ಕನ್ನಡಪ್ರಭ ವಾರ್ತೆ ಉಡುಪಿ
ಧಾರ್ಮಿಕ ಆಚಾರ ವಿಚಾರಗಳಿಗೆ ನಮ್ಮ ಜಿಲ್ಲೆ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಈ ಪರಶುರಾಮ ದೇವರ ಸೃಷ್ಟಿಯಲ್ಲಿ ದೈವರಾಧನೆ, ನಾಗರಾಧನೆ, ಉತ್ಸವ, ಕಂಬಳ, ಮಾರಿ ಪೂಜೆ, ಕೋಳಿ ಅಂಕ ಕರಾವಳಿಯಲ್ಲಿ ತಲೆತಲಾಂತರಗಳಿಂದ ಜೀವನದ ಭಾಗವಾಗಿ ಆಚರಿಸಿಕೊಂಡು ಬರಲಾಗಿದೆ. ಅವುಗಳನ್ನು ಪ್ರತಿವರ್ಷ ನಿಗದಿತ ತಿಂಗಳಲ್ಲಿ ನಡೆಸಲಾಗುತ್ತದೆ, ಯಕ್ಷಗಾನ ಕೂಡ ಈ ಭಾಗದಲ್ಲಿ ಹರಕೆ ರೂಪದಲ್ಲಿ ನಡೆಸಲಾಗುತ್ತದೆ.
ಆದರೆ, ಇತ್ತೀಚೆಗೆ ಜಿಲ್ಲಾಡಳಿತ ಈ ನಮ್ಮ ಆಚರಣೆಗಳನ್ನು ತಡೆಯಲು ಮುಂದಾಗಿದೆ. ಇದರಿಂದ ತುಳುವರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ, ಇದು ಕಾಂಗ್ರೆಸ್ ಬಿಜೆಪಿ ಜೆಡಿಎಸ್ ವಿಚಾರ ಅಲ್ಲ, ಎಲ್ಲರೂ ಪಕ್ಷಾತೀತವಾಗಿ ಈ ಆಚರಣೆಗಳಲ್ಲಿ ಭಾಗವಹಿಸುತ್ತಾರೆ ಎಂದವರು ಹೇಳಿದ್ದಾರೆ.ತುಳುನಾಡಿನಲ್ಲಿ ಚೌತಿ ,ಅಷ್ಟಮಿ, ದೀಪಾವಳಿ, ಯುಗಾದಿ, ಶಿವರಾತ್ರಿ, ಊರಿನ ಮಾರಿ ಪೂಜೆ, ಗ್ರಾಮದೇವರ ಉತ್ಸವ ಸಂದರ್ಭದಲ್ಲಿ ನಡೆಯುವ ಸೋಡ್ತಿ (ಕೋಳಿ ಅಂಕ)ಗೂ ಇಲ್ಲಿನ ಜನರಿಗೆ ಭಾವನಾತ್ಮಕ ಸಂಬಂಧವಿದೆ. ಕೋಳಿಅಂಕ ಅಂದರೆ ಜೂಜು ಅಲ್ಲ, ಜೂಜು ಎಂದು ಹೇಳಿ ದಾರಿ ತಪ್ಪಿಸುವ ಪ್ರಯತ್ನ ಮಾಡಬೇಡಿ, ಜೂಜಿಗೆ ನಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆಯೂ ರಾಮಕೃಷ್ಣ ಹೆಗಡೆ ಸರ್ಕಾರದ ಅವಧಿಯಲ್ಲಿ ಮಾರಿ ಪೂಜೆಯ ಸಂದರ್ಭದಲ್ಲಿ ಕೋಳಿ ಬಲಿ ನೀಡಬಾರದು ಎಂದು ಆದೇಶ ಮಾಡಲಾಗಿತ್ತು, ಅದರ ಪರಿಣಾಮ ಅತಿ ಹೆಚ್ಚು ಅನಾಹುತಗಳು ಅವಘಡಗಳು ಆ ಭಾಗದಲ್ಲಿ ಉಂಟಾಗಿತ್ತು, ಸರಕಾರದ ಪ್ರತಿನಿಧಿಗಳೂ ಕಷ್ಟ ಅನುಭವಿಸಿದ್ದರು. ಆದ್ದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬೇಡಿ ಎಂದು ಎಸ್‌ಪಿಗೆ ಮನವಿ ಮಾಡಿದ್ದೇವೆ ಎಂದು ಯಶ್‌ಪಾಲ್ ಹೇಳಿದ್ದಾರೆ.