ಇಂದು ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಯಾವುದೇ ವಯೋಮಿತಿ, ಕಟ್ಟುಪಾಡುಗಳಿಲ್ಲದೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ತರಬೇತಿ ಪಡೆಯುತ್ತಿರುವುದು ಕರಾವಳಿಯಲ್ಲಿ ಸಾಂಸ್ಕೃತಿಕ ಕ್ರಾಂತಿಯನ್ನೇ ಹುಟ್ಟುಹಾಕಿದೆ. ನಿಜಾರ್ಥದಲ್ಲಿ ಯಕ್ಷಗಾನ ಇಂದು ವಿಶ್ವಗಾನವಾಗುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಮಂಗಳೂರು: ಇಂದು ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಯಾವುದೇ ವಯೋಮಿತಿ, ಕಟ್ಟುಪಾಡುಗಳಿಲ್ಲದೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ತರಬೇತಿ ಪಡೆಯುತ್ತಿರುವುದು ಕರಾವಳಿಯಲ್ಲಿ ಸಾಂಸ್ಕೃತಿಕ ಕ್ರಾಂತಿಯನ್ನೇ ಹುಟ್ಟುಹಾಕಿದೆ. ನಿಜಾರ್ಥದಲ್ಲಿ ಯಕ್ಷಗಾನ ಇಂದು ವಿಶ್ವಗಾನವಾಗುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಶುಕ್ರವಾರ ಕಾಟಿಪಳ್ಳ ಗಣೇಶಪುರದ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದಲ್ಲಿ, ಸುರತ್ಕಲಿನ ಯಕ್ಷಗಾನ ತರಬೇತಿ ಕೇಂದ್ರ ಯಕ್ಷಪೂರ್ಣಿಮಾದ 2ನೇ ವಾರ್ಷಿಕೋತ್ಸವ - ಯಕ್ಷಗಾನ ಪ್ರದರ್ಶನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಗಂಡು ಕಲೆ ಎಂದೇ ಖ್ಯಾತವಾದ ಯಕ್ಷಗಾನವನ್ನು ಕಲಿತು ಅದನ್ನು ಪ್ರದರ್ಶಿಸುತ್ತಿರುವ ಮಹಿಳೆಯರು ಯಕ್ಷಗಾನ ರಂಗಕ್ಕೆ ಹೊಸ ಆಯಾಮವನ್ನು ನೀಡಿದ್ದಾರೆ. ಕಲೆ ಉಳಿಯುವ ದೃಷ್ಟಿಯಿಂದ ಇದೊಂದು ಉತ್ತಮ ಬೆಳವಣಿಗೆ. ಯಕ್ಷಗಾನವನ್ನು ಕಲಿತ ಮಹಿಳೆ ಈ ಕಲೆಯ ಬೆಳವಣಿಗೆಗೆ ಕಾರಣವಾಗಬಲ್ಲಳು ಎಂಬುದಕ್ಕೆ ಯಕ್ಷ ಪೂರ್ಣಿಮಾ ಎಂಬ ಯಕ್ಷಗಾನ ತರಬೇತಿ ಕೇಂದ್ರವನ್ನು ಆರಂಭಿಸಿ ಹೆಣ್ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತಿರುವ ಪೂರ್ಣಿಮಾ ಯತೀಶ್ ರೈ ಅವರೇ ಸಾಕ್ಷಿ ಎಂದು ಅವರು ತಿಳಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲಾಪೋಷಕರಾದ ಶಕುಂತಲಾ ರಮಾನಂದ ಭಟ್ ಇಡ್ಯಾ ಮಾತನಾಡಿ, ಪೂರ್ಣಿಮಾ ಸತೀಶ್ ರೈ ಅವರು ಬಹಳ ಶ್ರದ್ಧೆಯಿಂದ ಯಕ್ಷಗಾನವನ್ನು ಕಲಿತು ಉತ್ತಮ ಕಲಾವಿದೆಯಾಗಿ ಇದೀಗ ಯಕ್ಷಗಾನ ಕಲೆಯನ್ನು ಇತರರಿಗೆ ದಾಟಿಸುವ ಕೆಲಸವನ್ನು ಮಾಡುತ್ತಿರುವುದು ಅಭಿನಂದನೀಯ ಎಂದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿ ಸದಸ್ಯ ರಾಜೇಶ್ ಕುಳಾಯಿ, ಯಕ್ಷಗುರು ಶಂಕರ ನಾರಾಯಣ ಮೈರ್ಪಾಡಿ, ಉದ್ಯಮಿ ಧರ್ಮೇಂದ್ರ ಗಣೇಶಪುರ, ಗೋವಿಂದ ದಾಸ್ ಕಾಲೇಜಿನ ಆಡಳಿತ ನಿರ್ದೇಶಕ ರಮೇಶ್ ಭಟ್ ಎಸ್.ಜಿ., ಪ್ರಾಂಶುಪಾಲ ಪ್ರೊ, ಹರೀಶ್ ಆಚಾರ್ಯ, ಕಾಟಿಪಳ್ಳ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘದ ವ್ಯವಸ್ಥಾಪಕ ಮಾದವ ಶೆಟ್ಟಿ ಬಾಳ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡಾ. ಸಂದೇಶ್ ರಾವ್, ಉದ್ಯಮಿ ಯತೀಶ್ ರೈ ಚೆಲ್ಯಡ್ಕ, ಕಲಾಪೋಷಕರಾದ ಗಂಗಾಧರ ಪೂಜಾರಿ, ಸಹನಾ ರಾಜೇಶ್ ರೈ, ಯಕ್ಷ ಪೂರ್ಣಿಮಾದ ನಿರ್ದೇಶಕಿ ಪೂರ್ಣಿಮಾ ಯತೀಶ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯಕ್ಷಪೂರ್ಣಿಮದ ಪ್ರತಿಭಾವಂತ ವಿದ್ಯಾರ್ಥಿನಿ ಶ್ರಾವ್ಯ ಕುಲಾಲ್, ಕಲಾಪೋಷಕರಾದ ವೆಂಕಟೇಶ ಬೋಳಿಯಾಳ ಹಾಗೂ ಡಾ. ಅನಂತಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಕವಿತಾ ವಂದಿಸಿದರು. ಸಾಯಿಸುಮ ನಾವಡ ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ಪ್ರದರ್ಶನ: ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಕೇಂದ್ರದ ಮಕ್ಕಳಿಂದ ಪಾಂಚಜನ್ಯ ಯಕ್ಷಗಾನ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ನಂತರ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ಮೇದಿನಿ ನಿರ್ಮಾಣ, ಮಹಿಶ ಮರ್ದಿನಿ ಯಕ್ಷಗಾನ ಪ್ರದರ್ಶನ ಪ್ರಸ್ತುತಿಗೊಂಡಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.