ಎಪಿಎಂಸಿಯ ಅಡಕೆ ಭವನದಲ್ಲಿ ವಿಶ್ವ ಯೋಗ ದಿನಾಚರಣೆ ಉದ್ಘಾಟನೆ, ಉಪನ್ಯಾಸ
ಮನಸ್ಸು ತನ್ನನ್ನು ತಾನೇ ನಿಯಂತ್ರಿಸುವಂತಹ ಕಾರ್ಯಕ್ಕೆ ಯೋಗ ಎನ್ನುತ್ತೇವೆ. ನಮ್ಮಲ್ಲಿ ಇರದಂತಹ ಒಂದು ಅಗಾಧವಾದ ಶಕ್ತಿ ಸ್ವರೂಪವೇ ಯೋಗ. ಅಂತಹ ಯೋಗ ಇಂದು ವಿಶ್ವಮಾನ್ಯವಾಗಿದೆ. ತನ್ಮೂಲಕ ಭಾರತ ವಿಶ್ವಗುರು ಆಗುವಲ್ಲಿ ಯೋಗ ಮಹತ್ವದ ಕೊಡುಗೆ ನೀಡಿದೆ ಎಂದು ಋಷಿಕುಲಂ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ. ವಿಘ್ನೇಶ್ವರ ಭಟ್ಟ ನೆಲೆಮಾವು ಹೇಳಿದರು.
ಎಪಿಎಂಸಿಯ ಅಡಕೆ ಭವನದಲ್ಲಿ ಪತಂಜಲಿ ಯೋಗ ಸಮಿತಿ, ಮಹಿಳಾ ಪತಂಜಲಿ, ಅಡಕೆ ವರ್ತಕರ ಸಂಘ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ, ಉಪನ್ಯಾಸ ನೀಡಿದರು.ನಮ್ಮಲ್ಲಿ ಯಾವುದು ಇಲ್ಲವೋ ಅದನ್ನು ಗಳಿಸಿಕೊಡುವ ಸಾಧನವನ್ನು ಯೋಗ ಎಂದು ಗೀತಾಚಾರ್ಯ ಹೇಳಿದ್ದಾನೆ. ನಾವು ಪಡೆದದ್ದನ್ನು ರಕ್ಷಿಸಿಕೊಳ್ಳುವುದನ್ನು ಕ್ಷೇಮ ಎಂದು ಹೇಳಲಾಗುತ್ತದೆ. ಭಗವಂತನೊಂದಿಗೆ ಆತ್ಮವನ್ನು ಬೆಸೆಯುವುದಕ್ಕೆ ಯೋಗ ಎಂದು ಕರೆಯಲಾಗುತ್ತದೆ. ಇಂತಹ ಯೋಗ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆರೋಗ್ಯದ ಜೊತೆಗೆ ಶ್ರೇಷ್ಠತೆಯನ್ನೂ ಗಳಿಸಬಹುದಾಗಿದೆ. ಯೋಗ ಎನ್ನುವುದು ಕೇವಲ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಸ್ಥೀಮಿತವಾಗಿರದೇ ಸಮಾಜ ಮತ್ತು ಸಾಂಸಾರಿಕ ಸ್ವಾಸ್ಥ್ಯವನ್ನೂ ರಕ್ಷಿಸಬಲ್ಲದು ಎಂದರು.
ಯೋಗಶಿಕ್ಷಕ ಸುಬ್ರಾಯ ಭಟ್ಟ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಉಪಾಧ್ಯಕ್ಷ ನಾಗೇಶ ರಾಯ್ಕರ್ ಹಾಗೂ ಯುವ ಪ್ರಭಾವಿ ಕನಕಪ್ಪ ಯೋಗ ಪ್ರಾತ್ಯಕ್ಷಿಕೆಯಲ್ಲಿ ಸಹಕರಿಸಿದರು. ಸಾಮಾಜಿಕ ಮುಖಂಡರಾದ ಗೋಪಾಲಕೃಷ್ಣ ಗಾಂವ್ಕರ ಸ್ವಾಗತಿಸಿದರು. ಜಿ.ಎಸ್. ಭಟ್ಟ ಹಳವಳ್ಳಿ ನಿರೂಪಿಸಿದರು. ಕಾರ್ಯದರ್ಶಿ ಸತೀಶ್ ಹೆಗಡೆ ವಂದಿಸಿದರು.
೨೨ ವೈ.ಎಲ್.ಪಿ. ೦೫