ಕನ್ನಡಪ್ರಭ ವಾರ್ತೆ ಉಡುಪಿಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮನೆ ನಿರ್ಮಾಣದ ಯೋಜನೆಗೆ ನೆರವು ನೀಡಿದ ಹತ್ತಾರು ದಾನಿಗಳಿಗೆ ಪೇಜಾವರ ಮಠದ ಶ್ರೀ ವಿಸ್ವಪ್ರಸನ್ನ ತೀರ್ಥ ಶ್ರೀಪಾದರು ಅಯೋಧ್ಯೆಯಲ್ಲಿ ಬಾಲರಾಮನ ದರ್ಶನಕ್ಕೆ ವಿಶೇಷ ಅವಕಾಶ ಕಲ್ಪಿಸಿದ್ದರು.ಅಯೋಧ್ಯೆಯಲ್ಲಿ ಬಾಲರಾಮ (ರಾಮಲಲ್ಲಾ)ನ ಪ್ರತಿಷ್ಠೆ ಸಹಸ್ರಮಾನದ ಚಾರಿತ್ರಿಕ ಘಟನೆ. ಜ.೨೨ರಿಂದ ಪ್ರತಿನಿತ್ಯ 4-5 ಲಕ್ಷ ಜನ ಅಯೋಧ್ಯೆಗೆ ಹೋಗಿ ಬಾಲರಾಮನ ಮೂರ್ತಿಯನ್ನು ಪ್ರತ್ಯಕ್ಷ ಕಣ್ತುಂಬಿಕೊಳ್ಳುತ್ತಿದ್ದಾರೆ. ಪೇಜಾವರ ಶ್ರೀಪಾದರ ೪೮ ದಿನಗಳ ಮಂಡಲೋತ್ಸವದ ಪರಿಕಲ್ಪನೆಯಡಿ ಸಮಾಜಸೇವಕರಿಗೆ ಸಮೀಪದಿಂದ ಶ್ರೀರಾಮನ ದರ್ಶನ ಮತ್ತು ಸೇವೆ ಮಾಡುವ ಅಪೂರ್ವ ಅವಕಾಶವನ್ನು ಒದಗಿಸಿದ್ದಾರೆ. ಆರ್ಥಿಕ ವರ್ಷದಲ್ಲಿ ಸಮಾಜಕ್ಕೆ ಐದು ಲಕ್ಷ ರು.ಗೂ ಅಧಿಕ ಕೊಡುಗೆ ನೀಡಿದವರಿಗೆ ರಜತ ಕಲಶದ ಸೇವೆಗೆ ಅನುಕೂಲ ಮಾಡಿದ್ದಾರೆ. ಇದು ಸ್ವಾಮೀಜಿಯವರ ರಾಮರಾಜ್ಯದ ಸುಂದರ ಕಲ್ಪನೆಗೆ ಸಾಕ್ಷಿ. ಅಷ್ಟೇ ಅಲ್ಲ ಇದು ಸಮಾಜಕ್ಕೆ ಅವರು ನೀಡಿದ ದೊಡ್ಡ ಸಂದೇಶ.ಈ ಹಿನ್ನೆಲೆಯಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಮತ್ತು ಮನೆ ನಿರ್ಮಾಣದ ಯೋಜನೆಗೆ ನೆರವು ನೀಡಿದ ಹತ್ತಾರು ದಾನಿಗಳಿಗೆ ರಾಮನ ದರ್ಶನಕ್ಕೆ ಅವಕಾಶ ಸಿಕ್ಕಿದ್ದು, ಸಂಸ್ಥೆಗೆ ಅಭಿಮಾನದ ಸಂಗತಿಯಾಗಿದೆ.ಫೆ.೨೭ರಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಉಪಾಧ್ಯಕ್ಷ ವಿ.ಜಿ. ಶೆಟ್ಟಿ ಅವರು ಈ ಸೇವೆ ನೀಡಿ ಕೃತಾರ್ಥರಾದರು. ಯಕ್ಷಗಾನ ಕಲಾರಂಗದ ೨೨ ಜನರ ತಂಡ ಫೆ.೨೬ರಂದು ಉಡುಪಿಯಿಂದ ಹೊರಟು ಅಯೋಧ್ಯೆ ತಲುಪಿ ೨೭ರಂದು ಸನಿಹದಿಂದ ಶ್ರೀರಾಮನ ದರ್ಶನ ಮತ್ತು ಸ್ವಾಮೀಜಿಯವರ ಆಶೀರ್ವಾದ ಪಡೆದು ಧನ್ಯತೆ ಹೊಂದಿತು.ಸಂಜೆ ನಡೆದ ಪಲ್ಲಕ್ಕಿ ಉತ್ಸವದ ಅಷ್ಟಾಂಗ ಸೇವೆಯಲ್ಲಿ ಪ್ರಭಾವತಿ ವಿ. ಶೆಣೈ ಅವರು ಭಜನೆ ಮತ್ತು ಪಾವನಿ ಯಕ್ಷನೃತ್ಯ ಸೇವೆ ಸಲ್ಲಿಸಿದರು. ಸ್ವಾಮೀಜಿಯವರು ಅತ್ಯಂತ ಶ್ರದ್ಧಾಭಕ್ತಿಯಿಂದ ಶ್ರೀರಾಮನ ಪೂಜಾ ಕೈಂಕರ್ಯವನ್ನು ಮಾಡುತ್ತಿರುವದನ್ನು ಪ್ರತ್ಯಕ್ಷ ನೋಡುವ ಭಾಗ್ಯ ಸಂಸ್ಥೆಯ ಸದಸ್ಯರಿಗೆ ಒದಗಿತು.