ಪಾಂಡವಪುರ: ಯೋಗದಿಂದ ಆರೋಗ್ಯದ ಜತೆಗೆ ಮನುಷ್ಯನ ಆಯಸ್ಸು ಕೂಡ ವೃದ್ಧಿಸಲಿದೆ. ಪ್ರತಿಯೊಬ್ಬರೂ ನಿತ್ಯ ಅರ್ಧ ತಾಸು ಯೋಗ ಮಾಡಬೇಕು ಎಂದು ಜೆಎಂಎಫ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ಹೇಳಿದರು.
ಯೋಗ ಎಂದರೆ ಮನಸ್ಸು ಮತ್ತು ದೇಹದ ಸಮ್ಮಿಲನ. ಪ್ರಪ್ರಥಮವಾಗಿ ಸೆಪ್ಟೆಂಬರ್ 2014ರಲ್ಲಿ ಯೋಗವನ್ನು ಮಾಡಬೇಕು ಎಂದು 177 ರಾಷ್ಟ್ರಗಳು ಅನುಮೋದನೆ ಮಾಡಿದ ನಂತರ ಜೂನ್ 21, 2015ರಂದು ಪ್ರಧಾನ ಮಂತ್ರಿಗಳು ಈ ಯೋಗ ದಿನವನ್ನು ಆರಂಭ ಮಾಡಿದರು ಎಂದು ತಿಳಿಸಿದರು.
ಯೋಗ ಗುರು ಸೋಮಶೇಖರ್ ಮಾತನಾಡಿ, ನಮ್ಮ ಪ್ರಾಚೀನ ಕಾಲದ ಪೂರ್ವಿಕರು ಯೋಗದ ಆಸನಗಳನ್ನು ಅಭ್ಯಾಸ ಮಾಡಿ ತಮ್ಮ ಆಯಸ್ಸನ್ನು ವೃದ್ಧಿಸಿಕೊಳ್ಳುತ್ತಿದ್ದರು. ಮನಸ್ಸನ್ನು ಕೇಂದ್ರೀಕರಿಸಿಕೊಂಡು ತಮ್ಮ ಜ್ಞಾನವನ್ನು ಸಂಪಾದಿಸುತ್ತಿದ್ದರು ಹಾಗೂ ಜೀವನವನ್ನು ರೋಗ ಮುಕ್ತವಾಗಿ ಸಾಗಿಸುತ್ತಿದ್ದರು ಎಂದರು.ಈ ಹಿಂದೆ ಮನುಷ್ಯರು 130, 120, 100 ವರ್ಷ ಆರೋಗ್ಯವಾಗಿ ಬದುಕುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಸರಾಸರಿ 50ರ ಆಸುಪಾಸಿಗೆ ಬಂದಿದೆ. ಹಾಗಾಗಿ ಎಲ್ಲಾ ಪ್ರಜೆಗಳು ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಮತ್ತು ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು ಎಂದರು.
ಬೆಳಗಿನ ಜಾವ 6 ಗಂಟೆಯಿಂದಲೇ ಯೋಗ ಗುರು ಸೋಮಶೇಖರ್ ಮತ್ತು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಎಸ್.ಜಯರಾಮ್ ಮಾರ್ಗದರ್ಶನದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಬಾಬು, ಸಿವಿಲ್ ನ್ಯಾಯಾಧೀಶರಾದ ಬಿ.ಪಾರ್ವತಮ್ಮ ಮತ್ತು ವಕೀಲರ ಸಂಘದ ಅಧ್ಯಕ್ಷ ಗಂಗರಾಜು ರವರು ಒಂದು ಗಂಟೆವರೆಗೆ ಯೋಗಾಭ್ಯಾಸ ಮಾಡಿದರು. ನ್ಯಾಯಮೂರ್ತಿಗಳು ಯೋಗ ಗುರುಗಳಿಗೆ ಸನ್ಮಾನ ಮಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಚಂದ್ರಶೇಖರಯ್ಯ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ಶಿರಸ್ತೇದಾರ್ ಮಂಜುನಾಥ್, ಯೋಗ ಸಮಿತಿಯ ಪುಟ್ಟಮಾದೇಗೌಡ, ರೈಟರ್ ಸ್ವಾಮಿಗೌಡ, ಎಚ್.ಆರ್.ಧನ್ಯಕುಮಾರ್, ಪೊಲೀಸ್ ಜವರೇಗೌಡ, ಅಂಬಿಕಾ, ಪ್ರಭಾ, ನಿರ್ಮಲಾ, ಶಿವಮ್ಮ, ಸುನೀತಾ, ಯಶೋದಮ್ಮ, ಜಿ.ಲಾವಣ್ಯ, ಟಿ.ಲೋಕೇಶ್ ಹಾಗೂ ಎಲ್ಲಾ ವಕೀಲರು ಭಾಗವಹಿಸಿದ್ದರು.