ಆರೋಗ್ಯ ವೃದ್ಧಿಗೆ ಯೋಗ ಸಾಧನೆ ಸಹಕಾರಿ: ಡಾ. ಉಮೇಶ ಪುರದ

KannadaprabhaNewsNetwork |  
Published : Jun 17, 2026, 02:15 AM IST
ಕಾರ್ಯಕ್ರಮವನ್ನು ಉದ್ದೇಶಿಸಿ ಡಾ.ಉಮೇಶ ಪುರದ ಮಾತನಾಡಿದರು.  | Kannada Prabha

ಸಾರಾಂಶ

. ನಾವೆಲ್ಲರೂ ಬಹುಮುಖಿಯಾಗಿ ಆರೋಗ್ಯವಂತರಾಗಲು ಯೋಗ ಸಾಧನೆ ಅತ್ಯುತ್ತಮ ಮಾರ್ಗವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಖ್ಯಾತ ವೈದ್ಯ ಡಾ. ಉಮೇಶ ಪುರದ ಹೇಳಿದರು.

ಗದಗ: ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯಾನದಂತೆ, ಒಬ್ಬ ವ್ಯಕ್ತಿಯು ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಮತ್ತು ನೈತಿಕವಾಗಿ ಸುಸ್ಥಿತಿಯಲ್ಲಿದ್ದಾಗ ಮಾತ್ರ ಆತನನ್ನು ಆರೋಗ್ಯವಂತ ಎಂದು ಕರೆಯಬಹುದು. ಈ ದೃಷ್ಟಿಯಿಂದ ನೋಡಿದರೆ ನಮ್ಮಲ್ಲಿ ಯಾರು ಸಂಪೂರ್ಣ ಆರೋಗ್ಯವಂತರಲ್ಲ. ನಾವೆಲ್ಲರೂ ಬಹುಮುಖಿಯಾಗಿ ಆರೋಗ್ಯವಂತರಾಗಲು ಯೋಗ ಸಾಧನೆ ಅತ್ಯುತ್ತಮ ಮಾರ್ಗವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಖ್ಯಾತ ವೈದ್ಯ ಡಾ. ಉಮೇಶ ಪುರದ ಹೇಳಿದರು.

ಎಸ್.ವೈ.ಬಿ.ಎಂ.ಎಸ್. ಯೋಗ ಪಾಠಶಾಲೆ, ಬಸವ ಯೋಗ ಮಹಾವಿದ್ಯಾಲಯ, ಲಿಂಗಾಯತ ಪ್ರಗತಿಶೀಲ ಸಂಘ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಗದಗ ಜಿಲ್ಲಾ ಯೋಗ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ 12ನೇ ಅಂತಾರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಯೋಗ ಅರಿವು, ಆಚಾರ ಶಿಬಿರದ ಪ್ರಾರಂಭೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಧರ್ಮಗುರುಗಳಲ್ಲಿ ಧಾರ್ಮಿಕ ಆರೋಗ್ಯ, ಸನ್ಯಾಸಿಗಳಲ್ಲಿ ಆಧ್ಯಾತ್ಮಿಕ ಆರೋಗ್ಯ, ಯುವಕರಲ್ಲಿ ನೈತಿಕ ಆರೋಗ್ಯ, ಶಿಕ್ಷಕರಲ್ಲಿ ಚಾರಿತ್ರಿಕ ಆರೋಗ್ಯ ಹಾಗೂ ಮೇಧಾವಿ ಮುಖಂಡರಲ್ಲಿ ಸಾಮಾಜಿಕ ಆರೋಗ್ಯ ಸ್ಥಾಪಿತವಾದರೆ ಮಾತ್ರ ಒಂದು ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಸಮಾಜ ಸೇವಕಿ ಶ್ರೀದೇವಿ ಶೆಟ್ಟರ ಮಾತನಾಡಿ, ಸಮಾಜದಲ್ಲಿ ಎಲ್ಲರಿಗಿಂತ ಮಹಿಳೆಯರ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಈ ನಾಡಿಗೆ ಉತ್ತಮ ಮಕ್ಕಳನ್ನು ಕೊಡುಗೆಯಾಗಿ ನೀಡುವ ಅಮೂಲ್ಯ ಜವಾಬ್ದಾರಿ ಮಹಿಳೆಯರ ಮೇಲಿದೆ. ಮಹಿಳೆಯರು ಯೋಗ ಸಾಧನೆಯ ಮಹತ್ವವನ್ನು ಅರಿತು, ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಕೋಶಾಧ್ಯಕ್ಷ ಕೆ.ಎಸ್. ಗುಗ್ಗರಿ ಮಾತನಾಡಿ, ಯೋಗ ಎಂದರೆ ಕೂಡುವುದು ಎಂದರ್ಥ. ನಾವೆಲ್ಲರೂ ಇಂದು ಕುಟುಂಬ, ಸಮಾಜ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಒಂದಾಗಿ ಕೂಡಿ ಬಾಳಿದರೆ ನಮ್ಮೆಲ್ಲರ ಜೀವನ ಸುಖಕರವಾಗುತ್ತದೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ಜಯಶ್ರೀ ಉಗಲಾಟ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರು, ತೋಂಟದಾರ್ಯ ಪ್ರಸಾದ ನಿಲಯದ ವಿದ್ಯಾರ್ಥಿಗಳು, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಸದಸ್ಯೆಯರು ಹಾಗೂ ಅಪಾರ ಸಂಖ್ಯೆಯ ಯೋಗಾಸಕ್ತರು ಭಾಗವಹಿಸಿದ್ದರು.

ಆದರ್ಶ ಹೂಗಾರ ಮತ್ತು ನವೀನ್ ಪಲ್ಲೇದ ಪ್ರಾರ್ಥಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡ್ರು ಸ್ವಾಗತಿಸಿದರು. ಸುನಂದಾ ಜ್ಯಾನೋಪಂತರ ಸಂಗೀತ ಸೇವೆ ಸಲ್ಲಿಸಿದರು. ನಗರಸಭೆಯ ಮಾಜಿ ಅಧ್ಯಕ್ಷೆ ಶಿವಲೀಲಾ ಅಕ್ಕಿ ವಂದಿಸಿದರು. ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್.ಪಲ್ಲೇದ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಕಾಂಗ್ರೆಸ್ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸಲಿ
ನೀರಿನ ಸಂಗ್ರಹ, ಮೂಲಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ