ಮುಖ್ಯಮಂತ್ರಿ ರಾಜಿನಾಮೆ ಕೇಳಲ್ಲ, ನೀವೇ ರಾಜಿನಾಮೆ ಕೊಡಿ: ಜಮೀರ್‌ ಅಹ್ಮದ್‌ಖಾನ್‌ಗೆ ಸಿ.ಟಿ.ರವಿ ಆಗ್ರಹ

KannadaprabhaNewsNetwork |  
Published : Jun 27, 2025, 12:48 AM IST
ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ | Kannada Prabha

ಸಾರಾಂಶ

ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ನೈತಿಕತೆ ಹೊತ್ತು ರಾಜಿನಾಮೆ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಮಂಗಳೂರಿನಲ್ಲಿ ಬುಧವಾರ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುಮನೆ ಮಂಜೂರಾತಿ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಕಾಂಗ್ರೆಸ್‌ ಶಾಸಕರೇ ಆರೋಪಿಸುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿ ವಿರುದ್ಧವೇ ಭ್ರಷ್ಟಾಚಾರ ಆರೋಪ ಇರುವಾಗ ಅವರೇ ಸಚಿವರಿಂದ ರಾಜಿನಾಮೆ ಪಡೆಯುತ್ತಾರೆ ಎಂಬ ನಿರೀಕ್ಷೆ ಬಿಜೆಪಿಗೆ ಇಲ್ಲ. ಈ ಹಿನ್ನೆಲೆಯಲ್ಲಿ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ನೈತಿಕತೆ ಹೊತ್ತು ರಾಜಿನಾಮೆ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು. ಅವರು ಬುಧವಾರ ಮಂಗಳೂರಲ್ಲಿ ಸುದ್ದಿಗಾರರಲ್ಲಿ ಮಾತನಾಡಿದರು.

ಭ್ರಷ್ಟಾಚಾರದ ಆರೋಪ ಬಂದಿರುವುದರಿಂದ ವಸತಿ ಸಚಿವ ಜಮೀರ್‌ ಅಹಮ್ಮದ್‌ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಅವರು ಪರಿಶುದ್ದ, ಪ್ರಾಮಾಣಿಕನಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಬಡವರ ಹೆಸರಿನಲ್ಲಿ ದುಡ್ಡು ತಿಂದಿಲ್ಲ ಎಂದಿದ್ದಾರೆ. ಹಾಗಾದರೆ ಅವರು ಮತ್ತೆ ಯಾವ ಹಣ ತಿಂದಿದ್ದಾರೆ? ಅಲ್ಪಸಂಖ್ಯಾತರ ಕಲ್ಯಾಣದ ಹಣದಲ್ಲಿ ತಿಂದಿದ್ದಾರಾ? ತನಿಖೆ ಪಾರದರ್ಶಕವಾಗಿ ನಡೆಯಬೇಕಾದರೆ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ತನಿಖೆ ಪೂರ್ಣವಾಗಿ ನಿರ್ದೋಷಿ ಎಂದು ವರದಿ ಬಂದರೆ ಅನಂತರ ಸಚಿವ ಸಂಪುಟ ಸೇರಿಕೊಳ್ಳಲಿ. ರಾಜಿನಾಮೆ ನೀಡಿ ತನಿಖೆ ಎದುರಿಸಲು ಜೈಲಿಗೆ ಹೋಗುವ ಭಯವೇ? ಅವರ ಆಣೆ ಪ್ರಮಾಣ ಬೇಕಾಗಿಲ್ಲ. ರಾಜಿನಾಮೆ ಕೊಟ್ಟು ತನಿಖೆ ಎದುರಿಸಲಿ. ಸಚಿವರ ಪಿಎ, ವಿಶೇಷ ಅಧಿಕಾರಿಗಳನ್ನು ನೇಮಿಸಿಕೊಂಡಿರುವುದು ಯಾರು? ಅವರು ಹಣ ತಿಂದರೆ ಅದಕ್ಕೆ ಉತ್ತರದಾಯಿ ಯಾರು ಎಂದು ಸಿ.ಟಿ ರವಿ ಪ್ರಶ್ನಿಸಿದರು.

‘ರಾಜ್ಯ ಸರ್ಕಾರದ ಬಳಿ ಹಣ ಇಲ್ಲ’ ಎಂದು ಹೇಳಿಕೆ ನೀಡಿರುವ ಗೃಹಸಚಿವ ಡಾ. ಪರಮೇಶ್ವರ್‌ ಅವರು ನಂತರ ‘ನಾನು ಹಾಗೆ ಹೇಳಿಯೇ ಇಲ್ಲ’ ಎಂಬುದಾಗಿ ಇನ್ನೊಂದು ಹೇಳಿಕೆ ನೀಡಿದ್ದಾರೆ. ಅವರು ಈ ರೀತಿ ತದ್ವಿರುದ್ಧ ಹೇಳಿಕೆ ನೀಡುವ ಬದಲು ಇರುವ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದು ಸಿ.ಟಿ.ರವಿ ಹೇಳಿದರು.

ದುಡ್ಡಿಲ್ಲ ಎನ್ನೋದು ಸತ್ಯ:

ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ ಎನ್ನುವುದು ಸತ್ಯ. ದುಡ್ಡು ಇದ್ದರೆ ರಾಜ್ಯದ ಸಾಲದ ಹೊರೆ ಹೆಚ್ಚಾಗುತ್ತಿರಲಿಲ್ಲ. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ 69 ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಆರ್‌ಟಿಸಿ ಶುಲ್ಕ 15 ರು.ಗಳಿಂದ 30 ರು.ಗೆ ಏರಿಕೆಯಾಗಿದೆ. 20 ರು. ಸ್ಟ್ಯಾಂಪ್‌ ಪೇಪರ್‌ ಚಲಾವಣೆಯಲ್ಲಿ ಇಲ್ಲ. ಅದಕ್ಕೆ 100 ರು., 200 ರು. ಕೊಡಬೇಕು. ಸ್ಟ್ಯಾಂಪ್‌ ಡ್ಯೂಟಿ, ಎಕ್ಸೈಸ್‌ ಡ್ಯೂಟಿ ಜಾಸ್ತಿ ಮಾಡಿದ್ದಾರೆ. ಜುಲೈನಿಂದ ಸಿಎಲ್‌ 7, ಸಿಎಲ್‌ 9 ಸನ್ನದುದಾರರ ಸನ್ನದು ಶುಲ್ಕ ಶೇ.50 ಹೆಚ್ಚಾಗಲಿದೆ. ಡೀಸೆಲ್‌ ಮೇಲೆ 5.95 ರು. ಎರಡು ಬಾರಿ ಸೆಸ್‌, ಪೆಟ್ರೋಲ್‌ ಮೇಲೆ 3.95 ರು. ಸೆಸ್‌ ಹೆಚ್ಚು ಮಾಡಿದ್ದಾರೆ. ಖಜಾನೆ ತುಂಬಿ ತಳುಕುತ್ತಿದ್ದರೆ ಬೆಲೆಏರಿಕೆ ಬರೆ ಏಕೆ, ಸಾಲ ಯಾಕೆ ಮಾಡುತ್ತಿದ್ದರು ಎಂದು ಸಿ.ಟಿ ರವಿ ಪ್ರಶ್ನಿಸಿದರು.ಅಭಿವೃದ್ಧಿ ಕೆಲಸ ಆಗುತ್ತಿಲ್ಲ, ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕರು ನೀಡುತ್ತಿರುವ ಹೇಳಿಕೆಗಳೇ ನಿದರ್ಶನಗಳಾಗಿವೆ. ಹಿರಿಯ ಶಾಸಕ ರಾಜು ಕಾಗೆ ‘ಎರಡು ವರ್ಷದ ಹಿಂದೆ ಭೂಮಿಪೂಜೆ ಮಾಡಿದ್ದೇವೆ. ಕೆಲಸ ಆರಂಭವಾಗಿಲ್ಲ. ಈ ಬಾಳಿಗೆ ನಾವ್ಯಾಕೆ ಎಂಎಲ್‌ಎ ಆಗಬೇಕು. ಎರಡು ದಿನ ನೋಡುತ್ತೇನೆ, ನಾನು ರಾಜಿನಾಮೆ ಬಿಸಾಕುತ್ತೇನೆ’ ಎಂಬುದಾಗಿ ಹೇಳಿದ ಮಾತು ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂಬುದಕ್ಕೆ ನಿದರ್ಶನ. ಬಸವರಾಜ ರಾಯರೆಡ್ಡಿ ‘ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ ನಂ.1’ ಎಂದು ಹೇಳಿದ್ದಾರೆ. ಹಿರಿಯ ಶಾಸಕ, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್‌.ಪಾಟೀಲ್‌ ‘ಬಡವರು ಮನೆ ಪಡೆಯಬೇಕಾದರೆ 30,000 ರು. ಕೊಡಬೇಕು’ ಎಂದು ಹೇಳಿದ್ದಾರೆ. ಇನ್ನೋರ್ವ ಹಿರಿಯ ಶಾಸಕ ಎನ್‌.ವೈ.ಗೋಪಾಲಕೃಷ್ಣ ‘ನಮಗೊಂದು ಚರಂಡಿ ಮಾಡಿಸುವ ಯೋಗ್ಯತೆಯೂ ಇಲ್ಲ’ ಎಂದಿದ್ದಾರೆ. ರಾಜ್ಯದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ ಮಾತ್ರ ನಡೆಯುತ್ತಿದೆ. ಅಭಿವೃದ್ಧಿ ಆಗುತ್ತಿಲ್ಲ. ರಾಜ್ಯದ ಬೊಕ್ಕಸವನ್ನು ಕಾಂಗ್ರೆಸಿಗರು ಲೂಟಿ ಮಾಡುತ್ತಿದ್ದಾರೆ ಎಂದು ಸಿ.ಟಿ ರವಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಗರಿಕ ಬಂದೂಕು ತರಬೇತಿ ನಿರಂತರವಾಗಬೇಕು
ನೈಸರ್ಗಿಕ ಕೃಷಿಯಲ್ಲಿ ವೆಚ್ಚ ಇಳಿಕೆ, ಮಣ್ಣಿನ ಆರೋಗ್ಯ ಏರಿಕೆ: ನಿತ್ಯಾನಂದ ನಾಯಕ್