ಸದೃಢ ಆರೋಗ್ಯಕ್ಕೆ ಯೋಗ ಸಹಕಾರಿ: ಎಂ.ಎಸ್. ದಿವಾಕರ

KannadaprabhaNewsNetwork |  
Published : Jun 22, 2025, 01:18 AM IST
21ಎಚ್‌ಪಿಟಿ5- ಹೊಸಪೇಟೆಯಲ್ಲಿ ಶನಿವಾರ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರು ಅಂತಾರಾಷ್ಟ್ರೀಯ 11ನೇ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. | Kannada Prabha

ಸಾರಾಂಶ

ಹೊಸಪೇಟೆ ನಗರದ ಸ್ವಾತಂತ್ರ್ಯ ಉದ್ಯಾನ (ಫ್ರೀಡಂ ಪಾರ್ಕ್)ದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಅಂತಾರಾಷ್ಟ್ರೀಯ 11ನೇ ಯೋಗ ದಿನಾಚರಣೆ ಕಾರ್ಯಕ್ರಮ ಶನಿವಾರ ನಡೆಯಿತು.

ಹೊಸಪೇಟೆ: ಆರೋಗ್ಯಕರ ಜೀವನ ಸಾಗಿಸಲು ಮತ್ತು ದೈಹಿಕವಾಗಿ ಸದೃಢವಾಗಲು ಯೋಗವು ಮುಖ್ಯ ಪಾತ್ರ ವಹಿಸಲಿದೆ. ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಸಲಹೆ ನೀಡಿದರು.

ನಗರದ ಸ್ವಾತಂತ್ರ್ಯ ಉದ್ಯಾನ (ಫ್ರೀಡಂ ಪಾರ್ಕ್)ದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆಯುಷ್ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ, ಪತಂಜಲಿ ಯೋಗ ಸಂಸ್ಥೆ, ಎ.ಎಫ್.ಐ. ಮತ್ತು ವಿವಿಧ ಯೋಗ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಅಂತಾರಾಷ್ಟ್ರೀಯ 11ನೇ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು.

ಈಗಿನ ಯುವ ಜನರಿಗೆ ಯೋಗದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ವೇದಕಾಲದಿಂದಲೂ ಯೋಗದ ಬಗ್ಗೆ ಭಾರತದಲ್ಲಿ ಕಲ್ಪನೆ ಇದೆ. ಬದಲಾದ ಜೀವನ ಶೈಲಿಯಿಂದಾಗಿ ಅಸಮತೋಲನ ಆಹಾರ ಪದ್ದತಿಗಳಿಂದ ಅನಾರೋಗ್ಯಪೀಡಿತರಾಗುತ್ತಿರುವುದು ಹೆಚ್ಚಾಗಿದೆ. ರೋಗಮುಕ್ತವಾಗಲು ಯೋಗ ರೂಢಿಸಿಕೊಳ್ಳಬೇಕಿದೆ. ಕೇವಲ ವಯಸ್ಸಾದ, ದಪ್ಪ ಮತ್ತು ಆರೋಗ್ಯ ಸಮಸ್ಯೆ ಇದ್ದವರು ಮಾತ್ರ ಯೋಗ ಮಾಡಬೇಕು ಎಂಬ ತಪ್ಪು ಕಲ್ಪನೆಯಿಂದ ಹೊರಬರಬೇಕಿದೆ. ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಇದು ಸಹಕಾರಿಯಾಗಲಿದೆ. ಮಾನಸಿಕ ಒತ್ತಡ, ಖಿನ್ನತೆ ಕಡಿಮೆ ಮಾಡಲು ಯೋಗ ಪರಿಣಾಮಕಾರಿ ವಿಧಾನವಾಗಿದೆ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮತ್ತು ಸ್ಮರಣಾಶಕ್ತಿ ಹೆಚ್ಚಿಸುತ್ತದೆ ಎಂದರು.

ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಮಾತನಾಡಿ, ಯೋಗವನ್ನು ನಿಯಮಿತವಾಗಿ ಮಾಡುವುದರಿಂದ ರಕ್ತಪರಿಚಲನೆ, ಜೀರ್ಣಕ್ರಿಯೆ, ಉತ್ತಮ ನಿದ್ರೆಗೆ ಅನುಕೂಲವಾಗಲಿದೆ. ಭಾರತದಲ್ಲಿ ಆಯುರ್ವೇದದಲ್ಲಿ ಹೇಳಿರುವಂತೆ ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮೂರರ ನಡುವಿನ ಸಮತೋಲನವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದರಿಂದ ನಮ್ಮ ದೇಹದ ಮೇಲೆ ನಿಯಂತ್ರಣ ಸಾಧಿಸಬಹುದಾಗಿದೆ ಎಂದರು.

ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರದ ಉದ್ಯಾನ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಯೋಗಾಭ್ಯಾಸದ ಅನುಕೂಲತೆ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಯೋಗ ಗುರುಗಳಾದ ಕಿರಣ್ ಜೀ ಮತ್ತು ರಾಜೇಶ್ ಕರ್ವಾ ವಿವಿಧ ಆಸನಗಳನ್ನು ಮಾಡಿಸಿದರು.

ಪ್ರಭಾರಿ ಬಿಇಒ ಶೇಖರ್‌ ಹೊರಪೇಟೆ, ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಮುನಿ ವಾಸುದೇವರೆಡ್ಡಿ, ಡಾ. ಕೆ.ಎಚ್. ಗುರುಬಸವರಾಜ, ಡಾ. ಎಚ್. ಕೊಟ್ರಮ್ಮ, ಡಾ. ಸರಸ್ವತಿ, ಡಾ. ಹೇಮಾ, ಡಾ. ಹಾಲಮ್ಮ, ಆಕಾಶವಾಣಿಯ ನಾಗರತ್ನಾ, ಪತಂಜಲಿ ಯೋಗ ಸಂಸ್ಥೆಯ ಜಿಲ್ಲಾ ಉಸ್ತುವಾರಿ ಎಫ್.ಡಿ. ಹಳ್ಳಿಕೇರಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಧ್ಯಕ್ಷೆ ಮಾನಸಾ, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಶಾಲಾ, ಕಾಲೇಜಿನ ಮಕ್ಕಳು, ಯೋಗ ಪಟುಗಳು, ಆಯುಷ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ಬೆಳ್ತಂಗಡಿ: ಆಧಾರ್‌ ನೋಂದಣಿ, ತಿದ್ದುಪಡಿ ಶಿಬಿರ
ಲಾಯಿಲ ರಾಘವೇಂದ್ರ ಮಠ ಅಭಿವೃದ್ಧಿಗೆ 20 ಲಕ್ಷ ರು. ನೆರವು: ಶಾಸಕ ಗವಿಯಪ್ಪ ಭರವಸೆ