ಆರೋಗ್ಯ ರಕ್ಷಣೆ, ದೀರ್ಘಾಯುಷ್ಯಕ್ಕೆ ಯೋಗಾಭ್ಯಾಸ ಅತ್ಯಗತ್ಯ: ಎಸ್.ವಿ. ಸಂಕನೂರು

KannadaprabhaNewsNetwork |  
Published : Jun 21, 2026, 02:15 AM IST
ಜಾಥಾಕ್ಕೆ ವಿಪ ಸದಸ್ಯ ಎಸ್.ವಿ.ಸಂಕನೂರ ಚಾಲನೆ ನೀಡಿ ಮಾತನಾಡಿದರು.  | Kannada Prabha

ಸಾರಾಂಶ

ಆರೋಗ್ಯ ರಕ್ಷಣೆ ಮತ್ತು ದೀರ್ಘಾಯುಷ್ಯಕ್ಕೆ ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ಮಾಡುವುದು ಅತ್ಯಗತ್ಯ ಎಂದು ವಿಪ ಶಾಸಕ ಎಸ್.ವಿ. ಸಂಕನೂರು ಹೇಳಿದರು.

ಗದಗ: ಯೋಗ ಎಂಬುದು ಕೇವಲ ದೈಹಿಕ ಕಸರತ್ತು ಅಥವಾ ವ್ಯಾಯಾಮವಲ್ಲ. ಅದೊಂದು ಮಹಾನ್ ವಿಜ್ಞಾನ ಹಾಗೂ ಶಾಸ್ತ್ರವಾಗಿದೆ. ಆರೋಗ್ಯ ರಕ್ಷಣೆ ಮತ್ತು ದೀರ್ಘಾಯುಷ್ಯಕ್ಕೆ ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ಮಾಡುವುದು ಅತ್ಯಗತ್ಯ ಎಂದು ವಿಪ ಶಾಸಕ ಎಸ್.ವಿ. ಸಂಕನೂರು ಹೇಳಿದರು.

ಶನಿವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲೆಯ ವಿವಿಧ ಇಲಾಖೆಗಳು ಮತ್ತು ಸರ್ವಯೋಗ ಸಂಸ್ಥೆಗಳ ಸಹಯೋಗದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ 2026 ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ದೇಶದ ಶ್ರೇಷ್ಠ ಋಷಿಮುನಿಗಳು, ವಿಶೇಷವಾಗಿ ಪತಂಜಲಿ ಮಹರ್ಷಿಗಳು ಜಗತ್ತಿಗೆ ನೀಡಿದ ಈ ಅಮೂಲ್ಯ ಕೊಡುಗೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಬೇಕು. ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ಈ ಯೋಗ ವಿದ್ಯೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ.

ಜಾಗತಿಕ ಮಟ್ಟದಲ್ಲಿ ಯೋಗ ದಿನ ಆಚರಿಸಬೇಕೆಂದು ಅವರು ನೀಡಿದ ಕರೆಗೆ ವಿಶ್ವಸಂಸ್ಥೆ ಮನ್ನಣೆ ನೀಡಿತು. ಅದರ ಫಲವಾಗಿ ಇಂದು ಯೋಗ ದಿನಾಚರಣೆ ಕೇವಲ ಭಾರತಕ್ಕೆ ಸೀಮಿತವಾಗಿರದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಯಶಸ್ವಿಯಾಗಿ ಆಚರಿಸಲ್ಪಡುತ್ತಿದೆ ಎಂದರು.

ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ. ಜುಬೇದಾಬೇಗಂ ತಿಗಳೇರ, ಆಯುಷ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಸಂಜೀವ ನಾರಪ್ಪನವರ, ಬ್ರಹ್ಮಕುಮಾರಿಯರು, ಆಯುಷ್ ವೈದ್ಯಾಧಿಕಾರಿಗಳ ಸಂಘದ ಕಾರ್ಯದರ್ಶಿ ಡಾ. ಬಿ.ಎಂ. ಲೋಕಪುರಿ, ಡಾ. ಎಂ.ಎಂ. ಹಾದಿಮನಿ, ಡಾ. ಸಾಯಿಪ್ರಕಾಶ, ಆಡಳಿತಧಿಕಾರಿ ಸುಧಾ ಜಾಲಿಹಾಳ, ಆಯುರ್ವೇದ ಕಾಲೇಜಿನ ಡಾ. ಕೊಟ್ರುಶೆಟ್ರು, ಆರೋಗ್ಯ ಇಲಾಖೆಯ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ, ವಿವಿಧ ಯೋಗ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

ಮುನ್ಸಿಪಲ್ ಕಾಲೇಜು ಆವರಣದಿಂದ ಪ್ರಾರಂಭವಾಗಿ ಗಾಂಧಿ ಸರ್ಕಲ್ ಮಾರ್ಗವಾಗಿ ರೋಟರಿ ಸರ್ಕಲ್, ಹಳೆ ಬಸ್ ನಿಲ್ದಾಣ, ಟಾಂಗಾ ಕೂಟ, ಮಹೇಂದ್ರಕರ ಸರ್ಕಲ್, ಶಹಪೂರ ಪೇಟೆ, ಗಾಂಧಿ ಸರ್ಕಲ್, ಮುನ್ಸಿಪಲ್ ಕಾಲೇಜು ಆವರಣದ ವರೆಗೆ 12ನೇ ಅಂತಾರಾಷ್ಟ್ರೀಯ ಯೋಗ ಜಾಗೃತಿ ಜಾಥಾ ಜರುಗಿತು.

ಜಾಥಾದಲ್ಲಿ ರೋಣ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು, ಬಿದರೂರು ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಯೋಗ ಬೆಳಕು ಆರೋಗ್ಯದ ಹೊಳಪು, ಯೋಗ ಶಕ್ತಿ ಆರೋಗ್ಯವೇ ಭಕ್ತಿ, ಯೋಗ ಮಾಡಿ ರೋಗ ಓಡಿಸಿ, ಯೋಗ ಮಂತ್ರ ಆರೋಗ್ಯವೇ ತಂತ್ರ, ಯೋಗಕ್ಕೆ ಬನ್ನಿ ರೋಗ ಇಲ್ಲಾ ಎನ್ನಿ, ಯೋಗ ಯಾಕಪ್ಪ ಆರೋಗ್ಯ ಬೇಕಪ್ಪ, ಮಾಡಿದರೆ ಯೋಗ ಓಡುವುದು ರೋಗ ಎಂಬ ಘೋಷಣಾ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಅವಶ್ಯ
ಅರ್ಧಕ್ಕೆ ನಿಂತ ಶಾಲಾ ಕಟ್ಟಡ ಪೂರ್ಣಗೊಳಿಸಿ