ಕನ್ನಡಪ್ರಭ ವಾರ್ತೆ ಹಾಸನಯೋಗವು ಕೇವಲ ವ್ಯಾಯಾಮವಲ್ಲ, ಅದು ದೈಹಿಕ, ಮಾನಸಿಕ, ಪ್ರತಿನಿತ್ಯ ಉಲ್ಲಾಸದಿಂದ ಕೆಲಸ ಮಾಡಲು ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ವೃದ್ಧಿಸುವ ಜೀವನ ಪದ್ಧತಿಯಾಗಿದೆ ಎಂದು ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದರು.ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಹಾಕಿ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾನಗರ ಪಾಲಿಕೆ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಮೇರಾ ಯುವ ಭಾರತ್, ಎನ್‌ಸಿಸಿ, ಭಾರತ್ ಸೇವಾದಳ ಹಾಗೂ ವಿವಿಧ ಯೋಗ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ೧೨ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಇಂದಿನ ವೇಗದ ಜೀವನಶೈಲಿಯಲ್ಲಿ ಪ್ರತಿಯೊಬ್ಬರೂ ಮಾನಸಿಕ ಒತ್ತಡ, ಆತಂಕ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಯೋಗವು ಉತ್ತಮ ಪರಿಹಾರವಾಗಿದೆ. ಔಷಧಿಗಳ ಅವಲಂಬನೆಯಿಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಯೋಗಾಭ್ಯಾಸದ ಮೂಲಕ ನಿಯಂತ್ರಿಸಬಹುದು. ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿರುವ ಯೋಗವನ್ನು ಭಾರತವು ವಿಶ್ವಕ್ಕೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ ಎಂದರು. ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳ ನಡುವೆ ಕನಿಷ್ಠ ಸ್ವಲ್ಪ ಸಮಯವನ್ನು ಯೋಗಕ್ಕೆ ಮೀಸಲಿಡಬೇಕು. ಯೋಗದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುವುದರ ಜೊತೆಗೆ ದೈಹಿಕ ಸಾಮರ್ಥ್ಯವೂ ಹೆಚ್ಚುತ್ತದೆ. ದೈಹಿಕ ಸವಾಲುಗಳನ್ನು ಎದುರಿಸುವುದು ಸುಲಭವಾದರೂ, ಮಾನಸಿಕ ಒತ್ತಡಗಳನ್ನು ನಿಭಾಯಿಸುವುದು ಕಷ್ಟಕರ. ಜ್ಞಾನ ಮತ್ತು ಯೋಗವೇ ಇದಕ್ಕೆ ಉತ್ತಮ ಔಷಧ ಎಂದು ಹೇಳಿದರು. ಈ ಯೋಗ ದಿನಾಚರಣೆಯಂದು ತಾವು ಒಂದು ಸಂಕಲ್ಪ ಮಾಡಿದ್ದು, ಸೋಮವಾರದಿಂದ ಪ್ರತಿದಿನ ಕನಿಷ್ಠ ೧೫ ನಿಮಿಷಗಳ ಕಾಲ ಯೋಗಾಭ್ಯಾಸ ಮಾಡುವುದಾಗಿ ಘೋಷಿಸಿದರು. ಯೋಗದ ಮಹತ್ವವನ್ನು ಮಕ್ಕಳಿಗೂ ಪರಿಚಯಿಸಬೇಕು ಹಾಗೂ ಶಾಲಾ ಹಂತದಲ್ಲಿಯೇ ಯೋಗಾಭ್ಯಾಸವನ್ನು ಜೀವನದ ಭಾಗವನ್ನಾಗಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಚ್. ಪಿ. ಸ್ವರೂಪ್, ಆರೋಗ್ಯವೇ ಮನುಷ್ಯನ ನಿಜವಾದ ಸಂಪತ್ತು. ಹಣ ಮತ್ತು ಆಸ್ತಿಯನ್ನು ಸಂಪಾದಿಸಬಹುದು, ಆದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಅಮೂಲ್ಯ ಸಾಧನವಾಗಿದೆ ಎಂದು ಹೇಳಿದರು. ಹಾಸನ ನಗರದಲ್ಲಿ ಪತಂಜಲಿ ಸಂಸ್ಥೆ ಸೇರಿದಂತೆ ಹಲವು ಸಂಘಟನೆಗಳು ಯೋಗ ತರಬೇತಿ ಕೇಂದ್ರಗಳನ್ನು ನಡೆಸುತ್ತಿದ್ದು, ಜನರಲ್ಲಿ ಆರೋಗ್ಯದ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಯೋಗವು ಭಾರತದಲ್ಲಿ ಹುಟ್ಟಿಕೊಂಡು ಇಂದು ವಿಶ್ವದ ೧೯೩ ರಾಷ್ಟ್ರಗಳಲ್ಲಿ ಆಚರಿಸಲ್ಪಡುವ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರತಿಯೊಬ್ಬರೂ ಯೋಗವನ್ನು ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ ಮಾತನಾಡಿ, ದಿನದ ೨೪ ಗಂಟೆಗಳ ಅವಧಿಯಲ್ಲಿ ಕನಿಷ್ಠ ಅರ್ಧ ಗಂಟೆಯಾದರೂ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕಾಗಿ ಮೀಸಲಿಡಬೇಕು. ಯೋಗದಿಂದ ಆರೋಗ್ಯಕರ ಜೀವನ, ಉತ್ತಮ ಮನೋಸ್ಥೈರ್ಯ ಹಾಗೂ ಸುಖಕರ ವೃದ್ಧಾಪ್ಯ ಸಾಧ್ಯವಾಗುತ್ತದೆ ಎಂದು ಹೇಳಿದರು. ಯೋಗ ಖಚಿತ ಆರೋಗ್ಯ ಉಚಿತ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಬಾಲ್ಯದಿಂದಲೇ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳದ ಕಾರಣ ವಯಸ್ಸಾದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಉತ್ತಮ ವೃದ್ಧಾಪ್ಯಕ್ಕಾಗಿ ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಯೋಗಾಭ್ಯಾಸಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಮಕ್ಕಳು, ಯುವಕರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲರೂ ಯೋಗಾಭ್ಯಾಸ ಮಾಡಬಹುದು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸಮತೋಲನ, ಏಕಾಗ್ರತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಯೋಗ ಸಹಕಾರಿಯಾಗಿದೆ. ಪ್ರತಿದಿನವನ್ನೂ ಯೋಗ ದಿನವನ್ನಾಗಿ ಆಚರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಇದೇ ವೇಳೆ ಎಸ್.ಡಿ.ಎಂ. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಆಯುರ್ವೇದ ಮತ್ತು ಯೋಗ ತಜ್ಞರಾದ ಡಾ. ಗುರುಬಸವರಾಜು ಯಲಗಚ್ಚಿನ ಅವರು ಯೋಗದ ಮಹತ್ವದ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಎಸ್‌ಡಿಎಂ ಆಯುರ್ವೇದ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪ್ರಸನ್ನ ಎನ್. ರಾವ್, ಪ್ರಾಂಶುಪಾಲರಾದ ಡಾ. ಶೈಲಜಾ ಉಪ್ಪಿನಕುದುರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆನಂದಮೂರ್ತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಎಂ. ಲಕ್ಷ್ಮೀಕಾಂತ್, ಪತಂಜಲಿ ಯೋಗ ಪರಿವಾರದ ಶಾರದ ಧರ್ಮಾನಂದ್, ಸುರೇಶ್, ಲೋಕನಾಥ್, ದೊರೆಸ್ವಾಮಿ, ರೂಪ, ವಿ.ಎಸ್. ರಾಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಯೋಗ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಸಾಮೂಹಿಕ ಯೋಗಾಭ್ಯಾಸ ನಡೆಸಿದರು.