ಬಳ್ಳಾರಿ: ಯೋಗವು ಮಾನವನ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಕೊಡುಗೆ ನೀಡಿದೆ ಎಂದು ಉಡುಪಿಯ ರಾಷ್ಟ್ರ ಮಟ್ಟದ ಯೋಗಪಟು ಡಾ.ಚೈತ್ರಾ ಹೇಳಿದರು.
ಯೋಗ ಕೇವಲ ವ್ಯಾಯಾಮವಲ್ಲ. ಮನಸ್ಸು, ದೇಹ, ಆತ್ಮವನ್ನು ಸಂಯೋಜಿಸುತ್ತದೆ. ದೇಹದ ಸಾಮರಸ್ಯ, ಆಲೋಚನೆ, ದೇಹದಲ್ಲಿ ನಡೆಯುವ ಕ್ರಿಯೆಗಳ ನಡುವಿನ ಸಮತೋಲನ, ಸಂಯಮ ಹಾಗೂ ಏಕಾಗ್ರತೆಯನ್ನು ಪ್ರೇರೇಪಿಸುತ್ತದೆ. ಯೋಗದಿಂದಾಗಿ ಒತ್ತಡದ ಜೀವನ ನಿರ್ವಹಿಸಲು ಹಾಗೂ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎನ್.ರುದ್ರೇಶ್ ಮಾತನಾಡಿ, ಯೋಗವು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಯೋಗ ದಿನಾಚರಣೆಯು ವೈಯಕ್ತಿಕ ಆರೋಗ್ಯಕ್ಕಾಗಿ ಮಾತ್ರ ಸೀಮಿತವಾಗಿರದೇ ಸಮಾಜಕ್ಕೂ ಮಹತ್ವ ನೀಡಲಾಗಿದೆ. ಯೋಗವನ್ನು ನಮ್ಮಲ್ಲಿ ಅಳವಡಿಸಿಕೊಳ್ಳವುದರಿಂದ ಗುರಿ ಸಾಧನೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.ಒತ್ತಡ ನಿರ್ವಹಣೆಗಾಗಿ ಜನರು ಇಂದು ಯೋಗ ಅಳವಡಿಸಿಕೊಳ್ಳುತ್ತಿದ್ದಾರೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರತಿನಿತ್ಯ ಯೋಗಾಭ್ಯಾಸ ನಡೆಸಲಾಗುತ್ತದೆ. ಯೋಗಾಭ್ಯಾಸದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಹೇಳಿದರು.
ವಿವಿಯ ಯೋಗ ಅಧ್ಯಯನ ಉಪನ್ಯಾಸಕ ಮಹೇಶಬಾಬು ಯೋಗದ ವಿವಿಧ ಭಂಗಿಗಳ ಮೂಲಕ ಯೋಗಾಭ್ಯಾಸ ಮಾಡಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ.ಚೈತ್ರಾ ಯೋಗ ಪ್ರದರ್ಶಿಸಿದರು. ಯೋಗ ವಿದ್ಯಾರ್ಥಿಗಳಿಂದ ಯೋಗ ನೃತ್ಯ ಮಾಡಲಾಯಿತು.
ವಿವಿಯ ಸಿಂಡಿಕೇಟ್ ಸದಸ್ಯರಾದ ರಮೇಶ್ ಸವದಿ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಂಯೋಜಕ ಡಾ.ಶಶಿಧರ ಕೆಲ್ಲೂರ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.