದು ವಿಶೇಷ.
ಸೋಮವಾರ ಶ್ರೀ ಕ್ಷೇತ್ರ ಉಲ್ಲಂಜೆಯ ಶ್ರೀ ಮಂತ್ರದೇವತೆ ಸಹಿತ ಪಂಚದೈವಗಳ ಸನ್ನಿಧಿಯಲ್ಲಿ ರಾತ್ರಿ 7ರಿಂದ ಸಭಾ ಕಾರ್ಯಕ್ರಮ, ರಾತ್ರಿ 8 ರಿಂದ ಸಂಧ್ಯಾ ಪೂಜಾರಿ ವಿರಚಿತ ‘ಅಬ್ಬರದ ಗಗ್ಗರ’ ನೂತನ ಪ್ರಸಂಗ ಬಿಡುಗಡೆಯಾಗಿ ಅವರ ಭಾಗವತಿಕೆಯೊಂದಿಗೆ ಮೊದಲ ಪ್ರದರ್ಶನ ಕಾಣಲಿದೆ.ತಂದೆಯವರಿಂದ ಅರಳಿದ ಆಸಕ್ತಿ, ಭಾಗವತರ ಮಗಳು ಎಂದು ಗುರುತಿಸುವ ಜನ, ತಂದೆಯ ಹೆಸರಿಗೂ ಕೀರ್ತಿ ತರಬೇಕೆಂಬ ಸ್ಫೂರ್ತಿ ಸಂಧ್ಯಾ ಅವರನ್ನು ಯಕ್ಷರಂಗಕ್ಕೆ ಸೆಳೆದಿದೆ.
ತಂದೆಯವರ ಹೆಸರಲ್ಲೇ ಪ್ರತಿಷ್ಠಾನವೊಂದನ್ನು ನೊಂದಾಯಿಸಿ ಯಕ್ಷ ಕಾವ್ಯ ತರಂಗಿಣಿ ಸಂಘಟನೆಯನ್ನೂ ಉತ್ಸಾಹದಿಂದ ಮುನ್ನಡೆಸುತ್ತಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಎಂ.ಎಸ್. ಡಬ್ಲ್ಯು ಸ್ನಾತಕೋತ್ತರ ಪದವಿ ಪಡೆದ ಬಳಿಕ ಆಪ್ತ ಸಮಾಲೋಚಕಿಯಾಗಿ ಸಂಧ್ಯಾ ಕರ್ತವ್ಯ ನಿರ್ವಹಿಸಿದ್ದರು. ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲೂ ಆಪ್ತ ಸಮಾಲೋಚಕಿಯ ಕರ್ತವ್ಯ ನಿರ್ವಹಣೆ ಜತೆಗೆ ಸಹಾಯಕ ಪ್ರಾಧ್ಯಾಪಕಿಯಾಗಿಯೂ ಅವರು ಸಕ್ರಿಯರು. ಯಕ್ಷರಂಗದಲ್ಲಿ ಇನ್ನಷ್ಟು ಬೆಳೆಯ ಬೇಕು. ತನ್ನಯಕ್ಷ ಸೇವೆಯನ್ನು ತುಳುವರ ಹೊರನಾಡ ನೆಲ ಮುಂಬೈ ಸಹಿತ ಹೊರರಾಜ್ಯಗಳಿಗೂ ವಿಸ್ತರಿಸಿ ಬೆಳಗುವ ಉತ್ಸಾಹ ಅವರದ್ದು.