ಬ್ಯಾಡಗಿ: ಇತ್ತೀಚಿನ ದಿನಗಳಲ್ಲಿ ಒತ್ತಡದ ಬದುಕನ್ನು ಸಾಗಿಸುತ್ತಿರುವ ಪ್ರತಿಯೊಬ್ಬರು ಆರೋಗ್ಯಕ್ಕೆ ಒತ್ತು ನೀಡುತ್ತಿಲ್ಲ. ಇದರ ಪರಿಣಾಮ ಪ್ರತಿದಿನ ಆಹಾರದ ಜೊತೆಗೆ ಔಷಧಿಗಳನ್ನು ಸೇವಿಸಲಾಗುತ್ತಿದೆ, ದಣಿದ ದೇಹ ಮತ್ತು ಮನಸ್ಸುಗಳಲ್ಲಿ ಚೈತನ್ಯ ನೀಡಲು ಯೋಗಾಭ್ಯಾಸ ಉತ್ತಮವಾಗಿದೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯಪಟ್ಟರು.
ಯೋಗ ಕೇವಲ ದೈಹಿಕ ಶ್ರಮವಲ್ಲ, ಇದರಲ್ಲಿ ಆಧ್ಯಾತ್ಮ ಹಾಗೂ ಮಾನಸಿಕ ಬದಲಾವಣೆಗೆ ಅವಶ್ಯವಿದೆ, ದೈನಂದಿನ ಯೋಗಾಭ್ಯಾಸ ರೂಢಿಸಿಕೊಂಡಲ್ಲಿ ಹಲವು ರೋಗಗಳಿಂದ ದೂರ ಉಳಿಯಲು ಸಾಧ್ಯ, ಅನಾದಿ ಕಾಲದಿಂದಲೂ ಭಾರತದಲ್ಲಿ ಯೋಗಾಭ್ಯಾಸ ರೂಢಿಯಲ್ಲಿದೆ, ಋಷಿಮುನಿಗಳು ಸೇರಿದಂತೆ ಧಾರ್ಮಿಕ ಪರಿಚಾರಕರು ಆರೋಗ್ಯದ ದೃಷ್ಟಿಯಿಂದ ಯೋಗವನ್ನು ದೈನಂದಿನ ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾಗಿ ತಿಳಿಸಿದರು.
ಬಹು ಹಿಂದಿನಿಂದಲೂ ಗುರುಕುಲ ಶಿಕ್ಷಣ ಪದ್ಧತಿ ವ್ಯವಸ್ಥೆಗಳಲ್ಲಿ ಯೋಗ ಮಾಡುವುದು ಕಡ್ಡಾಯವಾಗಿತ್ತು. ಆಯುಷ್ಯ ಮತ್ತು ದೈಹಿಕ ಕ್ರಿಯೆಗೆ ಯೋಗ ಮಹತ್ವವಾಗಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಳವಡಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಕಡ್ಡಾಯವಾಗಿ ಯೋಗ ಕಲಿಸಿದಲ್ಲಿ ಆರಂಭದಿಂದಲೇ ಆರೋಗ್ಯದ ಕುರಿತು ಅರಿವು ಮೂಡಲಿದೆ ಎಂದರು.ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಸಿ.ಆರ್. ಬಳ್ಳಾರಿ, ಎಸ್.ಆರ್. ಬಳ್ಳಾರಿ, ಸಂಯೋಜಕ ಸಿ.ಸಿ. ಪ್ರಭುಗೌಡರ, ಪ್ರಾಚಾರ್ಯ ಬಿ.ಸಿ. ಪ್ರಕಾಶ, ಎಂ. ಸುರೇಶ, ರೇಣುಕಾರಾಧ್ಯ ಚಿಟ್ಟಿಯೋಗ ಪರಿಣಿತ ಯಶವಂತ, ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳಾದ ಸಂಜನಾ, ನವ್ಯ, ಸಹನ, ಚಂದನ ಕಾರ್ಯಕ್ರಮ ನಡೆಸಿಕೊಟ್ಟರು.