ವಿಶ್ವ ಸಂಗೀತ ದಿನ । ತೇಜು ಮೆಲೋಡಿಯಸ್‌ನಿಂದ ಯೋಗ ದಿನ ಕಾರ್ಯಕ್ರಮ । ಗೀತೆಗಳ ಗಾಯನ
ಯೋಗ ಹಾಗೂ ಸಂಗೀತ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಒಂದು ಭಾಗವಾಗಿದೆ ಎಂದು ಪಟ್ಟಣದ ಪುರಸಭೆ ಅಧ್ಯಕ್ಷ ವಸಂತ ಕುಮಾರ್ ಹೇಳಿದರು.
ಪಟ್ಟಣದ ತೇಜು ಮೆಲೋಡಿಯಸ್ ವತಿಯಿಂದ ತೇಜು ಸಂಸ್ಥೆ ಅವರಣದಲ್ಲಿ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನ ಹಾಗೂ ವಿಶ್ವ ಸಂಗೀತ ದಿನದ ಸಮಾರಂಭದಲ್ಲಿ ಮಾತನಾಡಿದರು.ಯೋಗ ಸ್ಥಿರ ಆರೋಗ್ಯದ ಶ್ರೇಷ್ಠ ಕೊಡುಗೆ, ಮನಸ್ಸಿನ ಶಾಂತಿಯ ಅಪ್ರತಿಮ ನಿಧಿ, ಭಾರತ ಇಡೀ ಜಗತ್ತಿಗೆ ಯೋಗದ ಸಾಧನವನ್ನು ನೀಡಿದೆ. ಸಂಗೀತಗಾರರು ಮತ್ತು ವೃತ್ತಿಪರ ಸಂಗೀತಗಾರರನ್ನು ಪ್ರೇರೇಪಿಸಲು ಪ್ರತಿ ವರ್ಷ ಜೂ.21ರಂದು ಸಂಗೀತ ದಿನ ಆಚರಿಸಲಾಗುತ್ತದೆ, ಸಂಗೀತದ ಮೇಲೆ ಒಲವಿದ್ದರೂ ಇಲ್ಲದಿದ್ದರೂ ಅದರ ಪರಿಣಾಮ ದೇಹ ಮತ್ತು ಮನಸ್ಸಿನ ಮೇಲೆ ಬೀರುತ್ತದೆ ಎಂದು ತಿಳಿಸಿದರು.
ಕೆನರಾ ಬ್ಯಾಂಕ್ ಮ್ಯಾನೇಜರ್ ಮಹೇಶ್ ದಡ್ಡಿ ಕೊಪ್ಪ ಮಾತನಾಡಿ, ಕೆಲಸದ ಒತ್ತಡದ ನಡುವೆ ಸಂಗೀತವು ಮನಸ್ಸಿಗೆ ಮುದ ನೀಡುತ್ತದೆ, ಸಂಗೀತ ಒಂದು ಸುಂದರ ಲೋಕವನ್ನು ಸೃಷ್ಟಿ ಮಾಡುತ್ತದೆ. ಜೀವನದಲ್ಲಿ ಸಂಗೀತವನ್ನು ಕೇಳದವರೇ ಇಲ್ಲ, ಖುಷಿಯಾಗಲಿ ದುಃಖವಾಗಲಿ ನಮ್ಮ ಜತೆ ಇರುವುದು ಸಂಗೀತ ಎಂದು ಹೇಳಿದರು.
ಸಮಾರಂಭದಲ್ಲಿ ಪುಟಾಣಿಗಳಾದ ರಕ್ಷಿತ್ ಹಾಗೂ ಹಂಶಿಕ ಅವರು ಹಾಡುಗಳನ್ನು ಹೇಳುವ ಮೂಲಕ ಮನರಂಜನೆ ನೀಡಿದರು.