ಕನ್ನಡಪ್ರಭ ವಾರ್ತೆ ಗುಬ್ಬಿ / ತುಮಕೂರುಬರುವ ನವೆಂಬರ್ ಮಾಹೆಯ ಅಂತ್ಯದೊಳಗೆ ತುಮಕೂರಿಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ಜಿಲ್ಲೆಯ ಗುಬ್ಬಿ ತಾಲೂಕು ಕಂಚಿಗಾನಹಳ್ಳಿಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ಪ್ಯಾಕೇಜ್ 11ರ ಕಾಮಗಾರಿ ಸ್ಥಳಕ್ಕೆ ಗುರುವಾರ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರಾಜ್ಯದ ಮಹತ್ವಾಕಾಂಕ್ಷಿ ಎತ್ತಿನಹೊಳೆ ನೀರಾವರಿ ಯೋಜನೆ ಮೂಲಕ ತುಮಕೂರಿಗೆ ನೀರು ಹರಿಸಲು ಸರ್ಕಾರ ಪಣತೊಟ್ಟಿದೆ. ಕಾಮಗಾರಿ ಸ್ಥಳದಲ್ಲಿ ಎದುರಾಗಿರುವ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಲು ಸಚಿವರು ತ್ವರಿತ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು. ಕಂಚಿಗಾನಹಳ್ಳಿಯ ಅರಣ್ಯ ಇಲಾಖೆಗೆ ಸೇರಿದ 1.9 ಕಿ.ಮೀ ಜಾಗವನ್ನು ಪರಿಶೀಲಿಸಿದ ಅವರು, ಯೋಜನೆಗೆ ಅಗತ್ಯವಿರುವ ಅರಣ್ಯ ಇಲಾಖೆಯ ೨ನೇ ಹಂತದ ಅನುಮತಿಗೆ ಸಂಬಂಧಿಸಿದ ಕಡತಗಳು ಈಗಾಗಲೇ ನವದೆಹಲಿಗೆ ತಲುಪಿವೆ ಎಂದು ಸ್ಪಷ್ಟಪಡಿಸಿದರಲ್ಲದೆ, ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ದೆಹಲಿಗೆ ಅರ್ಜಿ ಸಲ್ಲಿಸಿದ್ದು, ಸತತ ಪ್ರಯತ್ನದ ಫಲವಾಗಿ ಇನ್ನೊಂದು ವಾರದಲ್ಲಿ ಕೇಂದ್ರದಿಂದ ಅಂತಿಮ ಒಪ್ಪಿಗೆ (ಕ್ಲಿಯರೆನ್ಸ್) ದೊರೆಯುವ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು. ಗುರುತ್ವಾಕರ್ಷಣಾ ಕಾಲುವೆ (ಗ್ರಾವಿಟಿ ಕೆನಾಲ್) ನಿರ್ಮಾಣದಲ್ಲಿ ಗುಣಮಟ್ಟಕ್ಕೆ ಅತ್ಯುನ್ನತ ಆದ್ಯತೆ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದರು. ಕಾಮಗಾರಿ ಸ್ಥಳದಲ್ಲಿ 28 ಮೀಟರ್ ಆಳದ ಭೂಮಿಯನ್ನು ಅಗೆಯ(ಡೀಪ್ ಕಟ್)ಬೇಕಾಗಿದ್ದು, ಇಲ್ಲಿ ಮಣ್ಣು ಕುಸಿಯದಂತೆ ಅತ್ಯಂತ ಎಚ್ಚರಿಕೆಯಿಂದ ‘ಕಟ್ ಆ್ಯಂಡ್ ಕವರ್'''''''' ತಂತ್ರಜ್ಞಾನದ ಮೂಲಕ ಗುಣಮಟ್ಟದ ಕೆಲಸ ನಡೆಯಬೇಕು ಎಂದು ನಿರ್ದೇಶಿಸಿದರು. ಮಣ್ಣನ್ನು ತಾತ್ಕಾಲಿಕವಾಗಿ ಹೊರಹಾಕಲು ಹೆಚ್ಚುವರಿಯಾಗಿ ನೀಡಿರುವ 10 ಎಕರೆ ಜಾಗದಲ್ಲೇ ಹಾಕಿ, ತದನಂತರ ಅದೇ ಮಣ್ಣನ್ನು ಮರಳಿ ತುಂಬುವ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು. ಎರಡೂ ಕಡೆ ಕಾಲುವೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಅಕ್ಟೋಬರ್ 15 ರೊಳಗಾಗಿ ತುಮಕೂರು ಭಾಗದ ಕಾಮಗಾರಿ ಸಂಪೂರ್ಣಗೊಳ್ಳಲಿದೆ ಹಾಗೂ ಶೇಕಡಾ ೧೦೦ರಷ್ಟು ನೀರು ಪೂರೈಸುವುದು ನಿಶ್ಚಿತ ಎಂದು ಅವರು ಭರವಸೆ ನೀಡಿದರು.
------------
ಕೋಟ್......ತುಮಕೂರು ಮತ್ತು ರಾಮನಗರ ಎರಡೂ ಭಾಗದ ರೈತರು ನಮಗೆ ಸಮಾನರು. ಎಲ್ಲರೂ ನಮ್ಮವರೇ ಆಗಿರುವುದರಿಂದ, ಯಾರೊಬ್ಬರಿಗೂ ಅನ್ಯಾಯವಾಗದಂತೆ ಮುಖ್ಯಮಂತ್ರಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿ, ಎಲ್ಲರಿಗೂ ಒಳಿತಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.- ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ