ಕನ್ನಡಪ್ರಭ ವಾರ್ತೆ ಕಲಬುರಗಿ
ಅಂಬಿಕಾ, ಶ್ವೇತಾ, ಕಾದಂಬರಿ, ರಾಣಿ, ರೂಪಾ, ಜ್ಯೋತಿ, ದೇವಿಕಾ, ಸಂಜನಾ, ಸಹನಾ, ಗೀತಾ, ಪ್ರತಿಭಾ, ರಾಜಶ್ರೀ ಹೀಗೆ ಸೇರಿದ್ದವರೆಲ್ಲರೂ ಚಕಚಕನೆ ಯೋಗ ಭಂಗಿಗಳನ್ನೆಲ್ಲ ಪರ್ದರ್ಶಿಸುತ್ತ ಸೇರಿದ್ದವರನ್ನೆಲ್ಲ ಬೆರಗಾಗುವಂತೆ ಮಾಡಿದ್ದರು.
1 ಗಂಟೆಗಳ ಯೋಗ ಪ್ರದರ್ಶನದಲ್ಲಿ ಅಂಬಿಕಾ ಸಂತೋಷ ಸಾವಳಗಿಯವರ ಯೋಗದ ಪ್ರದರ್ಶನ ಮೈ ನವಿರೇಳಿಸುವಂತಿತ್ತು. 15 ನಿಮಿಷಕ್ಕೂ ಹೆಚ್ಚುಕಾಲ ಒಬ್ಬರೇ ತರಹೇವಾರಿ ಯೋಗ ಭಂಗಿಗಳಲ್ಲಿ, ಆಸನಗಳನ್ನೆಲ್ಲ ಹಾಕುತ್ತ ಸೇರಿದ್ದವರ ಗಮನ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದರು.ಕಾದಂಬರಿ, ಶ್ವೇತಾ, ರೂಪಾ ಸೇರಿದಂತೆ ಅನೇಕರು ಡಂಬೆಲ್ಸ್ ಹಿಡಿದು, ಕೈಯಲ್ಲಿ ಬಲೂನ್ ಹಿಡಿದು, ಪದರ್ಶಿಸಿದ ಚಕ್ರಾಸನ, ಯೋಗದಲ್ಲೇ ಹೂವಿನ ಆಕೃತಿ ಅರಳಿಸಿ ತೋರಿದ ನಾವಿನ್ಯತೆ ಸೇರಿದ್ದ ಸಭಿಕರಿಗೆಲ್ಲರಿಗೂ ಕೌತುಕಮಯವಾಗಿತ್ತು.
ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಪತ್ರಕರ್ತ ಶೇಷಮೂರ್ತಿ ಅವಧಾನಿ, ಮೀನಾಕ್ಷಿ ಅವಧಾನಿ, ನಾರಾಯಣರಾವ ಆಶಿತ, ಡಾ. ಕೋರಳ್ಳಿ ಪ್ರಲ್ಹಾದರಾವ್ ಯೋಗ ಕೇಂದ್ರದ ಸಾಧನೆಗೆ ಮೆಚ್ಚುಗೆ ನುಡಿಗಳನ್ನಾಡಿದರು.
ಯೋಗದಿಂದ ರೋಗ ದೂರವಾದರೆ, ಮಾನಸಿಕ ಸ್ವಾಸ್ಥ್ಯ, ನೆಮ್ಮದಿ ಹತ್ತಿರವಾಗುತ್ತವೆ. ಹೆಣ್ಣು ಮಕ್ಕಳು ಎಲ್ಲರಿಗೂ ಸಮಯ ಕೊಡುತ್ತಾರೆ. ಈ ಯೋಗ ಕೇಂದ್ರದಲ್ಲಿ ಬಂದವರೆಲ್ಲರೂ ತಮಗಾಗಿ ಒಂದೆರಡು ಗಂಟೆ ಕೊಟ್ಟು ಯೋಗಸಾನಗಳೊಂದಿಗೆ ಆರೋಗ್ಯಪೂರ್ಣ ಬದುಕು ಕಟ್ಟುತ್ತಿರೋದು ನಿಜಕ್ಕೂ ಎಲ್ಲರಿಗೂ ಮಾದರಿ ಎಂದು ಸರ್ಕಾರಿ ಐಟಿಐ ಕಾಲೇಜಿನ ಕಿರಿಯ ತರಬೇತಿ ಅಧಿಕಾರಿ ಮೀನಾಕ್ಷಿ ಅವದಾನಿ ಹೇಳಿದರು.ನಮ್ಮ ಋಷಿ ಮುನಿಗಳ ಕಾಲದಿಂದಲೂ ಆರೋಗ್ಯ ಮತ್ತು ಔಷಧದ ಭಾಗವಾಗಿ ಭಾರತೀಯರು ಯೋಗವನ್ನು ಅನುಸರಿಸುತ್ತಿದ್ದು, ಇಡೀ ವಿಶ್ವಕ್ಕೆ ಯೋಗ ಭಾರತದ ಅದ್ಭುತ ಕೊಡುಗೆಯಾಗಿದೆ ಎಂದು ವೈದ್ಯರಾದ ಡಾ. ಕೆ ಪ್ರಲ್ಹಾದರಾವ್, ಪತ್ರಕರ್ತ ಶೇಷಮೂರ್ತಿ ಅವಧಾನಿ ಹೇಳಿದರಲ್ಲದೆ ಸ್ಟೇ ಫಿಟ್ ಯೋಗ ಕೇಂದ್ರದ ಸಾಧನೆಯನ್ನು ಶ್ಲಾಘಿಸಿದರು.
ನಂತರ ಅತಿಥಿಗಳು ಯೋಗದಲ್ಲಿ ಸಾಧನೆ ಮಾಡಿದ ಯೋಗಪಟುಗಳಿಗೆ ಪದಕಗಳನ್ನು ವಿತರಿಸಿ ಶುಭ ಕೋರಿದರು. ಗೀತಾ ಪ್ರಾರ್ಥಿಸಿದರು. ಅಂಚೆ ಉಳಿತಾಯ ಖಾತೆ ಏಜೆಂಟ್ ಶ್ರೀನಿವಾಸ ಕುಲಕರ್ಣಿ, ಅಂಚೆ ಇಲಾಖೆಯ ಸಿಬ್ಬಂದಿ ಮಾಧವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.