ಪರಿಪೂರ್ಣ ವ್ಯಕ್ತಿತ್ವ ಹೊಂದಲು ಯೋಗ ಸಹಕಾರಿ

KannadaprabhaNewsNetwork | Published : Jun 22, 2024 12:48 AM

ಸಾರಾಂಶ

ಯೋಗ ಭಾರತದ ಸನಾತನ ಧರ್ಮದ ಕೊಡುಗೆಯಾಗಿದ್ದು, ಮನುಷ್ಯ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಯೋಗ ತುಂಬಾ ಸಹಕಾರಿಯಾಗಿದೆ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

- ಹೊನ್ನಾಳಿಯಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಹಿರೇಕಲ್ಮಠ ಶ್ರೀ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಯೋಗ ಭಾರತದ ಸನಾತನ ಧರ್ಮದ ಕೊಡುಗೆಯಾಗಿದ್ದು, ಮನುಷ್ಯ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಯೋಗ ತುಂಬಾ ಸಹಕಾರಿಯಾಗಿದೆ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ಶುಕ್ರವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪತಂಜಲಿ ಯೋಗ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮವನ್ನು ಸ್ವಾಮೀಜಿ ಯೋಗಾಸನ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಮನುಷ್ಯ ಮನುಷ್ಯನಾಗಿ ಬದುಕುವ ಜೀವನ ವಿಧಾನ ತಿಳಿಸಿಕೊಡುವ ಮಹತ್ವದ ಸರಳ ಆರೋಗ್ಯ ವಿಧಾನವೇ ಯೋಗಾಸನವಾಗಿದೆ. ಸ್ವಾಮಿ ವಿವೇಕಾನಂದರು ಭಾರತೀಯತೆಯನ್ನು ವಿಶ್ವಮಾನ್ಯಗೊಳಿಸಲು ಆರಂಭಿಸಿದ ಚಾರಿತ್ರಿಕ ಸಂದೇಶಗಳಲ್ಲಿ ಯೋಗವೂ ಒಂದಾಗಿದೆ. ಪ್ರಸ್ತುತ ಆಧುನಿಕ ಜೀವನ ಶೈಲಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಲು ಯೋಗ ಬಹುಮುಖ್ಯ ಕಲೆಯಾಗಿದೆ. ಯೋಗಾಭ್ಯಾಸ ಕೇವಲ ಯೋಗ ದಿನಾಚರಣೆಗೆ ಸೀಮಿತವಾಗದೇ ಇದು ದಿನನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಒಂದಾಗಬೇಕು ಎಂದು ಸಲಹೆ ನೀಡಿದರು.

ತಾಲೂಕು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್ ಮಾತನಾಡಿ, ಇಂದು ವಿಶ್ವಾದ್ಯಂತ 10ನೇ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಯೋಗ ಕಲಿತವರು ಯೋಗದ ಮಹತ್ವದ ಬಗ್ಗೆ ಇತರರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದರು.

ಹಿರೇಕಲ್ಮಠದ ವಿಶಾಲವಾದ ಪ್ರಾಂಗಣದಲ್ಲಿ ಬೆಳಗ್ಗೆ 5.30 ಗಂಟೆಗೆ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಂಡು, ಯೋಗಪಟುಗಳ ನಿರ್ದೇಶನದಲ್ಲಿ ಹಲವಾರು ಪ್ರಕಾರಗಳ ಯೋಗಭಂಗಿಗಳನ್ನು ಪ್ರದರ್ಶಿಸಿದರು.

ಪತಂಜಲಿ ಯೋಗ ಸಮಿತಿ ಕಾರ್ಯದರ್ಶಿ ಎಂ.ಬಿ. ರುದೇಶ್, ಯೋಗಶಿಕ್ಷಕ ಶ್ರೀಕಾಂತ್ ಕುರ್ಡೇಕರ್, ಪ್ರಕಾಶ ಹೆಬ್ಬಾರ್, ರಾಘವೇಂದ್ರ ವೈಶ್ಯರ ಮಾರ್ಗದರ್ಶದಲ್ಲಿ ಯೋಗ ಪ್ರದರ್ಶನ ನಡೆಸಲಾಯಿತು. ಸುರೇಶ್ ಕುಂಬಾರ್, ದಿಲೀಪ್ ಶೇಟ್ , ವಸಂತ್ ನಾಯ್ಕ, ಜಗದೀಶ್, ಆಚಾರ್, ಸುಜಾತ ಬೆನ್ನೂರು ಮಠ, ಲಕ್ಷ್ಮೀ ವೈಶ್ಯರ್, ವಿದ್ಯಾ ವಿನಾಯಕ, ಸಂಘ ಪರಿವಾದರ ಎಚ್.ಎಂ. ಅರುಣ್ ಕುಮಾರ್‌ ಇತರರು ಭಾಗವಹಿಸಿದ್ದರು.

- - - -21ಎಚ್.ಎಲ್.ಐ1:

ಹೊನ್ನಾಳಿ ಹಿರೇಕಲ್ಮಠದಲ್ಲಿ ಯೋಗ ದಿನ ಕಾರ್ಯಕ್ರಮವನ್ನು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಯೋಗಾಸನ ಮಾಡುವ ಮೂಲಕ ಚಾಲನೆ ನೀಡಿದರು. ಪತಂಜಲಿ ಸಮಿತಿ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡರು.

Share this article