ಕನ್ನಡಪ್ರಭ ವಾರ್ತೆ ತಿಪಟೂರು
ಯೋಗ ದೈಹಿಕ ಆರೋಗ್ಯಕ್ಕಷ್ಟೇ ಸೀಮಿತವಾಗಿಲ್ಲ. ಬದಲಾಗಿ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುವ ಯಾವುದೇ ಔಷಧಗಳು ನೀಡಲಾಗದ ಮನಃಶಾತಿ ನಿಡುವ ಏಕೈಕ ವಿಧಾನವಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ತಿಳಿಸಿದರು.ನಗರದ ಎಸ್‌ವಿಪಿ ಹಾಗೂ ಸುಮತಿ ವಿದ್ಯಾ ಸಂಸ್ಥೆಯ ವತಿಯಿಂದ ನಡೆದ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ, ವೈಯಕ್ತಿಕ, ದೈಹಿಕ, ಮಾನಸಿಕ ಹಾಗೂ ಪರಿಪೂರ್ಣ ಶಿಸ್ತನ್ನು ಕಲಿಸಿ ಮಾನವನ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾಗಿದೆ. ವಿಜ್ಞಾನ ಬೆಳೆದಷ್ಟು ಬೌದ್ದಿಕ ವಿಕಸನ ಹಾಗೂ ಸಹಿಷ್ಣುತೆ ವಿಸ್ತಾರವಾಗಬೇಕಿತ್ತು. ಆದರೆ ವೈಜ್ಞಾನಿಕ ತಂತ್ರಜ್ಞಾನವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ದೇಶ ದೇಶಗಳ ನಡುವೆ ಕಿಚ್ಚು ಹಚ್ಚುತ್ತಿರುವುದು ಅವಸಾನದ ಹಾದಿ. ಆದ್ದರಿಂದ ಶಾಂತಿ ಸ್ಥಾಪನೆಗಾಗಿ ಯೋಗವನ್ನು ಸರ್ವ ಸ್ಪರ್ಶಿ, ಸರ್ವ ವ್ಯಾಪಿ, ಸರ್ವ ಸಮಸ್ಯೆಗಳ ನಿವಾರಣೆಗೆ ಸಂದೇಶ ನೀಡುವ ವಿಶಿಷ್ಟ ದಿನವನ್ನಾಗಿ ಆಚರಿಸಬೇಕಿದೆ ಎಂದರು.
ಕೆ.ಆರ್. ಬಸವರಾಜು ಮಾತನಾಡಿ, ಯೋಗವು ನಮ್ಮ ಸಂಸ್ಕೃತಿ ಹಾಗೂ ಭಾರತೀಯ ಪದ್ದತಿಯಾಗಿದ್ದು, ಅದನ್ನು ನಾವು ಉಳಿಸಿ ಬೆಳೆಸಬೇಕು. ಬೆಳಗಿನ ಸಮಯದಲ್ಲಿ ಯೋಗಾಸನ ಹಾಗೂ ಧ್ಯಾನ ಮಾಡಿದರೆ ದಿನವಿಡಿ ಯಾವುದೇ ರೀತಿಯ ಗೊಂದಲ, ಆತಂಕವಿಲ್ಲದೆ ತಮ್ಮ ಕೆಲಸಗಳನ್ನು ಮಾಡಬಹುದು. ಅಲ್ಲದೆ ತಾಳ್ಮೆ, ಸಮಾಧಾನದಿಂದ ಕೋಪವನ್ನು ಶಮನಗೊಳಿಸಿ ನಗುಮುಖದ ಸೇವೆಗೆ ಅವಕಾಶವಾಗುತ್ತದೆ ಎಂದು ಹೇಳಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಲ್ಲಿಕಾರ್ಜುನಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಭಾರತೀಯ ಯೋಗ ವಿಜ್ಞಾನವನ್ನು ಇತರ ದೇಶಗಳಿಗೂ ಹರಡಿರುವುದಲ್ಲದೆ ವಿಶ್ವ ಸಂಸ್ಥೆಯು ಗೊತ್ತುವಳಿ ಮಾಡಿ, ಇಡೀ ಪ್ರಪಂಚವೇ ಯೋಗ ದಿನವನ್ನು ಆಚರಣೆ ಮಾಡುವಂತೆ ಮಾಡಿದ್ದಾರೆ. ಪ್ರತಿದಿನ ಒಂದು ಗಂಟೆ ಯೋಗಕ್ಕೆ ಮೀಸಲಿಡಬೇಕೆಂದರು. ಸಾವಿರಕ್ಕೂ ಹೆಚ್ಚು ಮಕ್ಕಳು ಯೋಗಾಭ್ಯಾಸ ಮಾಡಿದರು. ಶಿಕ್ಷಕರಾದ ವಿಜಯಕುಮಾರ, ಅರ್ಕಚಾರಿ, ವಿಜಯಕುಮಾರಿ, ಉದಯ್, ಎನ್. ಬಿಂದು ಸೇರಿದಂತೆ ಸಿಬ್ಬಂದಿ ವರ್ಗದವರಿದ್ದರು.