ಯಕ್ಷಗಾನ ಪ್ರಸಂಗಕರ್ತ, ಛಂದೋಬ್ರಹ್ಮ ಗಣೇಶ್‌ ಕೊಲಕಾಡಿ ನಿಧನ

KannadaprabhaNewsNetwork |  
Published : Nov 08, 2025, 02:45 AM IST
ಯಕ್ಷಗಾನ ಪ್ರಸಂಗಕರ್ತ,ಛಂದೋಬ್ರಹ್ಮ ಗಣೇಶ್‌ ಕೊಲಕಾಡಿ ಇನ್ನಿಲ್ಲ | Kannada Prabha

ಸಾರಾಂಶ

ಯಕ್ಷಗಾನದ ಪ್ರಸಂಗಕರ್ತ, ಯಕ್ಷಗಾನ ಗುರು, ಮೇರು ವ್ಯಕ್ತಿತ್ವದ ಮೂಲ್ಕಿ ಸಮೀಪದ ಕೊಲಕಾಡಿ ನಿವಾಸಿ ಛಂದೋಬ್ರಹ್ಮ ಖ್ಯಾತಿಯ ಗಣೇಶ್‌ ಕೊಲಕಾಡಿ (53) ದೀರ್ಘ ಕಾಲದ ಅನಾರೋಗ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೂಲ್ಕಿ: ಖ್ಯಾತ ಯಕ್ಷಗಾನದ ಪ್ರಸಂಗಕರ್ತ, ಯಕ್ಷಗಾನ ಗುರು, ಮೇರು ವ್ಯಕ್ತಿತ್ವದ ಮೂಲ್ಕಿ ಸಮೀಪದ ಕೊಲಕಾಡಿ ನಿವಾಸಿ ಛಂದೋಬ್ರಹ್ಮ ಖ್ಯಾತಿಯ ಗಣೇಶ್‌ ಕೊಲಕಾಡಿ (53) ದೀರ್ಘ ಕಾಲದ ಅನಾರೋಗ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನ ಹೊಂದಿದರು.ಅವರು ಅವಿವಾಹಿತರಾಗಿದ್ದು ತಾಯಿ ಹಾಗೂ ಅಪಾರ ಬಂಧು ಬಳಗ ಹಾಗೂ ಯಕ್ಷಗಾನ ಕಲಾಭಿಮಾನಿಗಳನ್ನು ಅಗಲಿದ್ದಾರೆ.ಯಕ್ಷಗಾನ ಕ್ಷೇತ್ರದಲ್ಲಿಯೇ ಪ್ರಾಜ್ಞಗುರುವೆಂದು, ಕ್ಲಿಷ್ಟ, ಸಂಕೀರ್ಣ ಛಂದಸ್ಸಿನಲ್ಲಿಯೂ ಲೀಲಾಜಾಲವಾಗಿ ಪದ್ಯರಚನೆ ಮಾಡುವವರೆಂದು ವಿದ್ವಜ್ಜನರಿಂದಲೇ ಕೊಂಡಾಡಲ್ಪಟ್ಟವರು ಅವರು.ಸುಮಾರು 18 ವರ್ಷಗಳ ಹಿಂದೆ ಕಾರ್ಯ ನಿಮಿತ್ತ ಮುಂಬೈಗೆ ಹೋಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳಿಂದ ದಾಳಿಗೊಳಗಾಗಿ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿಯುವಂತಾಗಿದ್ದರು .ಅನಾರೋಗ್ಯದ ನಡುವೆಯು ನೂರಾರು ವಿದ್ಯಾರ್ಥಿಗಳಿಗೆ ಮನೆಯಲ್ಲಿ ಮಲಗಿದಲ್ಲಿಂದಲೇ ಉಚಿತವಾಗಿ ಪಾಠ ಮಾಡಿ ಹಲವಾರು ಶಿಷ್ಯರನ್ನು ಬೆಳೆಸಿದ್ದಾರೆ. ಯಕ್ಷಗಾನ ಛಂದಸ್ಸಿನ ಕ್ಷೇತ್ರದಲ್ಲಿ ಯಕ್ಷಗಾನ ಕವಿ ನಾರಾಯಣ ಶೆಟ್ಟರ ಶಿಷ್ಯನಾಗಿ ಗುರುತಿಸಲ್ಪಟ್ಟ ಗಣೇಶ ಕೊಲಕಾಡಿ ಪ್ರಸಂಗಕರ್ತ, ಕವಿ, ನಾಟಕಕಾರ ಹಾಗೂ ಯಕ್ಷಗಾನ ಹಿಮ್ಮೇಳದ ಸಮರ್ಥ ಗುರುವಾಗಿ ಖ್ಯಾತರಾಗಿದ್ದರು. ದಿವಾಣ ಭೀಮ ಭಟ್ಟರ ಶಿಷ್ಯನಾಗಿದ್ದು, ಯಕ್ಷಗಾನ ಹಿಮ್ಮೇಳದಲ್ಲಿ ಸಮಗ್ರವಾದ ಜ್ಞಾನ ಪಡೆದುಕೊಂಡಿದ್ದರು.ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನದ ಭಾಗವತಿಕೆ, ಹಿಮ್ಮೇಳ ಕಲಿಸಿದ ಗುರುವಾಗಿದ್ದರು.ಕುಂಜಾರಗಿರಿ ಕ್ಷೇತ್ರ ಮಾಹಾತ್ಮ, ಸಮರ ಸೌಗಂಧಿಕೆ, ಶಬರ ಕುಮಾರ, ಪಾಂಚಜನ್ಯ, ಶನೈಶ್ಚರ ಮಾಹಾತ್ಮ್ಯಂ, ದೂರ್ವಾಸ ಗರ್ವಭಂಗ, ಮೈಥಿಲಿ, ವಿಜಯಜನನಿ ಜಾಹ್ನವಿಯೇ ಮೊದಲಾದ 45ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳು, ಆರು ನಾಟಕಗಳು, ಕರುಳು ಕೊರಳು. ಕವನಸಂಕಲನ ಇವು ಗಣೇಶರ ಕೃತಿ ಕುಸುಮಗಳು. ಅಲ್ಲದೆ 1000 ಕ್ಕೂ ಮಿಕ್ಕಿ ಕಾವ್ಯಾತ್ಮಕವಾದ ಸಂಮಾನ ಪತ್ರಗಳನ್ನು ರಚಿಸಿದ್ದಾರೆ.ಅನೇಕ ಕಮ್ಮಟ-ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಗುರುವಾಗಿ, ಉಪನ್ಯಾಸಕನಾಗಿ ಭಾಗವಹಿಸಿದ್ದರು. ನಾನಾ ಪತ್ರಿಕೆಗಳಲ್ಲಿ ಲೇಖಕನಾಗಿಯೂ, ನಾಟಕ-ತಾಳಮದ್ದಲೆಗಳಲ್ಲಿ ಪಾತ್ರ ನಿರ್ವಹಿಸಿದ್ದರು.ಕರ್ನಾಟಕ ಯಕ್ಷಗಾನ ಅಕಾಡಮಿಯ ಪಾರ್ತಿಸುಬ್ಬ ಪ್ರಶಸ್ತಿ, ಮುದ್ದಣ ಪ್ರಶಸ್ತಿ, ದಿವಾಣ ಭೀಮಭಟ್ಟ ಪ್ರಶಸ್ತಿ, ಮಂಗಳ ಸಾಹಿತ್ಯ ರತ್ನ ಪ್ರಶಸ್ತಿ, ಸ್ಕಂದ ಪ್ರಶಸ್ತಿ, ಯಕ್ಷಕಲಾರಾಧಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು, ಯಕ್ಷಕಾವ್ಯ ಕಮಲಾರ್ಕ, ಯಕ್ಷ ಕುವಲಯಾಂಬುಧಿ ಚಂದ್ರ, ಕಲಾ ತಪಸ್ವಿಯೇ ಮುಂತಾದ ಬಿರುದುಗಳೂ ಸಂದಿದ್ದವು. ಉಡುಪಿ ಯಕ್ಷಗಾನ ಕಲಾರಂಗದವರು ಕೊಲಕಾಡಿಯವರಿಗೆ ಮನೆ ನಿರ್ಮಿಸಿಕೊಟ್ಟಿದ್ದರು. ಪಟ್ಲ ಫೌಂಡೇಶನ್ ವತಿಯಿಂದ ಕೊಲಕಾಡಿಯವರ ಪ್ರಸಂಗಗಳ ಕೃತಿಯನ್ನು ಪ್ರಕಟವಾಗಿದೆ.ಗಣೇಶ್‌ ಕೊಲಕಾಡಿ ಬಗ್ಗೆ ಛಂದೋಬ್ರಹ್ಮ ದಿ. ಶಿಮಂತೂರು ನಾರಾಯಣ ಶೆಟ್ಟರು ಸದಾ ಹೆಮ್ಮೆಯಿಂದ ಶ್ಲಾಘನೆಯ ಮಾತುಗಳನ್ನು ಆಡುತ್ತಿದ್ದರು. ಅವರ ಸಾಧನೆ ಗುರುತಿಸಿ, ಆಧ್ಯಾತ್ಮಿಕ ವಿಶ್ವಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಸಹಿತ ಹಲವಾರು ಸಂಘ-ಸಂಸ್ಥೆಗಳು ಗೌರವಿಸಿದ್ದಾರೆ.

PREV

Recommended Stories

ಬ್ರಾಹ್ಮಣ ಸಮುದಾಯಕ್ಕೆ ಸೌಲಭ್ಯ ನೀಡಲು ಬದ್ಧ : ಸಚಿವ ದಿನೇಶ್‌ ಗುಂಡೂರಾವ್‌
ಬೆಂಗಳೂರು ನಗರದ 6 ಆರ್‌ಟಿಒ ಕಚೇರಿ ಮೇಲೆ ದಾಳಿ: ಹಲವು ಅಕ್ರಮ ಪತ್ತೆ