ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಇಲ್ಲಿನ ಗೋಪಾಲಗೌಡ ರಂಗಮಂದಿರದಲ್ಲಿ ಯಕ್ಷಗಾನದ ಗುರು ಶೈಲೇಶ್ ತೀರ್ಥಹಳ್ಳಿ ನೇತೃತ್ವದ ಯಕ್ಷಭೂಮಿ ಯಕ್ಷಗಾನ ಅಧ್ಯಯನ ಕೇಂದ್ರದ ಮೂರನೇ ವರ್ಷದ ವಾರ್ಷಿಕೋತ್ಸವವನ್ನು ನೆರವೇರಿಸಿ ಮಾತನಾಡಿ, ಯಕ್ಷಗಾನ ಕಲಾವಿದರು ಕೇವಲ ಹಣಕ್ಕಾಗಿ ಈ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೇ ತಪಸ್ಸಿನಂತೆ ಈ ಕಲೆಯನ್ನು ಆರಾಧಿಸುತ್ತಾರೆ. ಅಂತವರಲ್ಲಿ ಶೈಲೇಶ್ ತೀರ್ಥಹಳ್ಳಿ ಒಬ್ಬರಾಗಿದ್ದು, ಈ ಕಲೆಯ ಮೌಲ್ಯವನ್ನು ಅರಿಯುವ ಮಾನಸಿಕತೆಯನ್ನು ಎಳೆಯ ಪ್ರಾಯದವರಲ್ಲಿ ಮೂಡಿಸುತ್ತಿರುವುದು ಪ್ರಶಂಸನೀಯವಾಗಿದೆ ಎಂದರು.
ಕರಾವಳಿ ಮೂಲದ ವಿದ್ವಾಂಸರು ಮತ್ತು ಕಲಾವಿದರು ತಮ್ಮ ಬದುಕನ್ನೇ ಈ ಕಲೆಗೆ ಮೀಸಲಾಗಿಟ್ಟವರ ಉದಾಹರಣೆಯೂ ಇದೆ. ಕರಾವಳಿಯಿಂದ ವಲಸೆ ಬಂದಿರುವವರಿಂದಾಗಿ ಮಲೆನಾಡಿನಲ್ಲೂ ಯಕ್ಷಗಾನ ತನ್ನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಕಲೆಯ ಮೇಲಿನ ಅಭಿಮಾನದಿಂದ ಪೋಷಕರು ಮಕ್ಕಳನ್ನು ಈ ಕೇಂದ್ರಕ್ಕೆ ಸೇರಿಸುತ್ತಿರುವುದು ಗಮನಾರ್ಹವಾಗಿದೆ ಎಂದು ಹೇಳಿದರು.ಉದ್ಯಮಿ ಅನಂತ ಪದ್ಮನಾಭಾಚಾರ್ಯ ಮಾತನಾಡಿ, ರಂಗಕಲೆಯಲ್ಲಿ ಧಾರ್ಮಿಕ ಭಾವನೆಯೊಂದಿಗೆ ಭಾರತೀಯತೆಯ ಶ್ರೇಷ್ಠ ಪರಂಪರೆಯನ್ನು ಮೂಡಿಸುವ ಯಕ್ಷಗಾನಕ್ಕೆ ಸರಿಸಾಟಿಯಾದ ಕಲೆ ಇಲ್ಲ. ಈ ಮಕ್ಕಳು ಇಂದಿಲ್ಲಿ ಪ್ರದರ್ಶಿಸಿದ ಪ್ರದರ್ಶನ ನಿರೀಕ್ಷೆಗೂ ಮೀರಿದೆ ಎಂದರು.
ಹಿರಿಯ ಯಕ್ಷಗಾನ ಕಲಾವಿದರಾದ ದರಲಗೋಡು ಕೃಷ್ಣಜೋಯ್ಸ್ ಮತ್ತು ಮಂಗಳಗಾರು ರಮೇಶಾಚಾರ್ಯರನ್ನು ಗೌರವಿಸಲಾಯಿತು. ಯಕ್ಷಗಾನ ಚಿತ್ರಕಲೆಯಲ್ಲಿ ಬಹುಮಾನ ಪಡೆದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.