ಜು.9ರಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಅಮೆರಿಕದಲ್ಲಿ ಯಕ್ಷಗಾನ ಅಭಿಯಾನ

KannadaprabhaNewsNetwork |  
Published : Jul 02, 2024, 01:50 AM ISTUpdated : Jul 02, 2024, 09:05 AM IST
ಪಟ್ಲ ಸತೀಶ್‌ ಶೆಟ್ಟಿ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರ ತಂಡ ಜು. 9ರಂದು ಯಕ್ಷಗಾನ ಅಭಿಯಾನಕ್ಕಾಗಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದೆ.  

 ಮಂಗಳೂರು ;  ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರ ತಂಡ ಜು. 9ರಂದು ಯಕ್ಷಗಾನ ಅಭಿಯಾನಕ್ಕಾಗಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದೆ. ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಮೆರಿಕ ಇದರ ಆಯೋಜನೆಯಯಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದದಲ್ಲಿ ಅಮೆರಿಕದ 20 ರಾಜ್ಯಗಳಲ್ಲಿ ಈ ತಂಡ ಯಕ್ಷಗಾನ ಪ್ರದರ್ಶನ ನೀಡಲಿದೆ ಎಂದು ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಟ್ರಸ್ಟ್‌ನ ಯುಎಸ್ಎ ಘಟಕದ ಅಧ್ಯಕ್ಷ ಡಾ.ಅರವಿಂದ ಉಪಾಧ್ಯಾಯ, ಡಾ. ಶ್ರೀಧರ ಆಳ್ವ , ಮಹಾಬಲ ಶೆಟ್ಟಿ, ಉಳಿ ಯೋಗೇಂದ್ರ ಭಟ್ ಮತ್ತಿತರರು ಪ್ರದರ್ಶನ ಆಯೋಜನೆ ಮಾಡಿದ್ದಾರೆ. ಈ ತಂಡದಲ್ಲಿ ಹಿಮ್ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾಧ್ಯ, ಚೈತನ್ಯ ಕೃಷ್ಣ ಪದ್ಯಾಣ ಹಾಗೂ ಮುಮ್ಮೇಳದಲ್ಲಿ ಪ್ರೊ.ಎಂಎಲ್ ಸಾಮಗ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ ಬೆಳ್ಳಿಪಾಡಿ ಹೀಗೆ ಒಂಭತ್ತು ಮಂದಿಯ ತಂಡ ಸುಮಾರು 75 ದಿವಸಗಳ ಕಲಾ ಪ್ರವಾಸ ಕೈಗೊಳ್ಳಲಿದೆ. ಪುತ್ತಿಗೆ ಮಠಗಳು, ಕನ್ನಡ ಕೂಟದವರು, ಯಕ್ಷಗಾನ ಸಂಘದವರು, ದೇವಸ್ಥಾನಗಳು ಹಾಗೂ ಬೇರೆ ಬೇರೆ ಸಂಘ ಸಂಸ್ಥೆಗಳು ನಮಗೆ ಸಹಕಾರ ನೀಡಲಿದ್ದಾರೆ. ಪೌರಾಣಿಕ ಕಥಾನಕಗಳನ್ನು ಆಯ್ದುಕೊಂಡು ಪ್ರದರ್ಶನ ನೀಡಲಿದ್ದೇವೆ. ಕೆಲವು ಕಡೆ ಕಿರು ತರಬೇತಿ ಶಿಬಿರ ಪ್ರಾತ್ಯಕ್ಷಿಕೆಗಳನ್ನು ಕೂಡಾ ನಡೆಸಲಿದ್ದೇವೆ ಎಂದರು.

ಎರಡು ವರ್ಷಗಳಿಗೊಮ್ಮೆ ಅಮೆರಿಕದಲ್ಲಿ ನಡೆಯುವ ಅಕ್ಕ ಸಮ್ಮೇಳನದಲ್ಲಿಯೂ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡ ಕಾರ್ಯಕ್ರಮ ನೀಡಲಿದೆ. ಅಮೆರಿಕದ ಸ್ಯಾನೋಸೆ, ಸಿಯಾಟಲ್, ಫೀನಿಕ್ಸ್, ಲಾಸ್ ಎಂಜಲೀಸ್, ಆಸ್ಟಿನ್, ಹ್ಯೂಸ್ಟನ್, ಡೆಟ್ರೈಟ್, ಇಜಾಮ್ಸ್ ವಿಲ್ಲೆ, ಮೇರಿಲ್ಯಾಂಡ್, ಟಂಪಾ, ಮಿಲ್ವಾಕಿ, ಶಾರ್ಲೋಟ್, ರಾಲೆ, ಎಡಿಸನ್, ಕೊಲಂಬಸ್, ಬಾಸ್ಟನ್, ಒರ್ಲಾಂಡೊ, ಅಟ್ಲಾಂಟಾ, ಚಿಕಾಗೋ ಡಲ್ಲಾಸ್, ನ್ಯೂಜೆರ್ಸಿ, ರಿಚ್ಮಂಡ್, ಎಡಿಸನ್ ಮುಂತಾದ ಕಡೆ ಪ್ರದರ್ಶನ ನೀಡಲಾಗುವುದು ಎಂದರು.

ಪ್ರೊ. ಎಂ.ಎಲ್. ಸಾಮಗ ಮಾತನಾಡಿ, ಕಳೆದ 2023ರ ಜೂನ್ ಜುಲೈ ತಿಂಗಳಲ್ಲಿ ನಮ್ಮ ಯಕ್ಷಧ್ರುವ ಯಕ್ಷ ಶಿಕ್ಷಣದ ಸಂಚಾಲಕ ವಾಸುದೇವ ಐತಾಳ್ ಪಣಂಬೂರು ಇವರ ನೇತೃತ್ವದಲ್ಲಿ ನಮ್ಮ ತಂಡ ಯುರೋಪ್ ಖಂಡದ ಲಂಡನ್, ಸ್ಕಾಟ್ಲ್ಯಾಂಡ್, ಜರ್ಮನಿ ,ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಪ್ಯಾರಿಸ್ ಮುಂತಾದ ಕಡೆ ಕಾರ್ಯಕ್ರಮಗಳನ್ನು ನೀಡಿ ವಿದೇಶಿಗರಿಗೂ, ಭಾರತೀಯರಿಗೂ , ಕೆಲವು ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೂ ಯಕ್ಷಗಾನದ ಕಲೆಯನ್ನು ಪರಿಚಯಿಸುವಲ್ಲಿ ಸಫಲವಾಗಿದೆ ಎಂದರು.

ತಂಡದ ಕಲಾವಿದರಾದ ಪದ್ಮನಾಭ ಉಪಾಧ್ಯ, ಚೈತನ್ಯ ಕೃಷ್ಣ ಪದ್ಯಾಣ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ ಬೆಳ್ಳಿಪಾಡಿ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ