ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಪರ ಮೃದು ಧೋರಣೆ ತಳೆದ ಮಾಜಿ ಸಿಎಂ ಯಡಿಯೂರಪ್ಪ

KannadaprabhaNewsNetwork | Updated : Dec 05 2024, 09:06 AM IST

ಸಾರಾಂಶ

ಬಸವನಗೌಡ ಪಾಟೀಲ್‌ ಪರ ಮೃದು ಧೋರಣೆ ತಳೆದ ಮಾಜಿ ಸಿಎಂ ಯಡಿಯೂರಪ್ಪ

  ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕುಟುಂಬ ಹಾಗೂ ಮತ್ತವರ ಬಳಗದ ಸದಸ್ಯರ ವಿರುದ್ಧ ಸದಾ ಹರಿಹಾಯುವ ಮೂಲಕ ಬಿಜೆಪಿಯಲ್ಲಿ ಭಿನ್ನಮತದ ಧ್ವನಿ ಮೂಡಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕೆಂಬ ಒತ್ತಡ ಕೇಳಿ ಬರುತ್ತಿರುವ ಬೆನ್ನಲ್ಲೇ ಸ್ವತಃ ಯಡಿಯೂರಪ್ಪನವರೇ ಬಸನಗೌಡ ಪಾಟೀಲ್‌ ಕುರಿತು ಮೃದು ಧೋರಣೆ ತಳೆದಿರುವುದು ಆಶ್ಚರ್ಯ ಮೂಡಿಸಿದೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್‌.ಯಡಿಯೂರಪ್ಪ ಅವರು, ಬಸನಗೌಡ ಪಾಟೀಲ್ ಯತ್ನಾಳ್‌ ಕೂಡ ನಮ್ಮ ಪಕ್ಷದವರೆ ಹೊರತು ಹೊರಗಿನವರಲ್ಲ. ಯಾವುದೋ ಕಾರಣಕ್ಕಾಗಿ ಆಕ್ರೋಶದಲ್ಲಿರಬಹುದು. ಆದರೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕೆನ್ನುವುದು ನನ್ನ ಅಪೇಕ್ಷೆ ಎಂದು ಹೇಳಿದರು.

ಇದು ನನ್ನ ಅಭಿಪ್ರಾಯ ಮಾತ್ರವಲ್ಲ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಅಪೇಕ್ಷೆ ಕೂಡ ಇದೇ ಆಗಿದೆ ಎಂದರು.

ಏನೇ ವಿಚಾರ ಇದ್ದರೂ ಮುಖಾಮುಖಿಯಾಗಿ ಕುಳಿತು ಮಾತನಾಡಬೇಕು. ಸಮಸ್ಯೆ ಬಗೆಹರಿಸಿಕೊಂಡು ಮುಂದಡಿಯಿಡಬೇಕು. ಯತ್ನಾಳ್‌ ಏನೇ ಹೇಳಿದರೂ ಪರವಾಗಿಲ್ಲ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕೆನ್ನುವುದು ನನ್ನ ಅಭಿಪ್ರಾಯ. ಇದಕ್ಕೆ ಎಲ್ಲರೂ ಸಹಕರಿಸುತ್ತಾರೆ ಎಂಬ ನಂಬಿಕೆ ಇದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಮುಂದೆ ಎಲ್ಲವೂ ಸರಿ ಹೋಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಧ್ಯದಲ್ಲಿಯೇ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ರಾಜ್ಯ ಸರ್ಕಾರದ ದೌರ್ಬಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ನಮ್ಮೆಲ್ಲಾ ಶಾಸಕರು ಮಾಡಲಿದ್ದಾರೆ. ಸರ್ಕಾರದ ವೈಫಲ್ಯ ಹಾಗೂ ಕೊರತೆಗಳ ಕುರಿತು ಜನರ ಗಮನಕ್ಕೆ ತರುವ ಕೆಲಸ ಮಾಡುತ್ತಾರೆ ಎಂದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಮುಡಾ ಸೇರಿದಂತೆ ಹಲವಾರು ಹಗರಣಗಳು ನಡೆದಿದೆ. ಒಮ್ಮೆ ತಪ್ಪು ಮಾಡಿ ಬಳಿಕ ನಿವೇಶನಗಳನ್ನು ವಾಪಾಸ್ ನೀಡೋದು ಬೇರೆ ವಿಷಯ. ಆದರೆ ಸಾವಿರಾರು ನಿವೇಶನಗಳು ಕಾನೂನು ಬಾಹಿರವಾಗಿ ನೀಡುವ ಮೂಲಕ ಕೋಟ್ಯಂತರ ರು. ಹಗರಣ ನಡೆಸಲಾಗಿದೆ ಎಂಬ ಮಾಹಿತಿಯನ್ನು ಇಡಿ ತಿಳಿಸಿದೆ.

ಯಾವುದೇ ಸರಿಯಾದ ಪುರಾವೆ ಇಲ್ಲದೆ ಇಡಿ ಯಾವ ಕಾರಣಕ್ಕೂ ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಸಮರ್ಪಕ ತನಿಖೆಯಿಂದ ಸತ್ಯ ಹೊರ ಬರುತ್ತದೆ ಎಂದರು.

Share this article