ಉಡುಪಿ ಪುರಭವನದಲ್ಲಿ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಉಜ್ವಲ್ ಡೆವಲಪರ್ಸ್ ಅವರ ಸಹಯೋಗದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್‌ಗಳು ಯಕ್ಷಗಾನ ಕೇಂದ್ರದ ಮೂಲಕ ಪ್ರಾಯೋಜಿಸಿರುವ ಗುರು ಮಟಪಾಡಿ ವೀರಭದ್ರ ನಾಯಕ ಯಕ್ಷಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಯಕ್ಷಗಾನ ಕಲೆ ಇತ್ತೀಚಿನ ದಿನಗಳಲ್ಲಿ ಸರ್ವವ್ಯಾಪಿಯಾಗಿದೆ. ಹಿರಿಯರು ಮಾತ್ರವಲ್ಲ ಚಿಕ್ಕ ಮಕ್ಕಳೂ ಯಕ್ಷಗಾನದಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಮಾಹೆಯ ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಗಳ ಸೇರ್ಪಡೆಗೆ ಹೆಚ್ಚಿನ ಬೇಡಿಕೆ ಬರುತ್ತಿರುವುದೇ ಇದಕ್ಕೆ ಸಾಕ್ಷಿ. ಅಲ್ಲದೇ ಮಾಹೆಯೂ ಯಕ್ಷಗಾನಕ್ಕೆ ಸರ್ವರೀತಿಯ ಪ್ರೋತ್ಸಾಹವನ್ನು ನೀಡುತ್ತಿದೆ. ಈ ವರ್ಷದಿಂದ ಮಾಹೆಯ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಸರ್ಟಿಫಿಕೇಟ್ ಕೋರ್ಸ್ ಆರಂಭಿಸುತ್ತಿದೆ ಎಂದು ಮಾಹೆಯ ಸಹ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.ಅವರು ಶನಿವಾರ ನಗರದ ಪುರಭವನದಲ್ಲಿ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಉಜ್ವಲ್ ಡೆವಲಪರ್ಸ್ ಅವರ ಸಹಯೋಗದಲ್ಲಿ ತಾವು ವಿಶ್ವಸ್ಥರಾಗಿರುವ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್‌ಗಳು ಯಕ್ಷಗಾನ ಕೇಂದ್ರದ ಮೂಲಕ ಪ್ರಾಯೋಜಿಸಿರುವ ಗುರು ಮಟಪಾಡಿ ವೀರಭದ್ರ ನಾಯಕ ಯಕ್ಷಸಾಧಕ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗುರು ವೀರಭದ್ರ ನಾಯಕ್ ಒಬ್ಬ ದಶಾವತಾರಿಯಾಗಿ ಯಕ್ಷಗಾನ ಕ್ಷೇತ್ರದ ಒಬ್ಬ ಸಾಧಕ ಶ್ರೇಷ್ಠ ಕಲಾವಿದ. ಅವರ ಹೆಸರಿನ ಈ ಪ್ರಶಸ್ತಿಯನ್ನು ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಜಲವಳ್ಳಿ ವಿದ್ಯಾಧರ ರಾವ್ ಅವರಿಗೆ ನೀಡುತ್ತಿರುವುದು ಬಹಳ ಪ್ರಸ್ತುತ ಎಂದು ಹೇಳಿದರು.ಗುರು ಉಮೇಶ್ ಸುವರ್ಣ ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಅವರು ಪ್ರಸ್ತಾವನೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಪ್ರಶಸ್ತಿ ಪುರಸ್ಕೃತರಾದ ಜಲವಳ್ಳಿ ವಿದ್ಯಾಧರ ರಾವ್ ಅವರ ಕುರಿತು ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಸದಸ್ಯ ಭುವನ ಪ್ರಸಾದ್ ಹೆಗ್ಡೆ ಅವರು ಅಭಿನಂದನಾ ಭಾಷಣ ಮಾಡಿದರು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ಜಿ.ಶಂಕರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉಜ್ವಲ್ ಡೆವಲಪ್ಪರ್ಸ್ ಪ್ರವರ್ತಕ ಪುರುಷೋತ್ತಮ ಶೆಟ್ಟಿ ಹಾಗೂ ಪೆರ್ಡೂರು ಮೇಳದ ಯಜಮಾನ ಕರುಣಾಕರ ಶೆಟ್ಟಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.