ರಾಮನಗರ: ನಾನ್ ಪ್ರಾಕ್ಟಿಸಿಂಗ್ ಅಡ್ವೋಕೇಟ್ ಆಗಿರುವ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ರಂಗನಾಥ್ ರವರಿಗೆ ಶಿಕ್ಷಣ ಕ್ಷೇತ್ರದ ಗಂಧ ಗಾಳಿಯೇ ಗೊತ್ತಿಲ್ಲ. ಆದರೆ, ನಾನು ಶಿಕ್ಷಕರ ಸ್ವಾಭಿಮಾನ ಎತ್ತಿ ಹಿಡಿಯುವ, ಅವರ ಸಮಸ್ಯೆ ಬಗೆಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಹೀಗಾಗಿ ನಾನೇ ಶಿಕ್ಷಣ ಕ್ಷೇತ್ರದ ಪಿಆರ್‌ಒ ಆಗಿದ್ದೇನೆ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ತಿರುಗೇಟು ನೀಡಿದರು.
ಹೊರ ರಾಜ್ಯದವರಿಗೆ ಶಿಕ್ಷಣ ಸಂಸ್ಥೆ ತೆರೆಯಲು ಸರ್ಕಾರ ಅನುಮತಿ ನೀಡುತ್ತದೆ. ಆ ಶಾಲೆಗಳಲ್ಲಿ ಸ್ಥಳೀಯ ಮಕ್ಕಳು ವ್ಯಾಸಂಗ ಮಾಡುತ್ತಾರೆ. ಆ ಮಕ್ಕಳಿಗೆ ತೊಂದರೆಯಾದಾಗ ನಮ್ಮನ್ನು ಪ್ರಶ್ನೆ ಮಾಡುತ್ತಾರೆ. ಆ ಮಕ್ಕಳನ್ನು ಕಾಪಾಡುವ ಜವಾಬ್ದಾರಿ ನಮ್ಮದಲ್ಲದೆ ಮತ್ಯಾರದು. ನಾನು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನಿಷ್ಠೆಯಾಗಿರುತ್ತೇನೆ. ಉಳಿದುದೆಲ್ಲ ನನಗೆ ನಗಣ್ಯ. ನನ್ನನ್ನು ನಂಬಿರುವ ಶಿಕ್ಷಕರಿಗೆ ನಂಬಿಕೆ ದ್ರೋಹ ಮಾಡಲ್ಲ ಎಂದರು.
ಪಕ್ಷಾಂತರ ಮಾಡಿದರೂ ಮಾರಾಟ ಆಗಿಲ್ಲ:ಸಾರ್ವಜನಿಕ ಜೀವನದಲ್ಲಿ ನಾನು ಕಪ್ಪು ಚುಕ್ಕೆ ಅಂಟಿಸಿಕೊಂಡವನಲ್ಲ. ಶಿಕ್ಷಕರ ಹಿತ ಕಾಪಾಡುವ ಪ್ರಶ್ನೆ ಬಂದಾಗ ನನ್ನಂತಹ ಹೋರಾಟಗಾರರಿಗೆ ಅಧಿಕಾರಕ್ಕೆ ರಾಜೀನಾಮೆ ಕೊಡುವಂತಹ ತೀರ್ಮಾನ ಅಗತ್ಯವಾಗಿರುತ್ತದೆ. ಆದರೆ, ನಾನೆಂದು ಸ್ವ ಹಿತಾಸಕ್ತಿಗಾಗಿ ಪಕ್ಷಾಂತರ ಮಾಡಿದವನಲ್ಲ. ಪಕ್ಷಾಂತರ ಮಾಡಿದರೂ ಮಾರಾಟ ಆಗಿಲ್ಲ. ವ್ಯಕ್ತಿತ್ವ ಕಳೆದುಕೊಂಡಿಲ್ಲ. ವಿದ್ಯಾರ್ಥಿ ದಿನದಲ್ಲಿದ್ದ ಬದ್ಧತೆಯನ್ನೇ ಇಟ್ಟುಕೊಂಡು ಹೋರಾಟ ನಡೆಸುತ್ತಿದ್ದೇನೆ.ಜೆಡಿಎಸ್ ನಲ್ಲಿ 20 ತಿಂಗಳು, ಬಿಜೆಪಿಯಲ್ಲಿ ಒಂದೂವರೆ ವರ್ಷ ಅಷ್ಟೇ ನಾನು ಅಧಿಕಾರದಲ್ಲಿದ್ದೆ. ಉಳಿದ ಅವಧಿಯಲ್ಲಿ ವಿರೋಧ ಪಕ್ಷದಲ್ಲಿ ಕುಳಿತಿದ್ದೆ. ಯಾರಿಗೆ ಹೋರಾಟ ಮನೋಭಾವನೆ ಇರುವುದಿಲ್ಲವೊ ಅಂಥವರು ಜಡತ್ವದಿಂದ ಅಲ್ಲಿಯೇ ಉಳಿಯುತ್ತಾರೆ. ನಾನು ಶಾಲಾ ಕಾಲೇಜು ದಿನಗಳಲ್ಲಿಯೇ ಹೋರಾಟ ಮೈಗೂಡಿಸಿಕೊಂಡವನು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡಿದ್ದೇನೆ. ಅದರಲ್ಲಿ ಹಿಂಜರಿಕೆ ಇಲ್ಲ. ನನ್ನದು ತೆರೆದ ಪುಸ್ತಕ ಎಂದು ಹೇಳಿದರು.
ನಾನು ಬೋಗಸ್ ಮತದಾನದಿಂದ ಗೆದ್ದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ, ಬೇಡ ಅಂದವರು ಯಾರು? ಪ್ರತಿ ಚುನಾವಣೆಯಲ್ಲಿ ಮತದಾರರ ನೋಂದಣಿಗೆ 9 ತಿಂಗಳ ಅವಕಾಶ ಇರುತ್ತಿತ್ತು. ಈ ಉಪಚುನಾವಣೆಗೆ 3 ತಿಂಗಳಿಗೆ ಸೀಮಿತಗೊಳಿಸಿದರು. 9 ತಿಂಗಳು ಕಾಲಾವಕಾಶ ನೀಡಿದ್ದರೆ ಮತದಾರರ ಸಂಖ್ಯೆ ಹೆಚ್ಚಾಗುತ್ತಿತ್ತು. ಇಷ್ಟು ಸಾಮಾನ್ಯ ಜ್ಞಾನ ಕೂಡ ನಾನ್ ಪ್ರಾಕ್ಟಿಸಿಂಗ್ ಅಡ್ವೋಕೇಟ್ ರಂಗನಾಥ್ ಅವರಿಗಿಲ್ಲ ಎಂದು ವ್ಯಂಗ್ಯವಾಡಿದರು.
ಶಿಕ್ಷಕರು ನನ್ನ ಮನೆಯ ಸದಸ್ಯರಿದ್ದಂತೆ. ನನ್ನ ಜೀವನದಲ್ಲಿ ಒಬ್ಬ ಶಿಕ್ಷಕನ ಮೇಲೆ ದೂರು ದಾಖಲಿಸಿ ಕಿರುಕುಳ ನೀಡಿಲ್ಲ. ಮೈತ್ರಿ ಅಭ್ಯರ್ಥಿ ಆರೋಪಿಸಿದಂತೆ ನಾನು ದೂರು ದಾಖಲಿಸಿದ್ದರೆ ಆ ಶಿಕ್ಷಕರು ನನ್ನ ಪರವಾಗಿ ಏಕೆ ಚುನಾವಣೆ ಮಾಡುತ್ತಿದ್ದಾರೆ. ಕಾಪಾಡಿದವರನ್ನು ಬಿಟ್ಟು ನನ್ನೊಂದಿಗೆ ಏಕೆ ಬಂದರು. ಅವರಂತೆ ನಾನು ಶಾಲಾ ಆಡಳಿತ ಮಂಡಳಿಯವರಿಗೆ ಧಮಕಿ ಹಾಕಿ ಮತ ಕೇಳುತ್ತಿಲ್ಲ. ಅವರಿಗೆ ಆತ್ಮಸಾಕ್ಷಿ ಎಂಬುದಿದ್ದರೆ ವಕೀಲ ಎಂಬುದನ್ನು ಮರೆತು ಶಿಕ್ಷಕರೊಂದಿಗೆ ಸೌಜನ್ಯದಿಂದ ವರ್ತಿಸಲಿ ಎಂದರು.
ಕೋಟ್ .............
- ಪುಟ್ಟಣ್ಣ, ಕಾಂಗ್ರೆಸ್ ಅಭ್ಯರ್ಥಿ, ಬೆಂಗಳೂರು ಶಿಕ್ಷಕರ ಕ್ಷೇತ್ರ
ಬೆಂಗಳೂರು ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.