ನಿರಾಶ್ರಿತರ ಕೇಂದ್ರದಲ್ಲಿ ಹೊಸ ಬಟ್ಟೆ, ಯೂನಿಫಾರಂ ವಿತರಣೆ । ಬಾಗಿಲುಗಳಿಗೆ ತೋರಣ ಕಟ್ಟಿ ಸಂಭ್ರಮ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಕೋಟೆನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಿರಿಯರಿಂದ ಹಿರಿಯರವರೆಗೂ ಎಣ್ಣೆ ಹಚ್ಚಿಕೊಂಡು ಯುಗಾದಿ ಹಬ್ಬವನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಮನೆಗಳ ಮುಂಬಾಗಿಲು, ದೇವರ ಮನೆಯ ಬಾಗಿಲುಗಳಿಗೆ ಹಸಿರು ಮಾವಿನ ಎಲೆ ಮಧ್ಯೆ ಬೇವಿನ ಎಲೆ ಗೊಂಚಲು, ಪುಷ್ಪಗಳಿಂದ ತಳಿರು-ತೋರಣ ಸಿದ್ಧಪಡಿಸಿ ಕಟ್ಟಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು. ಶುಭ್ರ ಹೊಸ ಬಟ್ಟೆ ಧರಿಸಿ, ಸೂರ್ಯ ನಮಸ್ಕಾರ, ದೇವರಿಗೆ ಪೂಜೆ ಸಲ್ಲಿಸಿ ದೇಗುಲಗಳತ್ತ ತೆರಳಿದರು. ಹಲವೆಡೆ ವರ್ಷದ ಫಲವನ್ನು ಸೂಚಿಸುವ ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಯಿತು.ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಅನ್ನದಾತರು ಯುಗಾದಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ಮಾವಿನಕಾಯಿ, ಹುಣಿಸೇಹಣ್ಣು, ಮೆಣಸು, ಉಪ್ಪು, ಬೆಲ್ಲ, ಬೇವು ಇತರೆ ಪದಾರ್ಥಗಳನ್ನು ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ತಯಾರಿಸಿ ಅದನ್ನು ಸೇವಿಸುವ ಮೂಲಕವೂ ಕೆಲವರಿಂದ ವಿಶೇಷ ಆಚರಣೆ ನಡೆಯಿತು.
ಚಂದ್ರಮಾನ ಯುಗಾದಿ ಅಂಗವಾಗಿ ಚಿತ್ರದುರ್ಗ ತಾಲೂಕಿನ ಗೋನೂರು ಸಮೀಪದ ಹೋ.ಚಿ.ಬೋರಯ್ಯ ಬಡಾವಣೆಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಸಾಮೂಹಿಕವಾಗಿ ಎಣ್ಣೆ ಹಚ್ಚಿಕೊಂಡ ನಿರಾಶ್ರಿತರು ಸಂಭ್ರಮದಿಂದ ಯುಗಾದಿ ಆಚರಿಸಿದರು.ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಒಟ್ಟು 377 ಮಂದಿ ಆಶ್ರಯ ಪಡೆದಿದ್ದು, ಒಬ್ಬರಿಗೊಬ್ಬರು ಎಣ್ಣೆ ಹಚ್ಚುತ್ತ ಸಹಕಾರ ನೀಡಿ ಸ್ನೇಹ-ಬಾಂಧವ್ಯಕ್ಕೆ ಸಾಕ್ಷಿಯಾದರು. ಸಂತಸದಲ್ಲಿದ್ದ ಎಲ್ಲರೂ ಕೆಲಕಾಲ ಕೇಂದ್ರದ ಸುತ್ತ ಸುತ್ತಾಡಿದರು. 305 ಪುರುಷರು, 72 ಮಹಿಳೆಯರಿದ್ದು, ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆಯಿಂದ ನಿರಾಶ್ರಿತರಿಗೆ ಹೊಸ ಬಟ್ಟೆ ಹಾಗೂ ಕೇಂದ್ರದಿಂದ ಯೂನಿಫಾರ್ಮ್ ವಿತರಿಸಲಾಯಿತು. ನಂತರ ಎಲ್ಲರ ಅಭ್ಯಂಜನ ಸ್ನಾನ ಮುಗಿದ ಬಳಿಕ ಒಗ್ಗೂಡಿ ಹಬ್ಬ ಆಚರಿಸಲಾಯಿತು. ಸಾಮೂಹಿಕ ಆಚರಣೆಯಾದ್ದರಿಂದ ಹೊಸಬರ ಗಮನ ಸೆಳೆಯಿತು.ನಿರಾಶ್ರಿತರಿಗಾಗಿ ಕೇಂದ್ರದಲ್ಲಿ ಹೋಳಿಗೆ, ಕೋಸುಂಬರಿ, ತರಕಾರಿ ಗೊಜ್ಜು, ಹೋಳಿಗೆ ಸಾಂಬಾರ್, ಅನ್ನ, ತಿಳಿ ಸಾಂಬಾರ್ ಸೇರಿ ತರಹೇವಾರಿ ಖಾದ್ಯ ಸಿದ್ಧಪಡಿಸಲಾಗಿತ್ತು. ಎಲ್ಲರೂ ಹಬ್ಬದೂಟ ಸವಿದರು. ನಿರಾಶ್ರಿತರ ಪರಿಹಾರ ಕೇಂದ್ರದ ಆಪ್ತ ಸಲಹೆಗಾರ ಮಹಾದೇವಯ್ಯ, ಅಧೀಕ್ಷಕ ವಿಜಯಕುಮಾರ್, ಸಿಬ್ಬಂದಿ ರಮೇಶ್, ಪಾಲಯ್ಯ ದೇವರಾಜ್ ಇತರರು ಇದ್ದರು.