ಕನ್ನಡಪ್ರಭ ವಾರ್ತೆ ಬೆಂಗಳೂರು
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ವರ್ಷದ ಕೊನೆಯ ದಿವಸ ಅತಿ ಹೆಚ್ಚು ಮದ್ಯ ಮಾರಾಟವಾಗುತ್ತದೆ. ಅದೇ ರೀತಿ ಈ ಬಾರಿಯೂ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿ ಬೊಕ್ಕಸಕ್ಕೆ ರಾಜಸ್ವ ‘ಹರಿದು’ ಬರುವ ನಿರೀಕ್ಷೆ ಇದೆ. ವೈನ್ಸ್ ಸ್ಟೋರ್, ಬಾರ್ ಅಂಡ್ ರೆಸ್ಟೋರೆಂಟ್, ಪಬ್‌ಗಳು, ಎಂಎಸ್‌ಐಎಲ್ ಮಳಿಗೆ, ಹೋಲ್‌ಸೇಲ್ ಮದ್ಯದಂಗಡಿಗಳಿಗೆ ಕೆಲವೆಡೆ ಬೈಕ್, ಕಾರುಗಳಲ್ಲಿ ಆಗಮಿಸಿದ ಜನರು ಕೇಸ್‌ಗಟ್ಟಲೆ ಮದ್ಯ ಖರೀದಿಸಿದ್ದೂ ಕಂಡುಬಂತು.
ಬೆಳಿಗ್ಗೆಯಿಂದಲೇ ಪಾರ್ಟಿ ಮೂಡ್‌ನಲ್ಲಿದ್ದ ಕೆಲವರು ಮದ್ಯದ ಬಾಟೆಲ್‌ಗಳನ್ನು ಖರೀದಿಸಿ ಮನೆ, ಅಪಾರ್ಟ್‌ಮೆಂಟ್‌ಗಳತ್ತ ತೆರಳಿದರೆ, ಸಂಜೆಯಾಗುತ್ತಿದ್ದಂತೆ ವೈನ್ಸ್ ಸ್ಟೋರ್, ಬಾರ್ ಅಂಡ್ ರೆಸ್ಟೋರೆಂಟ್, ಪಬ್‌ಗಳಲ್ಲಿ ಜನಜಂಗುಳಿ ಉಂಟಾಯಿತು. ದುಬಾರಿ ದರದ ಮದ್ಯಗಳಿಗೆ ಬೆಲೆ ರಿಯಾಯಿತಿ, ಹೆಚ್ಚಿನ ಪ್ರಮಾಣದ ಖರೀದಿಗೆ ಒಂದು ಬಾಟೆಲ್ ಉಚಿತ ನೀಡುವ ಘೋಷಣೆಗಳೂ ಕಂಡು ಬಂದವು.ಮದ್ಯದಂಗಡಿಗಳನ್ನು ವಿಶೇಷವಾಗಿ ಬಲ್ಬ್‌ಗಳಿಂದ ಅಲಂಕರಿಸಿದ್ದು ವಿಶಿಷ್ಟ ಖಾದ್ಯಗಳನ್ನೂ ನೂತನ ವರ್ಷಾಚರಣೆಗೆ ತಯಾರಿಸಲಾಗಿತ್ತು. ಅನಾಹುತ, ಕಿರಿಕ್ ನಡೆಯದಂತೆ ನೋಡಿಕೊಳ್ಳಲು ಒಂದಷ್ಟು ಜನರನ್ನು ‘ಉಸ್ತುವಾರಿ’ ನೋಡಿಕೊಳ್ಳಲೂ ಕೆಲವೆಡೆ ನೇಮಿಸಿಕೊಳ್ಳಲಾಗಿತ್ತು. ಮದ್ಯ ಸೇವನೆಯ ಬಳಿಕ ಮುಖ್ಯ ರಸ್ತೆಗಳಲ್ಲಿ ವಾಹನ ಚಾಲನೆ ಮಾಡಿದರೆ ಸಂಚಾರ ಪೊಲೀಸರ ಕೈಗೆ ಸಿಗುವ ಭಯದಿಂದ ಗಲ್ಲಿ ರಸ್ತೆಗಳಲ್ಲಿ ಸಂಚರಿಸಬೇಕೆಂಬ ಚರ್ಚೆಯೂ ನಡೆಯುತ್ತಿತ್ತು.
ಹೊಸ ವರ್ಷದ ಹಿನ್ನೆಲೆಯಲ್ಲಿ ಡಾಬಾಗಳಲ್ಲೂ ಮದ್ಯಪ್ರಿಯರು ‘ಠಿಕಾಣಿ’ ಹಾಕಿದ್ದರು. ಕೆಲ ಪಬ್‌ಗಳ ಪ್ರವೇಶಕ್ಕೂ ದರ ನಿಗದಿ ಮಾಡಿದ್ದು ಪ್ರವೇಶದ ಬಳಿಕ ಅನಿಯಮಿತ ಮದ್ಯ ಸೇರಿದಂತೆ ಹಲವು ವಿಧಗಳಿಗೆ ಪ್ರತ್ಯೇಕ ದರ ನಿಗದಿಯಾಗಿತ್ತು. ಒಟ್ಟಾರೆ, ಮದ್ಯ ಮಾರಾಟದ ಭರಾಟೆ ಎಲ್ಲೆಡೆ ಕಂಡುಬಂತು. ಹೊಸ ವರ್ಷಾಚರಣೆಗೆ ಮಧ್ಯರಾತ್ರಿ ಎರಡು ಗಂಟೆಯವರೆಗೂ ಅವಕಾಶ ಇದ್ದುದು ಸಹ ಮದ್ಯ ಮಾರಾಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲು ಕಾರಣವಾಯಿತು.