ಮೈಸೂರು ವಿವಿಗೆ ಪ್ರೊ. ಮಾದಯ್ಯ ಕೊಡುಗೆ ಅಪಾರ

KannadaprabhaNewsNetwork |  
Published : Jul 12, 2025, 12:32 AM IST
9 | Kannada Prabha

ಸಾರಾಂಶ

ಪರಿಸರ ವಿಜ್ಞಾನದಲ್ಲಿ ಭೌತ, ರಸಾಯನ, ಜೀವ ವಿಜ್ಞಾನ, ಗಣಿತ- ಹೀಗೆ ಎಲ್ಲವೂ ಸೇರಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರೊ.ಎಂ. ಮಾದಯ್ಯ ಅವರಿಗೆ ಅಂತರ್‌ ಶಿಸ್ತೀಯ ಅಧ್ಯಯನದ ಬಗ್ಗೆ ಮುಂದಾಲೋಚನೆ ಇತ್ತು. ಇದರಿಂದಾಗಿಯೇ ಮಾನಸ ಗಂಗೋತ್ರಿಯಲ್ಲಿ ಪರಿಸರ ವಿಜ್ಞಾನ ಕೋರ್ಸ್‌ ಆರಂಭಿಸಿದರು ಎಂದು ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಹೇಳಿದರು.

ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ರಾಂತ ಕುಲಪತಿ ಪ್ರೊ.ಎಂ. ಮಾದಯ್ಯ ವರ್ಷದ ನೆನಪು ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಪರಿಸರ ವಿಜ್ಞಾನದಲ್ಲಿ ಭೌತ, ರಸಾಯನ, ಜೀವ ವಿಜ್ಞಾನ, ಗಣಿತ- ಹೀಗೆ ಎಲ್ಲವೂ ಸೇರಿದೆ. ಈ ರೀತಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳ ಬಗ್ಗೆ ಕಲಿಯಬೇಕು ಎಂಬುದು ಅವರ ಮಹದಾಸೆಯಾಗಿತ್ತು, ಹೀಗಾಗಿಯೇ ಮಹಿಳಾ ಅಧ್ಯಯನ ಕೂಡ ಆರಂಭಿಸಿದರು ಎಂದರು.

ಮಾದಯ್ಯ ಅವರನ್ನು ವಿವಿಯು ಸದಾ ಸ್ಮರಿಸುವಂತೆ ಸಾಧನೆ ಮಾಡಿ ಹೋಗಿದ್ದಾರೆ. ವಿವಿಯ ಮೂಲ ಉದ್ದೇಶಕ್ಕೆ ಯಾವುದೇ ಚ್ಯುತಿ ಬಾರದಂತೆ ಬೋಧನೆ, ಸಂಶೋಧನೆ, ವಿಸ್ತರಣಾ ಚಟುವಟಿಕೆಗಳನ್ನು ಮುಂದಾಲೋಚನೆಯಿಂದ ನಡೆಸಿಕೊಂಡು ಹೋಗುತ್ತಿದ್ದರು ಎಂದರು.

ತುಂಬಾ ಶ್ರಮ ಜೀವಿ:

ದಾವಣಗೆರೆ ವಿವಿ ವಿಶ್ರಾಂತ ಕುಲಪತಿ ಪ್ರೊ.ಇಂದುಮತಿ ಮಾತನಾಡಿ, ಹೆಣ್ಣು ಮಕ್ಕಳು ಹೆಚ್ಚು ಕಲಿಯಬೇಕು ಎಂಬುದು ಪ್ರೊ.ಮಾದಯ್ಯ ಅವರ ಆಶಯವಾಗಿತ್ತು. ತುಂಬಾ ಶ್ರಮಜೀವಿ. ಕಷ್ಟಪಟ್ಟು ಮೇಲೆ ಬಂದರು. ಸದಾ ಅಧ್ಯಯನಶೀಲರಾಗುತ್ತಿದ್ದರು. ಮನೆಯಲ್ಲಿ ಬೃಹತ್‌ ಗ್ರಂಥಾಲಯವನ್ನೇ ಸ್ಥಾಪಿಸಿದ್ದಾರೆ ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಖ್ಯಾತ ಆರ್ಥಿಕ ತಜ್ಞರೂ ಆಗಿದ್ದ ಪ್ರೊ.ಎಂ. ಮಾದಯ್ಯ ಅವರು ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಡಾ.ಮನಮೋಹನ್‌ ಸಿಂಗ್‌ ಅವರು ಆಪ್ತ ಸ್ನೇಹಿತರಾಗಿದ್ದರು. ಅವರು ಕುಲಪತಿಯಾಗಿದ್ದ ಅವಧಿಯಲ್ಲಿಯೇ ಡಾ.ಸಿಂಗ್‌ ಅವರು ಘಟಿಕೋತ್ಸವದಲ್ಲಿ ಕೂಡ ಭಾಗಿಯಾಗಿದ್ದರು. ಅವರಿಗೆ ಮೈಸೂರು ವಿವಿ ವತಿಯಿಂದ ಗೌರವ ಡಾಕ್ಟರೇಟ್‌ ಕೂಡ ಪ್ರದಾನ ಮಾಡಲಾಗಿತ್ತು ಎಂದರು.

ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ ಇದ್ದರು. ಕನ್ನಡ ಉಪನ್ಯಾಸಕಿ ಸಂಧ್ಯಾರಾಣಿ ಕಾರ್ಯಕ್ರಮ ನಿರೂಪಿಸಿದರು.-- ಬಾಕ್ಸ್ 1--

- ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ--

ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್‌. ಶಿವರಾಜಪ್ಪ ಮಾತನಾಡಿ, ಪ್ರೊ.ಎಂ. ಮಾದಯ್ಯ ಅವರಿಗೆ ವೈಯಕ್ತಿಕ ಕೆಲಸ ಕಾರ್ಯಗಳಿಗಿಂತ ವಿಶ್ವವಿದ್ಯಾಲಯ ಹಾಗೂ ವಿದ್ಯಾರ್ಥಿಗಳ ಏಳ್ಗೆ ಬಗ್ಗೆ ಅಪಾರವಾದ ಕಾಳಜಿ ಇತ್ತು. ಹೀಗಾಗಿ ಸರ್ಕಾರ ನಿಗದಿಪಡಿಸಿದ ಕಚೇರಿ ವೇಳೆಯನ್ನು ಮೀರಿ ಸದಾಕಾಲ ಕೆಲಸ ಮಾಡುತ್ತಿದ್ದರು. ಪರಿಶಿಷ್ಟ ಜಾತಿ ಮತ್ತು ವರ್ಗ, ಹಿಂದುಳಿದ ವರ್ಗ, ಶೋಷಿತರು ಸೇರಿದಂತೆ ಎಲ್ಲ ವರ್ಗದವರನ್ನು ಬೋಧಕ, ಬೋಧಕೇತರ ಹುದ್ದೆಗಳಿಗೆ ಭರ್ತಿ ಮಾಡಿ, ಸಾಮಾಜಿಕ ನ್ಯಾಯ ನೀಡಿದರು ಎಂದರು.ಎನ್ನೆಸ್ಸೆಸ್‌ಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಸೆನೆಟ್‌ ಭವನ, ಗಂಗೋತ್ರಿ ಕ್ರೀಡಾಂಗಣ ನಿರ್ಮಿಸಿದರು. ವಿವಿ ಕ್ಯಾಂಪಸ್‌ನಲ್ಲಿ ಸುಮಾರು 50 ಸಾವಿರ ಗಿಡಗಳನ್ನು ನೆಡಿಸಿ, ಹಸರೀಕರಣಕ್ಕೆ ಕಾರಣಕರ್ತರಾದರು. ಹೀಗಾಗಿ ಅವರ ಹೆಸರು ಚಿರಸ್ಥಾಯಿಯಾಗಿರುತ್ತದೆ ಎಂದರು.ಮಹಿಳೆಯರ ವಿದ್ಯೆಗೆ ಮಹತ್ವ ನೀಡುತ್ತಿದ್ದ ಪ್ರೊ.ಎಂ. ಮಾದಯ್ಯ ಅವರು ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿಗೆ ಮಾನ್ಯತೆ ನೀಡಿದರು ಎಂದು ಅವರು ಸ್ಮರಿಸಿದರು.

PREV