ಯೋಧ ಅನೂಪ್‌ ಪೂಜಾರಿ ಕಾಯ ಪಂಚಭೂತಗಳಲ್ಲಿ ಲೀನ

KannadaprabhaNewsNetwork |  
Published : Dec 27, 2024, 12:48 AM ISTUpdated : Dec 27, 2024, 12:49 AM IST
ಪಂಚಭೂತಗಳಲ್ಲಿ ಲೀನವಾದ ಅನೂಪ್ ಪೂಜಾರಿಯವರ ಪಾರ್ಥೀವ ಶರೀರ. | Kannada Prabha

ಸಾರಾಂಶ

ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಮಂಗಳವಾರ ಸೇನಾ ವಾಹನ ಅಪಘಾತದಲ್ಲಿ ಹುತಾತ್ಮ ಯೋಧ ಅನೂಪ್ ಪೂಜಾರಿ (33) ಪಾರ್ಥೀವ ಶರೀರ ಹುಟ್ಟೂರು ಕುಂದಾಪುರ ತಾಲೂಕು ಬೀಜಾಡಿಗೆ ಗುರುವಾರ ಬೆಳಗ್ಗೆ ತಲುಪಿದ್ದು, ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಶ್ರೀಕಾಂತ ಹೆಮ್ಮಾಡಿ

ಕನ್ನಡಪ್ರಭ ವಾರ್ತೆ ಕುಂದಾಪುರ

ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಮಂಗಳವಾರ ಸೇನಾ ವಾಹನ ಅಪಘಾತದಲ್ಲಿ ಹುತಾತ್ಮ ಯೋಧ ಅನೂಪ್ ಪೂಜಾರಿ (33) ಪಾರ್ಥೀವ ಶರೀರ ಹುಟ್ಟೂರು ಕುಂದಾಪುರ ತಾಲೂಕು ಬೀಜಾಡಿಗೆ ಗುರುವಾರ ಬೆಳಗ್ಗೆ ತಲುಪಿದ್ದು, ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕಾಶ್ಮೀರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಂಗಳೂರಿಗೆ ಸೇನಾ ವಿಮಾನದಲ್ಲಿ ತರಲಾದ ಪಾರ್ಥೀವ ಶರೀರವನ್ನು ಗುರುವಾರ ಮುಂಜಾನೆ ೨.೩೦ಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬ್ರಿಜೇಶ್ ಚೌಟ ಬರಮಾಡಿಕೊಂಡರು. ಬೆಳಗ್ಗೆ ಉಡುಪಿಯಿಂದ ಅಲಂಕೃತ ವಾಹನದಲ್ಲಿ ಹುಟ್ಟೂರಿನತ್ತ ಸಾಗಿ ಬಂದ ಯೋಧನ ಪಾರ್ಥೀವ ಶರೀರಕ್ಕೆ ರಾ.ಹೆದ್ದಾರಿ-೬೬ರ ಇಕ್ಕೆಲಗಳಲ್ಲಿ ನಿಂತಿದ್ದ ಜನರು ‘ಅನೂಪ್ ಪೂಜಾರಿ ಅಮರ್ ರಹೇ...’ ಎನ್ನುವ ಉದ್ಘೋಷಣೆ ಕೂಗುತ್ತಾ, ಹೂವುಗಳನ್ನು ಚೆಲ್ಲುತ್ತಾ ಅಂತಿಮ ನಮನ ಸಲ್ಲಿಸಿದರು. ರಾ.ಹೆದ್ದಾರಿಯುದ್ದಕ್ಕೂ ಜನಪ್ರತಿನಿಧಿಗಳು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ತೆಕ್ಕಟ್ಟೆಯಲ್ಲಿ ಪಾರ್ಥೀವ ಶರೀರ ಸ್ವೀಕರಿಸಿದ ಕುಂದಾಪುರದ ಉಪವಿಭಾಗಾಧಿಕಾರಿ ಮಹೇಶ್ಚಂದ್ ಹಾಗೂ ತಹಸೀಲ್ದಾರ್ ಎಚ್.ಎಸ್ ಶೋಭಾಲಕ್ಷ್ಮೀ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಬೀಜಾಡಿ ಗ್ರಾಮದ ಕೆರೆಮನೆಯಲ್ಲಿನ ಅನೂಪ್ ಅವರ ಮನೆಗೆ ತರಲಾಯಿತು. ನೆರೆದಿದ್ದ ಸಾವಿರಾರು ಮಂದಿಯ ಕಣ್ಣೀರಧಾರೆ ಹಾಗೂ ಅಮರ್ ರಹೇ ಎನ್ನುವ ಘೋಷಣೆಗಳ ನಡುವೆ ಕುಟುಂಬಿಕರು ಅಂತಿಮ ವಿಧಿ ನಡೆಸಿದರು.

ಅಪರ ಜಿಲಾಧಿಕಾರಿ ಮಮತಾ ದೇವಿ ಜಿ.ಎಸ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ನೇತೃತ್ವದಲ್ಲಿ ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಕುಶಲ ತೋಪುಗಳನ್ನು ಹಾರಿಸಿ ಗೌರವ ನಮನ ಸಲ್ಲಿಸಿದರು.

ಕಲಿತ ಶಾಲೆಯಲ್ಲಿ ಅಂತಿಮ ನಮನ:

ಅನೂಪ್ ಪೂಜಾರಿ ಕಲಿತ ಬೀಜಾಡಿಯ ಪಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಾರ್ಥೀವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ಅಶ್ರುತರ್ಪಣ ಸಲ್ಲಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ರಘುಪತಿ ಭಟ್, ಹಿಂದೂ ಸಂಘಟನೆಯ ಮುಖಂಡ ಸತ್ಯಜಿತ್ ಸುರತ್ಕಲ್, ಮಾಜಿ ಸೈನಿಕರು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಅಗಲಿದ ಯೋಧನಿಗೆ ಗೌರವ ವಂದನೆ ಸಲ್ಲಿಸಿದರು.

ಸಿದ್ಧತೆಯ ಜವಾಬ್ದಾರಿಯನ್ನು ಸ್ವಯಂಪ್ರೇರಿತರಾಗಿಯೇ ಸ್ಥಳೀಯ ಯುವಕರು ವಹಿಸಿಕೊಂಡರು.

ಸೇನೆಯಿಂದ ಗೌರವ ವಂದನೆ:

ಪಾರ್ಥೀವ ಶರೀರದ ಜೊತೆಗೆ ಬಂದಿದ್ದ ಭಾರತೀಯ ಭೂಸೇನೆಯ ಮರಾಠ ರೆಜಿಮೆಂಟ್‌ನ ಲೈಟ್ ಇನ್ಫೆಂಟ್ರಿ ಬೆಟಾಲಿಯನ್‌ನ ಸಹೋದ್ಯೋಗಿ ಯೋಧರು ಹಾಗೂ ಅಧಿಕಾರಿಗಳು ಅಂತ್ಯ ಸಂಸ್ಕಾರದ ಕೊನೆಯವರೆಗೂ ಉಪಸ್ಥಿತರಿದ್ದರು. ಅರಬ್ಬಿ ಕಡಲಿನ ತೀರದಲ್ಲಿ ನಿರ್ಮಿಸಲಾದ ಚಿತೆಯ ಮುಂದೆ ಪಾರ್ಥೀವ ಶರೀರ ಇರಿಸಿದ ಬಳಿಕ ಸೇನೆಯ ಯೋಧರು ಅನೂಪ್ ಪೂಜಾರಿ ಅವರ ಗೌರವಾರ್ಥವಾಗಿ ಮೂರು ಸುತ್ತು ಗಾಳಿಯಲ್ಲಿ ಗುಂಡನ್ನು ಹಾರಿಸಿದರು. ಸೈನ್ಯದ ಅಧಿಕಾರಿಗಳಾದ ಗುರುಂಧರ್ ಸಿಂಗ್, ಶಂಕರ್ ಗೌಡ ಪಾಟೀಲ್, ಆಂಜನೇಯ ಪಾಟೀಲ್ ಹಳಿಯಾಳ, ಸಂತೋಷ್ ಎಚ್.ಪಿ. ಮಡಿಕೇರಿ, ಪ್ರದೀಪ್ ಮಳವಳ್ಳಿ ಹುಬ್ಬಳ್ಳಿ ಹಾಗೂ ಉಡುಪಿ ಎನ್‌ಸಿಸಿ ಘಟಕದ ಹಿರಿಯ ಅಧಿಕಾರಿಗಳು ಇದ್ದರು.

ರಾಷ್ಟ್ರ ಧ್ವಜ ಹಸ್ತಾಂತರ:

ಪಾರ್ಥೀವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಅನೂಪ್ ಪೂಜಾರಿ ಪತ್ನಿ ಮಂಜುಶ್ರೀಗೆ ಹಸ್ತಾಂತರಿಸಲಾಯಿತು. ಮೃತದೇಹದ ಅಗ್ನಿ ಸ್ಪರ್ಶದ ವೇಳೆ ಜಮಾಯಿಸಿದ್ದ ಜನರು ಅಂತಿಮ ದರ್ಶನ ಪಡೆಯಲು ಗೂಡ್ಸ್ ವಾಹನ ಹಾಗೂ ಮರಗಳನ್ನು ಏರಿದ ಪ್ರಸಂಗವೂ ನಡೆಯಿತು.

ನನ್ನ ಗೊಂಬೆ..ಏನಾಯ್ತು ಮಗನೇ..!

ಪಾರ್ಥೀವ ಶರೀರ ಮನೆಗೆ ಬರುತ್ತಿದ್ದಂತೆ ಪತ್ನಿ, ತಾಯಿ ಹಾಗೂ ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹದ ಅಗ್ನಿ ಸ್ಪರ್ಶ ಮಾಡುವ ಮೊದಲು ಅಂತಿಮ ದರ್ಶನ ಪಡೆಯುವ ವೇಳೆ ತಾಯಿ ಚಂದು ಪೂಜಾರ‍್ತಿ ‘ನನ್ನ ಗೊಂಬೆ..ಏನಾಯ್ತು ಮಗನೇ’ ಎಂದು ಕಣ್ಣೀರು ಸುರಿಸುತ್ತ ಬಂದ ದೃಶ್ಯ ನೆರೆದವರ ಕಣ್ಣಾಲಿಗಳನ್ನು ತೇವಗೊಳಿಸಿತು.

ಬಿಲ್ಲವ ಸಂಪ್ರದಾಯದಂತೆ ಅನೂಪ್ ದೊಡ್ಡಮ್ಮನ ಮಕ್ಕಳಾದ ಶಿವರಾಮ್ ಅಮೀನ್ ಹಾಗೂ ತಿಲಕ್ ಅಮೀನ್ ಅಂತಿಮ ವಿಧಿಗಳನ್ನು ಪೂರೈಸಿದರು. ಪಾರ್ಥೀವ ಶರೀರಕ್ಕೆ ಶಿವರಾಮ್ ಅಮೀನ್ ಅಗ್ನಿ ಸ್ಪರ್ಶ ಮಾಡುತ್ತಿದ್ದಂತೆ, ನೆರೆದಿದ್ದ ಜನಸ್ತೋಮ ಅನೂಪ್ ಪೂಜಾರಿ ಅಮರ್ ರಹೇ.. ಭಾರತ್ ಮಾತಾಕೀ ಜೈ.. ಎನ್ನುವ ಉದ್ಘೋಷಣೆ ಮಾಡಿದರು.

ಕಣ್ಣೀರಾದ ಪತ್ನಿ:

ಮದುವೆಯಾದ ಬಳಿಕ ಹಿಮಾಚಲ ಪ್ರದೇಶದಲ್ಲಿ ನಾವು ಜೊತೆಯಾಗಿಯೇ ಇದ್ದೆವು. ಜಮ್ಮು-ಕಾಶ್ಮೀರದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ್ದಾರೆ. ಕಾಶ್ಮೀರದ ಗಡಿಭಾಗವಾದ ಪೂಂಚ್ ಆಟ್ಯಾಕ್ ಆದ ಬಳಿಕ ಅಲ್ಲಿಗೆ ನೇಮಕಾತಿ ಮಾಡಲಾಗಿತ್ತು. ಇನ್ನು ಆರು ತಿಂಗಳಲ್ಲಿ ಗುಜರಾತ್‌ಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕಿತ್ತು. ಕಾಶ್ಮೀರದಲ್ಲಿಯ ಘಟನೆಯ ಕುರಿತು ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದ್ದ ಹೊತ್ತಿಗೆ ಅನೂಪ್ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ರಾತ್ರಿ ಮಿಲಿಟರಿ ವಾಹನ ಅಪಘಾತವಾಗಿರುವ ಮಾಹಿತಿ ಗೊತ್ತಾದ ಬಳಿಕ ಆತಂಕ ಇನ್ನೂ ಹೆಚ್ಚಾಯಿತು. ದಿನಪ್ರತಿ ಪತಿಯ ಕರೆಗಾಗಿ ಕಾದಿದ್ದ ನನಗೆ ಬುಧವಾರ ಬೆಳಗ್ಗೆ ದುರ್ಘಟನೆಯ ಮಾಹಿತಿ ದೊರಕಿದೆ ಎಂದು ಪತ್ನಿ ಮಂಜುಶ್ರೀ ಕಣ್ಣೀರಿಟ್ಟರು.

ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ, ಜಿಲ್ಲಾ ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ., ಪ್ರಭಾರ ಪೊಲೀಸ್ ನಿರೀಕ್ಷಕ ಜಯರಾಮ್ ಗೌಡ, ಉಪನಿರೀಕ್ಷಕರಾದ ನಂಜಾ ನಾಯ್ಕ್, ಪ್ರಸಾದ್, ಸುಧಾ ಪ್ರಭು ಮುಂತಾದವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

.....................

ರಸ್ತೆ ತೊಳೆದು ರಂಗೋಲಿ ಹಾಕಿದರು!ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ಪಾರ್ಥೀವ ಶರೀರ ಸಾಗಿ ಬರುವ ಸುಮಾರು 3-4 ಕಿ.ಮೀ ಉದ್ದದ ಬೀಜಾಡಿಯ ರಸ್ತೆ ಸಮೀಪದ‌ ಮನೆಯವರು ರಸ್ತೆ ತೊಳೆದು ರಂಗೋಲಿ ಹಾಕಿ ಊರ ಮಗನ ಆಗಮನಕ್ಕಾಗಿ ಭಕ್ತಿಪೂರ್ವಕ ವಂದನೆಗಳನ್ನು ಸಲ್ಲಿಸಿ, ಅಗಲಿದ ಊರ ಮಗನಿಗೆ ಕಂಬನಿಗಳೊಂದಿಗೆ ಗೌರವದ ವಿದಾಯ ಸಲ್ಲಿಸಿದರು.

...............

ತಾಜ್ ದಾಳಿಯೇ ಸೇನೆಗೆ ಪ್ರೇರಣೆ!

ಮುಂಬೈಯಲ್ಲಿ ತಾಜ್ ಹೋಟೆಲ್ ಮೇಲೆ ದಾಳಿಯಾದ ಘಟನೆಯನ್ನು ಟಿವಿಯಲ್ಲಿ ನೋಡಿದ್ದ ಅನೂಪ್, ಆ ದಿನದಿಂದಲೇ ಸೈನ್ಯಕ್ಕೆ ಸೇರಬೇಕು ಎನ್ನುವ ದೃಢ ನಿರ್ಧಾರ ಮಾಡಿದ್ದರು ಎನ್ನಲಾಗಿದೆ. ಮೃದು ಸ್ವಭಾವದ ಅನೂಪ್ ಧೈರ್ಯವಂತ. ಕಡಲಿನಲ್ಲಿ ಜೀವನ ನಡೆಸುವ ನಮಗೆ ಎಚ್ಚರಿಕೆಯಿಂದ ಇರುವಂತೆ ಪದೇಪದೆ ಎಚ್ಚರಿಸುತ್ತಿದ್ದ, ಅವರ ದುರಂತ ಅಗಲಿಕೆ ನೋವನ್ನು ತಂದಿದೆ ಎಂದು ಬಾಲ್ಯ ಸ್ನೇಹಿತ ಶರತ್, ಅನೂಪ್ ಜೊತೆಗಿನ ನೆನಪುಗಳನ್ನು ಕಣ್ಣೀರಿಡುತ್ತಲೇ ಹಂಚಿಕೊಂಡಿದ್ದಾರೆ.

----------------

ನನ್ನ ತಮ್ಮನ ಹೆಂಡತಿಗೆ ನ್ಯಾಯ ಕೊಡಿಸಿ. ಅವಳಿಗೆ ಚಿಕ್ಕ ಮಗುವಿದೆ. ಇರುವ ಒಬ್ಬನೇ ಮಗನನ್ನು ಕಳೆದುಕೊಂಡಿರುವ ನನ್ನಮ್ಮನನ್ನು ನೋಡಿಕೊಳ್ಳುವವರು ಯಾರು. ದಯವಿಟ್ಟು ಸರ್ಕಾರದವರು ನನ್ನ ನಾದಿನಿಗೊಂದು ಕೆಲಸ ನೀಡಲಿ.

। ಶಾರದಾ, ಅನೂಪ್ ಸಹೋದರಿ........................ಇಡೀ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದ ಅನೂಪ್ ಸಾವಿನಿಂದಾಗಿ ಕುಟುಂಬದ ಆಧಾರ ಸ್ತಂಭವೇ ಕುಸಿದು ಬಿದ್ದಿದೆ. ಪತ್ನಿ, ಪುತ್ರಿ ಮತ್ತು ತಾಯಿಯ ಕಾಳಜಿಯ ಬಗ್ಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಗಂಭೀರ ಚಿಂತನೆ ನಡೆಸಬೇಕು.

। ಅಶೋಕ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ ಬೀಜಾಡಿ ಅಧ್ಯಕ್ಷರು

..................

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಸಂಘಗಳ ಬಲವರ್ಧನೆಗೆ ವಿಮೆ ಅನಿವಾರ್ಯ
ಕವಿಚಕ್ರವರ್ತಿ ರನ್ನನ ಇತಿಹಾಸ ಉಳಿಸಿ, ಬೆಳೆಸಬೇಕಿದೆ: ಎ.ಎಂ. ಕಂಬಾರ