ಯತ್ನಾಳ್‌ರಿಗೆ ಹಿಂದೂ - ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌

KannadaprabhaNewsNetwork |  
Published : Nov 02, 2024, 01:43 AM ISTUpdated : Nov 02, 2024, 08:12 AM IST
1ಭುವನೇಶ್ವರಿ - ಕನ್ನಡ ರಾಜ್ಯೋತ್ಸವದಂಗವಾಗಿ ಸಚಿವ ಲಕ್ಷ್ಮೀ ಹೆಬ್ಬಾಳಕರ್ ಕನ್ನಡ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಉಡುಪಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಧ್ವಜಾರೋಹಣ ನೆರವೇರಿಸಿದರು.

  ಉಡುಪಿ : ರಾಜ್ಯದಲ್ಲಿ ವಕ್ಫ್‌ ಮಂಡಳಿಯಿಂದ ಭೂಮಿ ಒತ್ತುವರಿ ಆಗಿರುವುದಕ್ಕೆ ಕಂದಾಯ ಸಚಿವಾಲಯ ನೋಟಿಸ್ ಕೊಟ್ಟಿದೆ. ಯಾರನ್ನೂ ಒಕ್ಕಲೆಬ್ಬಿಸಲ್ಲ, ಯಾರಿಗೂ ಅನ್ಯಾಯ ಮಾಡಲ್ಲ. ಎಲ್ಲರನ್ನು ಸಮಾನರಾಗಿ ಕರೆದುಕೊಂಡು ಹೋಗುವುದೇ ನಮ್ಮ ಉದ್ದೇಶ. ವಕ್ಫ್ ವಿಷಯದಲ್ಲಿ ಗೊಂದಲ ಸೃಷ್ಟಿಸುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ‌ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.

ಉಡುಪಿಯಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವಕ್ಫ್ ಸೊತ್ತುಗಳನ್ನು ರಾಷ್ಟ್ರೀಕರಣಗೊಳಿಸಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಕಿಡಿಕಾರಿದರು.ಯತ್ನಾಳ್ ಬಗ್ಗೆ ಮಾತನಾಡಲು ಏನೂ ಇಲ್ಲ. ಅವರಿಗೆ ಹಿಂದೂ - ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ. 

ಅದನ್ನು ಹೇಳಿಕೊಂಡೆ ಅವರು ಗೆದ್ದುಕೊಂಡು ಬಂದವರು ಎಂದರು. ಗಂಡಸರಿಗೆ ಬಿಯರ್‌ ರೇಟ್ ಜಾಸ್ತಿ ಮಾಡಿ, ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಲಾಗುತ್ತಿದೆ ಎಂಬ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮಹಿಳೆಯರಿಗೆ ಮೊದಲು ಗೌರವ ಕೊಡಿ, ಬಿಯರ್ ಗಿಯರ್ ಆಮೇಲೆ ಮಾತಾಡಿ. ಭಾಗ್ಯ ಯೋಜನೆಗಳಿಂದ ಜಿಡಿಪಿ ಜಾಸ್ತಿಯಾಗಿದೆ. ಮಹಿಳೆಯರು ಪುರುಷರಿಗೆ ಸಮಾನವಾಗಿ ಬದುಕುವುದಕ್ಕೆ ಸಾಧ್ಯವಾಗಿದೆ. 

ವಿಶ್ವನಾಥ್ ಹಿರಿಯರು, ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ಬಿಡಿ. ಬಸವಣ್ಣನ ನಾಡಿನಲ್ಲಿ ಮಹಿಳೆಯರನ್ನು ಸರಿಸಮನಾಗಿ ಕಾಣಿರಿ ಎಂದು ಹೇಳಿದರು.

ಅನ್ಯಧರ್ಮೀಯರ ಜೊತೆ ಹಿಂದುಗಳು ವ್ಯಾಪಾರ ನಿಲ್ಲಿಸುವಂತೆ ರಾಮ ಸೇನೆಯ ಧರ್ಮ ದಂಗಲ್ ಕರೆಗೆ ಉತ್ತರಿಸಿದ ಸಚಿವೆ, ಉಡುಪಿ ಜಿಲ್ಲೆಯಲ್ಲಿ ಧರ್ಮ ದಂಗಲ್ ಅಗತ್ಯವಿಲ್ಲ, ಅವಕಾಶವೂ ಕೊಡುವುದಿಲ್ಲ ಎಂದರು.ಕಾಂಗ್ರೆಸ್ಸಿಗರು ನಗರ ನಕ್ಸಲರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಧಾನಮಂತ್ರಿಗಳು ಯಾವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಪಕ್ಷಾತೀತವಾಗಿ ನರೇಂದ್ರ ಮೋದಿ ನಮ್ಮ ಪ್ರಧಾನಿಗಳು. ನಮ್ಮ ಪ್ರಧಾನಿ ಮೇಲೆ ನಮಗೆ ಗೌರವ ಇದೆ. ಕಾಂಗ್ರೆಸ್ಸನ್ನು ಗುರಿಯಾಗಿಸಿ ಅವರು ಈ ಮಾತನಾಡಿದ್ದರೆ ಅದು ಅಸಂವಿಧಾನಿಕ ಮಾತಾಗುತ್ತದೆ ಎಂದರು.

ಹಪ್ತಾ ವಸೂಲಿ ಮಾಡುವ ಅಗತ್ಯ ನನಗಿಲ್ಲ: ಹೆಬ್ಬಾಳ್ಕರ್

ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿಗೆ ಬರೋದು ಹಫ್ತಾ ವಸೂಲಿಗೆ ಎಂಬ ದಲಿತ ಸಂಘಟನೆಯ ಆರೋಪಕ್ಕೆ, ಲಕ್ಷ್ಮೀ ಹೆಬ್ಬಾಳ್ಕರ್‌ ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಜಾಸ್ತಿ. ಹಫ್ತಾ ವಸೂಲಿ ಮಾಡುವ ಅನಿವಾರ್ಯತೆ ಅವಶ್ಯಕತೆ ನನಗಿಲ್ಲ ಎಂದರು.

ಹೆಸರು ಕೆಡಿಸುವವರು ಕೆಡಿಸುತ್ತಾ ಇರುತ್ತಾರೆ, ಮಾತನಾಡುವವರು ಮಾತನಾಡಲಿ ಅವರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಒಳ್ಳೆ ಭಾವನೆಯಿಂದ ಒಳ್ಳೆಯ ರಾಜಕಾರಣ ಮಾಡುತ್ತಿದ್ದೇನೆ. ನನಗೆ ಉಡುಪಿಯ ಜನಕ್ಕೆ ಒಳ್ಳೆಯದನ್ನು ಮಾಡಿದ ತೃಪ್ತಿ ಇದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!