ಯೋಗ ಮನುಕುಲದ ಒಳಿತಿಗಾಗಿ ಪೂರ್ವಜರು ನೀಡಿದ ಮಹಾನ್ ಕೊಡುಗೆ: ಶ್ರೀ ಶಿವಹಂಸಾರೂಢ ಪ್ರಭುಸ್ವಾಮಿಗಳು

KannadaprabhaNewsNetwork |  
Published : Jun 28, 2024, 12:46 AM IST
ಗದಗ ತೋಂಟದಾರ್ಯ ಮಠದ ಆವರಣದಲ್ಲಿನ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳ ಶಿವಾನುಭವ ಮಂಟಪದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಯೋಗ ಮೇಲ್ನೋಟಕ್ಕೆ ಅಧ್ಯಾತ್ಮವಾದರೂ ಅದು ನಮ್ಮ ದೇಹ, ಮನ, ಬುದ್ಧಿ, ಭಾವಗಳಿಗೆ ಆರೋಗ್ಯ ನೀಡುವ ವೈದ್ಯಶಾಸ್ತ್ರವಾಗಿದೆ ಎಂದು ಎಂದು ಹೈದರಾಬಾದ್ ಗುರು ಮಂದಿರದ ಶ್ರೀ ಶಿವಹಂಸಾರೂಢ ಪ್ರಭುಸ್ವಾಮಿಗಳು ಹೇಳಿದರು.

ಗದಗ: ದಾರ್ಶನಿಕರು, ಋಷಿ-ಮುನಿಗಳು ಇನ್ನಿತರ ಪೂರ್ವಜರು ಹಲವು ವಿಧದ ಕೊಡುಗೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಯೋಗವು ಉತ್ಕೃಷ್ಟ ಕೊಡುಗೆಯಾಗಿದೆ ಎಂದು ಎಂದು ಹೈದರಾಬಾದ್ ಗುರು ಮಂದಿರದ ಶ್ರೀ ಶಿವಹಂಸಾರೂಢ ಪ್ರಭುಸ್ವಾಮಿಗಳು ಹೇಳಿದರು.

ನಗರದ ತೋಂಟದಾರ್ಯ ಮಠದ ಆವರಣದಲ್ಲಿನ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ಎಸ್‌ವೈಬಿಎಂಎಸ್ ಯೋಗ ಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ, ಲಿಂಗಾಯತ ಪ್ರಗತಿಶೀಲ ಸಂಘ, ಜಿಲ್ಲಾ ಯೋಗ ಒಕ್ಕೂಟ ಹಾಗೂ ಜಿಲ್ಲಾ ಅಮೆಚೂರ್ ಯೋಗಾಸನ ಕ್ರೀಡಾ ಸಂಸ್ಥೆಯ ಸಹಯೋಗದಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಸಮ್ಮುಖ ವಹಿಸಿ ಅವರು ಮಾತನಾಡಿದರು. ಯೋಗ ಮೇಲ್ನೋಟಕ್ಕೆ ಅಧ್ಯಾತ್ಮವಾದರೂ ಅದು ನಮ್ಮ ದೇಹ, ಮನ, ಬುದ್ಧಿ, ಭಾವಗಳಿಗೆ ಆರೋಗ್ಯ ನೀಡುವ ವೈದ್ಯಶಾಸ್ತ್ರವಾಗಿದೆ ಎಂದು ಹೇಳಿದರು.ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದಿದ್ದರೂ ನಮ್ಮ ಪೂರ್ವಜರು ನೀಡಿರುವ ಕಲೆ, ಶಿಕ್ಷಣ, ಸಾಹಿತ್ಯ, ಸಂಪ್ರದಾಯ, ಪರಂಪರೆಗಳನ್ನು ಅನುಸರಿಸಿಕೊಂಡು ಮುನ್ನಡೆಯುವುದು ಶ್ರೇಯಸ್ಕರ. ಯೋಗ ಚೈತನ್ಯದ ಚಿಲುಮೆಯಾಗಿವೆ. ಹಲವು ರೋಗಗಳನ್ನು ಗುಣಪಡಿಸುವ ದಿವ್ಯೌಷಧಿಯಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಯೋಗ ಮನುಕುಲ ಬೇಡಿದ್ದನ್ನು ನೀಡುವ ಕಾಮಧೇನುವಾಗಿದೆ. ಈ ಹಿನ್ನೆಲೆಯಾಗಿ ಯೋಗ ಮನುಕುಲದ ಒಳಿತಿಗಾಗಿ ನಮ್ಮ ಪೂರ್ವಜರು ನೀಡಿದ ಮಹಾನ್ ಕೊಡುಗೆಯಾಗಿದೆ ಎಂದರು.

ತೋಂಟದಾರ್ಯ ಮಠದ ಶ್ರೀ ಮಹಾಂತದೇವರು ಮಾತನಾಡಿ, ಯೋಗದಲ್ಲಿ ಸಾಕಷ್ಟು ಪ್ರಕಾರಗಳಿವೆ. ಅವುಗಳಲ್ಲಿ ಶಿವಯೋಗ ಶ್ರೇಷ್ಠವಾಗಿದೆ. ಶಿವಯೋಗ ಸಾಧನೆಯಿಂದ ಶಿವನೊಲುಮೆ ಜತೆಗೆ ಬದುಕಿನಲ್ಲಿ ಶಾಂತಿ, ನೆಮ್ಮದಿ, ಸಂತೃಪ್ತಿ, ಸಮೃದ್ಧಿಗಳನ್ನು ಪಡೆಯಲು ಸಾಧ್ಯವಾಗುವುದು ಎಂದು ತಿಳಿಸಿದರು.

ಡಾ. ದೀಪಾ ಮೂರಶಿಳ್ಳಿನ ಮಾತನಾಡಿ, ಇತ್ತೀಚೆಗೆ ಮಹಿಳೆಯರು ಹೆಚ್ಚು ಹೆಚ್ಚು ರೋಗ ರುಜಿನಗಳಿಗೆ, ಭಯ, ಆತಂಕ, ಅತ್ಯಾಚಾರಗಳಿಗೆ ಬಲಿಯಾಗುತ್ತಲಿದ್ದಾರೆ. ಇವೆಲ್ಲ ಸಮಸ್ಯೆಗಳ ನಿವಾರಣೆಗಾಗಿ ಅವರಲ್ಲಿ ದೈಹಿಕ, ಮಾನಸಿಕ ಶಕ್ತಿ ಹೆಚ್ಚಿಸಬೇಕಾಗಿದೆ. ಯೋಗವು ಈ ಕಾರ್ಯಕ್ಕೆ ಸಹಾಕಾರಿಯಾಗಿದೆ ಎಂದರು.

ಜ. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿದರು.

ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಶಿರಿಯಣ್ಣವರ, ನಿವೃತ್ತ ಎಂಜಿನಿಯರ್ ವಿ.ಎಚ್. ಪಾಟೀಲ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ, ಸುನಂದಾ ಜ್ಯಾನೋಪಂತರ, ಡಾ. ಎಂ.ವಿ. ಐಹೊಳ್ಳಿ, ವಿ.ಎಂ. ಮುಂದಿನಮನಿ, ಯಶವಂತ ಮತ್ತೂರ, ಜಯಶ್ರೀ ದಾವಣಗೆರೆ, ಅರುಣಾ ಇಂಗಳಳ್ಳಿ, ಅಜಿತಾ ಶಿವಪ್ರಸಾದ, ಗೌರಿ ಜಿರಂಕಳಿ ಇದ್ದರು. ವಿಜಯಾ ಚನ್ನಶೆಟ್ಟಿ ಸ್ವಾಗತಿಸಿದರು. ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ರಾಜ್ಯದಲ್ಲಿ ಇಂದು, ನಾಳೆ ವ್ಯಾಪಕ ಮಳೆಯ ನಿರೀಕ್ಷೆ
ಭಾರೀ ಮಳೆಗೆ ಡ್ಯಾಂಗಳು ಭರ್ತಿ - ಲಿಂಗನಮಕ್ಕಿ ಜಲಾಶಯ ಭರ್ತಿಗೆ ಕೇವಲ 4 ಅಡಿ ಮಾತ್ರ ಬಾಕಿ