ನಮ್ಮ ಇಡೀ ಗುಂಪು ಕರೆದರೆ ಮಾತ್ರ ದೆಹಲಿಗೆ ಹೋಗುವೆ ಎಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ

KannadaprabhaNewsNetwork |  
Published : Nov 30, 2024, 12:46 AM ISTUpdated : Nov 30, 2024, 07:34 AM IST
Basanagouda Patil Yatnal

ಸಾರಾಂಶ

ಯಾರೇ ರಾಜ್ಯಕ್ಕೆ ಭೇಟಿ ನೀಡಿದರು ನಾನು ಯಾರಿಗೂ ಭೇಟಿಯಾಗಲ್ಲ ಎಂದು ಖಡಕ್‌ ಸಂದೇಶ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ

  ವಿಜಯಪುರ : ನಮ್ಮ ಇಡೀ ಗುಂಪಿಗೆ ಕರೆದರೆ ಮಾತ್ರ ದೆಹಲಿಗೆ ಹೋಗುವೆ. ಕೇವಲ ನನ್ನ ಮಾತ್ರ ಕರೆದು ಒಳಗೆ ಕೂಡಿಸಿ, ನನಗೆ ಆಸೆ ಹಚ್ಚಿ ಪ್ರಧಾನಿ ಮಾಡುತ್ತೇನೆಂದು ಹೇಳಿದರೆ ನಾನು ಕೇಳಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ಗುಡುಗಿದ್ದಾರೆ.

ದೆಹಲಿ ನಾಯಕರ ಬುಲಾವ್ ವಿಚಾರದ ಕುರಿತು ನಗರದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಆಗುವ, ಸಿಎಂ ಆಗುವ ಹುಚ್ಚಿಲ್ಲ. ಪಕ್ಷಕ್ಕೆ ಒಳ್ಳೆಯದಾಗಬೇಕೆಂದು ಹೋರಾಡುತ್ತಿರುವೆ. ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದರೆ ಕ್ರಮ ಕೈಗೊಳ್ಳಲಿ. ಅವರಿಗೆ ಅಧಿಕಾರವಿದೆ ಎಂದು ತಿರುಗೇಟು ನೀಡಿದರು.

ವಿಜಯೇಂದ್ರ ತಂಡ ಹಾಗೂ ಯತ್ನಾಳ ತಂಡ ಮಧ್ಯದ ಹೊಂದಾಣಿಕೆಗಾಗಿ ರಾಜ್ಯ ರಾಜಕಾರಣಕ್ಕೆ ಸೋಮಣ್ಣ ಎಂಟ್ರಿ ಮಾಡಿಸುತ್ತಿರುವ ವಿಚಾರದ ಕುರಿತು ಮಾತನಾಡಿ, ಸೋಮಣ್ಣನನ್ನು ರಾಜ್ಯ ರಾಜಕಾರಣಕ್ಕೆ ಕರೆದುಕೊಂಡು ಬಂದರೆ ನಾವು ಬೇಡ ಎನ್ನುತ್ತೇವಾ? ಸೋಮ್ಮಣ್ಣ ಬಂದರೂ ನಮ್ಮ ಉತ್ತರ ಕರ್ನಾಟಕದವರ ಸಹಾಯ ಬೇಕೇ ಅಲ್ಲವೇ? ವಿಜಯೇಂದ್ರನ ಮೇಲಷ್ಟೇ ಸೋಮಣ್ಣನನ್ನು ರಾಜ್ಯಾಧ್ಯಕ್ಷ ಮಾಡಲಾಗುತ್ತಾ ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆಯಲ್ಲಿ ಸೋಮಣ್ಣರನ್ನು ಸೋಲಿಸಲು ಇದೇ ಅಪ್ಪ ಮಕ್ಕಳು ಎಷ್ಟು ಖರ್ಚು ಮಾಡಿದ್ದಾರೆ? ತುಮಕೂರಿನಲ್ಲಿ ತಮ್ಮನ್ನು ಸೋಲಿಸಲು ವಿಜಯೇಂದ್ರ ಯಡಿಯೂರಪ್ಪ ಎಷ್ಟು ದುಡ್ಡನ್ನು ಕಳಿಸಿದ್ದರು ಎಂದು ಸೋಮಣ್ಣನವರೇ ಹೇಳಿದ್ದಾರೆ. ಒಂದು ವೇಳೆ ಸೋಮಣ್ಣ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಂದರೆ ವಿಜಯೇಂದ್ರ ಯಡಿಯೂರಪ್ಪ ಮೇಲೆ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಪ್ರಶ್ನಿಸುವೆ ಎಂದು ಹೇಳಿದರು.

ವಿಜಯೇಂದ್ರ ಒಂದು ತಂಡ ಮಾಡಿ ಸಮಾವೇಶ ಮಾಡುವ ವಿಚಾರದ ಕುರಿತು ಮಾತನಾಡಿ, ಏನು ಬೇಕಾದರೂ ಮಾಡಲಿ ಅವರ ಅಪ್ಪನಂತಹ ರ್‍ಯಾಲಿ ಮಾಡುತ್ತೇವೆ ಎಂದರು. ನಾವು ಕೊಟ್ಟ ಭಿಕ್ಷೆಯಿಂದಲೇ ವಿಜಯೇಂದ್ರ ಶಾಸಕರಾಗಿದ್ದು ಎಂಬ ಡಿ.ಕೆ.ಶಿವಕುಮಾರ ಹೇಳಿಕೆ ವಿಚಾರದ ಕುರಿತು ಮಾತನಾಡಿ, ನಿಮಗೇನಾದ್ರೂ ಧಮ್, ಗಟ್ಸ್, ನೈತಿಕತೆ ಇದ್ದರೆ ನೀವು ಕೊಟ್ಟ ಭಿಕ್ಷೆಯಿಂದ ನಾನು ಶಾಸಕನಾಗಿಲ್ಲ. ನನ್ನ ಬಳಿ ಧಮ್ ಇದೆ, ನಾನು ರಾಜೀನಾಮೆ ಕೊಟ್ಟು ಮತ್ತೆ ಶಾಸಕನಾಗಿ ಆಯ್ಕೆಯಾಗುತ್ತೇನೆ. ನೀವು ಯಾವ ಕ್ಯಾಂಡಿಡೇಟ್ ಬೇಕಾದರೂ ಹಾಕಿಕೊಳ್ಳಿ ಎಂದು ಆಗಲೇ ವಿಜಯೇಂದ್ರ ಹೇಳಿಕೆ ಕೊಡಬೇಕಾಗಿತ್ತು. ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಕೊಡದ ಕಾರಣ ಧಮ್, ತಾಕತ್ತು, ನೈತಿಕತೆ ಯಾವುದೂ ಇಲ್ಲ...ಇಲ್ಲ...ಇಲ್ಲ..‌ ಎಂದು ಯತ್ನಾಳ ಲೇವಡಿ ಮಾಡಿದರು.

ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಮನ ಕುರಿತು ಮಾತನಾಡಿ, ಯಾರೇ ರಾಜ್ಯಕ್ಕೆ ಭೇಟಿ ನೀಡಿದರು ನಾನು ಯಾರಿಗೂ ಭೇಟಿಯಾಗಲ್ಲ. ಕೇಂದ್ರ ಸರ್ಕಾರದ ಬಳಿ ಇಂಟೆಲಿಜೆನ್ಸ್ ಇದೆ. ಭ್ರಷ್ಟಾಚಾರ ಯಾರ್‍ಯಾರು ಮಾಡಿದ್ದಾರೆ ಯಾರು ಮುಖ್ಯಮಂತ್ರಿಯ ನಕಲಿ ಸಹಿ ಮಾಡಿದ್ದು? ಅವರ ತಂದೆಯನ್ನೇ ಯಾರು ಜೈಲಿಗೆ ಕಳುಹಿಸಿದ್ದು? ಎಂಬೆಲ್ಲ ವಿಚಾರ ಹೈಕಮಾಂಡ್‌ಗೆ ಗೊತ್ತಿದೆ. ವಂಶವಾದ, ಭ್ರಷ್ಟಾಚಾರ ರಾಜಕಾರಣ ವಿರುದ್ಧ ಹೋರಾಟ ಎಂದು ಪ್ರಧಾನಿ ಹೇಳಿದ್ದಾರೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಈ ವಂಶವಾದ ಭ್ರಷ್ಟಾಚಾರದ ವ್ಯಕ್ತಿಯನ್ನು ತಕ್ಷಣವೇ ಕಿತ್ತೊಗೆಬೇಕೆಂದು ಪಿಎಂಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಬಿಎಸ್‌ವೈ ಪರ ಯತ್ನಾಳ ಬ್ಯಾಟಿಂಗ್‌:

ಮಾಜಿ‌ ಸಿಎಂ ಯಡಿಯೂರಪ್ಪ ಮೇಲೆ ಭ್ರಷ್ಟಾಚಾರ ಆರೋಪದ ತನಿಖೆ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿರುವ ಕುರಿತು ಮಾತನಾಡಿ, ಕಾಂಗ್ರೆಸ್ ಒಂದೂವರೆ ವರ್ಷದ ಬಳಿಕ ದ್ವೇಷದ ರಾಜಕಾರಣ ಮಾಡುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಇವರು ಮಾಡಿದ್ದು ಏನು? ಸಿದ್ದರಾಮಯ್ಯ ಈಗ ಏಕೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ? ಮುಡಾ ಹಗರಣ ಗಂಭೀರತೆ ತೆಗೆದುಕೊಂಡಿದೆ. ಇಡಿಯವರು ತನಿಖೆ ಮಾಡುತ್ತಿದ್ದಾರೆ. ವಾಲ್ಮೀಕಿ ನಿಗಮದ ಹಗರಣವನ್ನು ಹೈಕೋರ್ಟ್ ನಿಗಾದಲ್ಲಿ ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿದ್ದೇವೆ. ಇಷ್ಟು ದಿನ ಅವರಿವರು ಹೊಂದಾಣಿಕೆ ಇದ್ದರು. ನಮ್ಮದನ್ನ ನೀವು ಮುಚ್ಚಿಡೋದು ನಿಮ್ಮದನ್ನ ನಾವು ಮುಚ್ಚಿಡೋದು ಎಂಬ ಒಪ್ಪಂದವಿತ್ತು. ಆ ಕರಾರು ಮುರಿದು ಹೋಗಿದೆ. ಹಾಗಾಗಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ ನಿವೃತ್ತಿಯಾಗಿರುವ ಯಡಿಯೂರಪ್ಪರ ಮೇಲೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ಯತ್ನಾಳ ವಿರುದ್ಧ ಮಾಜಿ ಶಾಸಕ ರೇಣುಕಾಚಾರ್ಯ ಹಿಗ್ಗಾಮುಗ್ಗಾ ವಾಗ್ದಾಳಿ ವಿಚಾರಕ್ಕೆ ಉತ್ತರಿಸಲು ನಿರಾಕರಿಸಿದ ಅವರು, ಲಫೂಟ್ ನನ್ ಮಕ್ಕಳ ಯಾವುದೇ ಪ್ರತಿಕ್ರಿಯೆ ಕೇಳಬೇಡಿ. ಒಳ್ಳೆಯ ರಾಜಕಾರಣದ ಬಗ್ಗೆ, ಮಾನ ಮರ್ಯಾದೆ ಇರೋರ ಬಗ್ಗೆ ಪ್ರಶ್ನೆ ಕೇಳಿ ಎಂದು ಹೇಳಿದರು.

ವಕ್ಫ್‌ ವಿರುದ್ಧದ ಯತ್ನಾಳ್ ಹೋರಾಟದಿಂದ ಎದುರಾಳಿ ಸ್ವಪಕ್ಷಿಯ ತಂಡ ವಿತಲಿತವಾಗಿದೆಯಾ ಎಂಬ ಪ್ರಶ್ನೆಗೆ ಹೌದು ಇದು ಸಹಜ ಇದೆ ಎಂದರು.

ನಾವು ವಕ್ಫ್‌ ಹೋರಾಟ ಕೈ ಬಿಡಲ್ಲ

ಮಂಡ್ಯದಲ್ಲಿ ಯತ್ನಾಳ್ ವಿರುದ್ಧ ರಕ್ತ ಪತ್ರ ಚಳುವಳಿ ವಿಚಾರಕ್ಕೆ ಲೇವಡಿ ಮಾಡಿದ ಅವರು, ಮಾಧ್ಯಮದವರು ಆ ರಕ್ತ ಈ ರಕ್ತ ಎಂದು ಸುದ್ದಿ ಮಾಡಿದರು. ಅದು ಯಾವ ರಕ್ತಾ ಇದೆಯೋ ಯಾರಿಗೆ ಗೊತ್ತು? ಅದು ಅವರದ್ದೇ ರಕ್ತ ಇದೆಯೋ, ಮತ್ಯಾರದ್ದೋ ರಕ್ತ ಇದೆಯೋ ಗೊತ್ತಿಲ್ಲ. ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಒಬ್ಬ ಗ್ರಾಪಂ ಸದಸ್ಯನನ್ನು ಆಯ್ಕೆ ಮಾಡಿಲ್ಲ. ಅವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ನನ್ನ ವಿರುದ್ಧ ರಕ್ತ ಪತ್ರ ಚಳುವಳಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಮೊದಲು ಮಂಡ್ಯದಲ್ಲಿ ನಮ್ಮ ಪಕ್ಷದ ನಾಲ್ಕು ಶಾಸಕರನ್ನಾಗಿ ಮಾಡಿ. ಮಂಡ್ಯದಲ್ಲಿರುವ ಬೂಕನಕೆರೆ ವಿಜಯೇಂದ್ರನ ಅಪ್ಪನ ಊರು. ಬೂಕನಕೆರೆಯಲ್ಲಿಯೇ ಒಬ್ಬ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರೇ ಇಲ್ಲ. ಅವರು ನನಗೆ ರಕ್ತದಲ್ಲಿ ಪತ್ರ ಬರೆಯುತ್ತಾರಂತೆ ಎಂದು ಕುಟುಕಿದರು.

ಯಾರು ಏನು ಬೇಕಾದರೂ ಮಾಡಲಿ ನಾನು ತಲೆಕೆಡಿಸಿಕೊಳ್ಳಲ್ಲ. ಶಿಫಾರಸು ಮಾಡಲಿ ಕೋರ್ ಕಮಿಟಿಯಲ್ಲಿ ಏನೇ ತೀರ್ಮಾನ ತೆಗೆದುಕೊಳ್ಳಲಿ. ನಾವು ವಕ್ಫ್‌ ಹೋರಾಟ ಕೈ ಬಿಡಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆ ಹೊಂದಾಣಿಕೆ ಇಲ್ಲ. ನಾನು ಹೊಂದಾಣಿಕೆ ಇದ್ದಿದ್ದರೆ ನನ್ನ ಸಕ್ಕರೆ ಕಾರ್ಖಾನೆಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಮೇಲೆ 42 ಕೇಸುಗಳನ್ನು ಸಿಎಂ ಹಾಗೂ ಡಿಸಿಎಂ ಹಾಕುತ್ತಿರಲಿಲ್ಲ. ವಿಜಯೇಂದ್ರನ ಮೇಲೆ ಒಂದೇ ಒಂದು ಕೇಸ್ ಹಾಕಿಲ್ಲ. ಯಡಿಯೂರಪ್ಪ ವಿರುದ್ಧ ಎಷ್ಟೇ ಗಂಭೀರ ಪ್ರಕರಣಗಳಿದ್ದರೂ ಮುಚ್ಚಿಟ್ಟಿದ್ದರು. ಈಗ ಬಿಎಸ್‌ವೈ ಪ್ರಕರಣಗಳನ್ನು ತೆಗೆಯುತ್ತಿದ್ದಾರೆ. ಅವರವರದ್ದು ಹಳಸಿದೆ, ಹಳಸಿದ್ದಕ್ಕೆ ಹಸಿದಿದ್ದಕ್ಕೆ ಒಂದಾಗಿವೆ ಎಂದು ಹೀಯಾಳಿಸಿದರು.

ಬಾಂಗ್ಲಾಗೆ ನೀಡುವ ನೆರವು ಬಂದ್‌ ಮಾಡಬೇಕು:

ಬಾಂಗ್ಲಾದೇಶದಲ್ಲಿ ಇಸ್ಕಾನ್ ಅರ್ಚಕರ ಬಂಧನ ಕುರಿತು ಪ್ರತಿಕ್ರಿಯಿಸಿ, ಬಾಂಗ್ಲಾದಲ್ಲಿ ಬಹಳ ಗಂಭೀರವಾಗುತ್ತಿದೆ. ದೇಶದಲ್ಲಿ ಮಾನವ ಹಕ್ಕು ಆಯೋಗ ಎಂದಿದೆ. ಈಗ ಅವರು ಕತ್ತಿ ಕಾಯುತ್ತಿದ್ದಾರಾ? ವಿಶ್ವದ ಮಾನವ ಹಕ್ಕು, ವಿಶ್ವ ಸಂಸ್ಥೆ ಇದೆ. ಇಂದು ಹಿಂದೂಗಳು, ಅಲ್ಪಸಂಖ್ಯಾತರು, ಕ್ರಿಶ್ಚಿಯನ್ನರ ಮೇಲೆ ಬಾಂಗ್ಲಾದಲ್ಲಿ ದಾಳಿ ಆಗುತ್ತಿದೆ. ಹೀಗಾಗಿ ಬಾಂಗ್ಲಾಕ್ಕೆ ನೀಡುತ್ತಿರುವ ಎಲ್ಲಾ ನೆರವು, ಸಹಾಯವನ್ನು ಭಾರತವು ಬಂದ್ ಮಾಡಬೇಕೆಂದು ಒತ್ತಾಯಿಸಿದರು. 

ಮುಸ್ಲಿಮರ ಬಗ್ಗೆ ಮಾತನಾಡಿದ ಒಕ್ಕಲಿಗ ಸಮಾಜದ ಚಂದ್ರನಾಥ ಸ್ವಾಮೀಜಿ ಹೇಳಿಕೆಗೆ ಪ್ರಕರಣ ದಾಖಲು ವಿಚಾರದ ಕುರಿತು ಪ್ರತಿಕ್ರಿಯಿಸಿ, ಸ್ವಾಮೀಜಿಗಳ ಮೇಲೆ ಪ್ರಕರಣ ದಾಖಲಾಗಿದ್ದಕ್ಕೆ ಖಂಡನೆ ವ್ಯಕ್ತಪಡಿಸಿದರು. ಇದು ತಪ್ಪು ಎಂದರು. ಪಾಕಿಸ್ತಾನದಲ್ಲಿ, ಅಪ್ಘಾನಿಸ್ತಾನದಲ್ಲಿ ಹಿಂದುಗಳಿಗೆ, ಕ್ರಿಶ್ಚಿಯನರಿಗೆ ಮತದಾನ ಮಾಡುವ ಹಕ್ಕಿಲ್ಲ. ನಮ್ಮಲ್ಲಿ ಯಾಕೆ ಎಂದು ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ. ಸ್ವಾಮೀಜಿ ಹಿಂದೂಗಳ ಪರವಾಗಿ ಮಾತನಾಡಿದ್ದಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸುವೆ. ಅವರ ವಿರುದ್ಧ ದಾಖಲಾಗಿರುವ ಪ್ರಕರಣ ವಾಪಸ್ ಪಡೆಯಬೇಕು. ಇಲ್ಲವಾದರೆ ಇದನ್ನ ಒಕ್ಕಲಿಗ ಸಮಾಜ ಸರ್ಕಾರವನ್ನು ಕೇಳಬೇಕು? ಬಹಳ ಸ್ವಾಭಿಮಾನಿ ವ್ಯಕ್ತಿ ಇದ್ದಾನಲ್ಲ ಡಿ.ಕೆ.ಶಿವಕುಮಾರ ಈ ಕುರಿತು ಮಾತನಾಡಲಿ ಎಂದು ಆಗ್ರಹಿಸಿದರು.ಮತ ಬೇಕಾದಾಗ ಚುನಾವಣೆ ವೇಳೆ ಸ್ವಾಮೀಜಿಗೆ ಶಾಲು, ಹಾರ ಹಾಕಿ ಭೇಟಿಯಾಗುತ್ತಾರಲ್ಲ ಡಿಕೆಶಿ. ನಮ್ಮ ಪರವಾಗಿ ಆಶೀರ್ವಾದ ಮಾಡಿ, ನಮ್ಮ ಸಮಾಜಕ್ಕೆ ಹೇಳಿ ಎಂದು ಇದೇ ಡಿಕೆಶಿ ಹೋಗುತ್ತಾರೆ ಎಂದರು.

ಕೂಡಲಸಂಗಮ ಸ್ವಾಮೀಜಿಗೆ ಸರ್ಕಾರಕ್ಕೆ ಮುಜುಗರ ಮಾಡಬೇಡಿ ಎಂದು ತಾಯಿ ಲಕ್ಷ್ಮಿ ಅಕ್ಕ ಹೇಳುತ್ತಾರೆ. ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ನಮ್ಮ ಸರ್ಕಾರ ಇದ್ದಾಗಲೂ ನಾನು ಹೋರಾಟ ಮಾಡಿರುವೆ. ನಿಮ್ಮ ಧಮ್ಮು, ತಾಕತ್ತು ಇದ್ದರೆ ನಾಳೆ ವಿಧಾನಸಭಾದಲ್ಲಿ ನಾನು ಮೀಸಲಾತಿ ವಿಚಾರದ ಪ್ರಶ್ನೆ ಮಾಡುತ್ತೇನೆ. ನನ್ನ ಜೊತೆ ಬಾವಿಗಿಳಿದು ಹೋರಾಟ ಮಾಡಿದರೆ ಮುಂದಿನ ಸಾರಿ ನೀವು ವಿಧಾನಸಭೆಯ ಕಟ್ಟೆ ಹತ್ತುತ್ತೀರಿ. ಇಲ್ಲವಾದರೆ ಮನೆಗೆ ಹೋಗುತ್ತೀರಿ ಎಂದು ಕುಟುಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಳವಿ ಮಹಾರಥೋತ್ಸವ ಸಂಪನ್ನ
ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ: ಹರಿಹರಪುರ ಶ್ರೀ