ರಾಜ್ಯೋತ್ಸವಕ್ಕೆ ಸಿಂಗಾರಗೊಂಡಿರುವ ಯಾಲಕ್ಕಿ ನಗರಿ

KannadaprabhaNewsNetwork |  
Published : Nov 01, 2026, 03:15 AM IST
ಕನ್ನಡ ರಾಜ್ಯೋತ್ಸವ ಅಂಗವಾಗಿ ಹಾವೇರಿ ನಗರದಲ್ಲಿ ಕೆಂಪು ಹಳದಿ ಬಣ್ಣದ ಬ್ಯಾನರ್, ಬಂಟಿಂಗ್ಸ್ ಕಣ್ಮನ ಸೆಳೆಯುತ್ತಿವೆ. | Kannada Prabha

ಸಾರಾಂಶ

ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಯಾಲಕ್ಕಿ ನಗರಿ ಹಾವೇರಿ ಸಜ್ಜಾಗಿದೆ. ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳು ಕೆಂಪು-ಹಳದಿ ಬಣ್ಣದ ಬಂಟಿಂಗ್ಸ್, ಬಾವುಟ ಹಾಗೂ ತೋರಣಗಳಿಂದ ಸಿಂಗಾರಗೊಂಡಿದೆ.

ಹಾವೇರಿ: ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಯಾಲಕ್ಕಿ ನಗರಿ ಹಾವೇರಿ ಸಜ್ಜಾಗಿದೆ. ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳು ಕೆಂಪು-ಹಳದಿ ಬಣ್ಣದ ಬಂಟಿಂಗ್ಸ್, ಬಾವುಟ ಹಾಗೂ ತೋರಣಗಳಿಂದ ಸಿಂಗಾರಗೊಂಡಿದ್ದು, ನಗರದ ರಸ್ತೆಗಳಲ್ಲಿ ಹಾದುಹೋಗುವವರಿಗೆ ಕನ್ನಡದ ಹಬ್ಬದ ವಾತಾವರಣವನ್ನು ಕಟ್ಟಿಕೊಟ್ಟಿದೆ. ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ಮೈಲಾರ ಮಹದೇವಪ್ಪ ವೃತ್ತ, ನಗರಸಭೆ, ಮಹಾತ್ಮ ಗಾಂಧಿ ವೃತ್ತ, ಹಳೆ ಕೋರ್ಟ್ ಮಾರ್ಗವಾಗಿ ಜೆ.ಪಿ. ವೃತ್ತದವರೆಗೆ ವಿಶೇಷ ಅಲಂಕಾರ ಮಾಡಲಾಗಿದೆ. ರಸ್ತೆಯುದ್ದಕ್ಕೂ ಕೆಂಪು ಮತ್ತು ಹಳದಿ ಬಣ್ಣದ ಬಂಟಿಂಗ್ಸ್‌ಗಳನ್ನು ಕಟ್ಟಲಾಗಿದ್ದು, ಕನ್ನಡದ ಬಾವುಟಗಳು ರಾರಾಜಿಸುತ್ತಿವೆ. ಪ್ರಮುಖ ರಸ್ತೆಗಳಲ್ಲಿ ನಿರ್ಮಿಸಿರುವ ಅಲಂಕಾರ ನಗರಕ್ಕೆ ಹಬ್ಬದ ಕಳೆ ತಂದಿದೆ.

ಜ್ಞಾನಪೀಠ ಸಾಹಿತಿಗಳ ಪರಿಚಯ ವಿಶೇಷ..

ಕನ್ನಡ ರಾಜ್ಯೋತ್ಸವ ಅಲಂಕಾರದಲ್ಲಿ ವಿಶೇಷವಾಗಿ ಕನ್ನಡದ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಸಾಹಿತಿಗಳ ಭಾವಚಿತ್ರಗಳನ್ನು ಪ್ರಮುಖ ಸ್ವಾಗತ ಕಮಾನಿನಲ್ಲಿ ಅಳವಡಿಸಲಾಗಿದೆ. ಒಂದು ಬದಿಯಲ್ಲಿ ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ, ವಿ.ಕೃ. ಗೋಕಾಕ, ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ ಭಾವಚಿತ್ರ ಅಳವಡಿಸಿದೆ. ಇನ್ನೊಂದು ಬದಿಯಲ್ಲಿ ಫಾಲ್ಕೆ ಪುರಸ್ಕೃತರಾದ ಡಾ. ರಾಜಕುಮಾರ, ಅನಂತನಾಗ ಹಾಗೂ ಶಂಕರ್‌ನಾಗ, ವಿಷ್ಣುವರ್ಧನ, ಅಂಬರೀಶ, ಪುನೀತ್‌ರಾಜಕುಮಾರ ಚಿತ್ರಗಳು ಗಮನ ಸೆಳೆಯುತ್ತಿವೆ.

ಭುವನೇಶ್ವರಿ ದೇವಿಯ ಸ್ವಾಗತ ಕಮಾನು..

ನಗರದ ಮುಖ್ಯ ರಸ್ತೆಯಲ್ಲಿ ನಿರ್ಮಿಸಿರುವ ಸ್ವಾಗತ ಕಮಾನು ಮತ್ತೊಂದು ವಿಶೇಷ ಆಕರ್ಷಣೆಯಾಗಿದೆ. ಕಮಾನಿನ ಮೇಲೆ ಕನ್ನಡಾಂಬೆ ಭುವನೇಶ್ವರಿ ದೇವಿಯ ಭಾವಚಿತ್ರ ಅಳವಡಿಸಲಾಗಿದ್ದು, `ನಗರಸಭೆ, ಹಾವೇರಿ ವತಿಯಿಂದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು'''''''' ಎಂಬ ಬರಹ ಗಮನ ಸೆಳೆಯುತ್ತಿದೆ. ''''''''ಕನ್ನಡವೇ ಸತ್ಯ, ಕನ್ನಡವೇ ನಿತ್ಯ'''''''' ಸೇರಿದಂತೆ ಕನ್ನಡಾಭಿಮಾನದ ಘೋಷವಾಕ್ಯಗಳು ನಗರದಾದ್ಯಂತ ಮೊಳಗುತ್ತಿವೆ.

ಒಟ್ಟಾರೆ, ಕನ್ನಡದ ಸಾಹಿತಿಗಳ ಪರಿಚಯ, ಕನ್ನಡದ ಮೇರು ನಟರು, ಕನ್ನಡದ ಬಾವುಟಗಳ ರಂಗು ಮತ್ತು ಭುವನೇಶ್ವರಿ ದೇವಿಯ ಸ್ವಾಗತ ಕಮಾನುಗಳ ಮೂಲಕ ಹಾವೇರಿ ನಗರದಲ್ಲಿ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಈ ಅಲಂಕಾರ ಕನ್ನಡಾಭಿಮಾನವನ್ನು ಬಿಂಬಿಸುವುದರ ಜತೆಗೆ ಮಕ್ಕಳಲ್ಲಿ ಕನ್ನಡದ ಅರಿವು ಮೂಡಿಸುವ ಪ್ರಯತ್ನಕ್ಕೂ ಸಾಕ್ಷಿಯಾಗಿದೆ ಎಂದು ಪೌರಾಯುಕ್ತ ಕಾಂತರಾಜು ತಿಳಿಸಿದರು.

ಹಾವೇರಿ ನಗರಸಭೆ ವತಿಯಿಂದ ನಗರದ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ, ಕನ್ನಡ ಧ್ವಜಾರೋಹಣ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಗರಸಭೆ ಆವರಣದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪೌರಾಯುಕ್ತ ಎಚ್. ಕಾಂತರಾಜ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ