ಮಳವಳ್ಳಿ ತಾಲೂಕಿನ ಪ್ರೇಮಿಗಳಿಬ್ಬರನ್ನು ಒಂದುಗೂಡಿಸಲು ಸಾಂತ್ವನ ಕೇಂದ್ರ ವಿವಾಹ ಮಾಡಿಸಿದ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಯಳಂದೂರುಮಳವಳ್ಳಿ ತಾಲೂಕಿನ ಪ್ರೇಮಿಗಳಿಬ್ಬರನ್ನು ಒಂದುಗೂಡಿಸಲು ಸಾಂತ್ವನ ಕೇಂದ್ರ ವಿವಾಹ ಮಾಡಿಸಿದ ಘಟನೆ ನಡೆದಿದೆ.
ಮಳವಳ್ಳಿ ಪಟ್ಟಣದ ಎಂ.ಜಿ. ಮಹೇಶ್, ಎಂಬುವರು ಯಳಂದೂರು ತಾಲೂಕಿನ ಕೊರೆಗಾಲ ಗ್ರಾಮದ ಹರ್ಷಿತಾ ಎಂಬುವರಿಗೆ ಈ ಹಿಂದೆ ಪರಸ್ಪರ ಒಪ್ಪಂದವಾಗಿ ಮದುವೆ ಮಾಡಲು ಇವರ ಪೋಷಕರು ನಿಶ್ಚಿಯಿಸಿದ್ದರು. ಆದರೆ ನಂತರ ಇವರ ಕುಟುಂಬಸ್ಥರು ಈ ಮದುವೆ ಬೇಡ ಎಂದು ಹಿಂದೆ ಸರಿದಿದ್ದರು. ಆದರೆ ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಹಿಂದೂ ವಿವಾಹ ಕಾನೂನಿನ ಅನ್ವಯ ತಮ್ಮ ಮದುವೆಯನ್ನು ನೋಂದಣಿ ಕೂಡ ಮಾಡಿಸಿದ್ದರು. ಇದಾದ ಬಳಿಕ ಬುಧವಾರ ಪಟ್ಟಣದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ಹರ್ಷಿತ ನಿಮ್ಮ ನೇತೃತ್ವದಲ್ಲಿ ಮದುವೆ ಮಾಡಿಸಿಕೊಡಿ ಎಂದು ಮೊರೆ ಹೋಗಿದ್ದರು.
ದಾಖಲೆಗಳನ್ನು ಪರಿಶೀಲಿಸಿದ ಇಲ್ಲಿನ ಆಪ್ತ ಸಮಾಲೋಚಕರು, ಸಮೀಪದ ಗಂಗವಾಡಿ ವೀರಭದ್ರೇಶ್ವರ ದೇಗುಲದಲ್ಲಿ ಇವರಿಬ್ಬರಿಗೂ ವಿವಾಹವನ್ನು ಮಾಡಿಸಿ ಕಳುಹಿಸಿಕೊಟ್ಟಿದ್ದಾರೆ.ಈ ಸಂದರ್ಭದಲ್ಲಿ ಮಹಿಳಾ ಸಾಂತ್ವನ ಕೇಂದ್ರ ಆಪ್ತ ಸಮಾಲೋಚಕಿ ಕವಿತ ಮಾತನಾಡಿ, ಇವರಿಬ್ಬರ ವಯಸ್ಸಿನ ದಾಖಲೆಗಳು ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇಬ್ಬರೂ ಕೂಡ ಪರಸ್ಪರ ಪ್ರೀತಿಸುತ್ತಿದ್ದು ಗೊತ್ತಾಗಿದೆ. ದಾಖಲೆಗಳು ಸರಿ ಇದ್ದ ಕಾರಣ ಇವರಿಬ್ಬರಿಗೂ ದೇವಸ್ಥಾನದಲ್ಲಿ ಮದುವೆ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಮತ್ತೊಬ್ಬ ಆಪ್ತ ಸಮಾಲೋಚಕಿ ಉಷಾ ಸೇರಿದಂತೆ ಅನೇಕರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.