ಹುಬ್ಬಳ್ಳಿ: ಬಿಜೆಪಿಯಿಂದ ಉಚ್ಚಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲವನ್ನುಂಟು ಮಾಡಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಖಾಸಗಿ ಹೋಟೆಲ್‌ನಲ್ಲಿ ಇಬ್ಬರು ಮುಖಂಡರು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಪ್ರಸಕ್ತ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಾಗಿ ಎರಡು ದಿನ ಆಗಿದೆ. ಈಕುರಿತು ಮಾತನಾಡಿದ ಅನಿಲಕುಮಾರ ಪಾಟೀಲ, ಹಿರಿಯೂರು ಬಳಿ ಯತ್ನಾಳ ಅವರನ್ನು ಭೇಟಿಯಾಗಿದ್ದೆ. ನಮ್ಮದು ಅವರದು ಒಂದೇ ಜಿಲ್ಲೆ. ಮೊದಲಿನಿಂದಲೂ ಆತ್ಮೀಯರು. ಹೀಗಾಗಿ ಕೆಲಹೊತ್ತು ಮಾತನಾಡಿದೆವು ಎಂದರು.
ಬಿಜೆಪಿಯಿಂದ ಉಚ್ಚಾಟನೆಗೊಂಡ ಬಳಿಕ ಕಾಂಗ್ರೆಸ್ ಮುಖಂಡರೊಂದಿಗೆ ಕಾಣಿಸಿಕೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ: ಹೈಕಮಾಂಡ್ ನಿರ್ಧರಿಸುತ್ತೆ- ಜಾರಕಿಹೊಳಿ
ಹುಬ್ಬಳ್ಳಿ : ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಹೈಕಮಾಂಡ್ ನಿರ್ಣಯ ಮಾಡುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನಮ್ಮ ಹಂತದಲ್ಲಿ ಇಲ್ಲ. ಅದು ಹೈಕಮಾಂಡ್ ನಿರ್ಣಯ ಮಾಡುತ್ತದೆ.
ಈಗಾಗಲೇ ಹೈಕಮಾಂಡ್ ಈ ಬಗ್ಗೆ ಹೇಳಿದ್ದು, ಅವರ ನಿರ್ಧಾರ ಏನೆಂಬುವುದು ಕಾದು ನೋಡಬೇಕು ಎಂದು ತಿಳಿಸಿದರು.ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರಾಜಣ್ಣ ಹಾಗೂ ಅವರ ಮಗ ಈಗಾಗಲೇ ದೂರು ನೀಡಿದ್ದಾರೆ. ಅದು ಪೊಲೀಸರಿಂದ ತನಿಖೆ ನಡೆಯಬೇಕು. ನಾವು ಏನು ಹೇಳುವುದು ಸಾಧ್ಯವಿಲ್ಲ.
ತನಿಖೆ ಮಾಡಲಿ ಕಾದು ನೋಡೋಣ. ಆ ಮಹಾನ್ ನಾಯಕ ಯಾರು ಅಂತ ಗೊತ್ತಾಗುತ್ತದೆ ಎಂದರು.ದಲಿತ ಸಚಿವರ ಮಾತಿಗೆ ಹೈಕಮಾಂಡ ಬೆಲೆ ನೀಡಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲವೂ ಈಗ ಬೇಡ. ಯುಗಾದಿ ಹಾಗೂ ರಂಜಾನ ಹಬ್ಬವಿದ್ದು, ಅದರ ಬಗ್ಗೆ ಈಗ ಮಾತನಾಡುವುದು ಬೇಡ ಎಂದರು.ಸಚಿವ ಕೆ.ಜೆ. ಜಾರ್ಜ್ ನಿವಾಸದಲ್ಲಿ ಚರ್ಚೆ ನಡೆಸಿದ್ದರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಅರ್ಥ ಕಲ್ಪಿಸುವುದು ಬೇಡ. ನಮ್ಮ ಜಿಲ್ಲೆ ಹಾಗೂ ಅವರ ಇಲಾಖೆಗೆ ಸಂಬಂಧಿಸಿದ ಅನೇಕ ಕೆಲಸಗಳಿವೆ. ಆದ್ದರಿಂದ ಭೇಟಿಯಾಗಿ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.