ಬ್ಯಾಡಗಿ:ಆಧುನಿಕ ಒತ್ತಡಗಳಲ್ಲಿ ಪ್ರತಿಯೊಬ್ಬರು ಆರೋಗ್ಯಕ್ಕೆ ಒತ್ತು ನೀಡುತ್ತಿಲ್ಲ. ಇದರ ಪರಿಣಾಮ ಪ್ರತಿದಿನ ಆಹಾರದ ಜೊತೆಗೆ ಔಷಧಿಗಳನ್ನು ಸೇವಿಸಲಾಗುತ್ತಿದೆ. ದಣಿದ ದೇಹ ಹಾಗೂ ಮನಸ್ಸುಗಳಲ್ಲಿ ಚೈತನ್ಯ ನೀಡಲು ಯೋಗಾಭ್ಯಾಸ ಉತ್ತಮವಾಗಿದೆ ಎಂದು ತಹಶೀಲ್ದಾರ ಫೀರೋಜ್ ಶಾ ಸೋಮನಕಟ್ಟಿ ತಿಳಿಸಿದರು.
ಯೋಗ ಕೇವಲ ದೈಹಿಕ ಶ್ರಮವಲ್ಲ, ಇದರಲ್ಲಿ ಆಧ್ಯಾತ್ಮ ಹಾಗೂ ಮಾನಸಿಕ ಬದಲಾವಣೆಗೆ ಅವಶ್ಯವಿದೆ. ದೈನಂದಿನ ಯೋಗಾಭ್ಯಾಸ ರೂಢಿಸಿಕೊಂಡಲ್ಲಿ ಹಲವು ರೋಗದಿಂದ ದೂರ ಉಳಿಯಲು ಸಾಧ್ಯ, ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಯೋಗಾಭ್ಯಾಸ ರೂಢಿಯಲ್ಲಿದೆ, ಋಷಿಮುನಿಗಳು ಸೇರಿದಂತೆ ಧಾರ್ಮಿಕ ಪರಿಚಾರಕರು ಆರೋಗ್ಯದ ದೃಷ್ಟಿಯಿಂದ ಯೋಗವನ್ನು ದೈನಂದಿನ ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾಗಿ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಮಾತನಾಡಿ, ಬಹು ಹಿಂದಿನಿಂದಲೂ ಮಠ ಮಾನ್ಯಗಳು, ಗುರುಕುಲಗಳಲ್ಲಿ ಯೋಗ ಮಾಡುವುದು ಕಡ್ಡಾಯವಾಗಿತ್ತು. ಆಯುಷ್ಯ ಹಾಗೂ ದೈಹಿಕ ಕ್ರಿಯೆಗೆ ಯೋಗ ಮಹತ್ವವಾಗಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಳವಡಿಸುವ ಕುರಿತು ಚರ್ಚೆಗಳು ನಡೆಯುತ್ತಾ ಬಂದಿವೆ. ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಕಡ್ಡಾಯವಾಗಿ ಯೋಗ ಕಲಿಸಲು ನಿರ್ದೇಶಿಸಿದ್ದು ಇನ್ನೂ ವಸತಿ ಶಾಲೆಗಳಲ್ಲಿ ಪ್ರತ್ಯೇಕವಾಗಿ ತರಬೇತಿ ಪಡೆದ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.ಅಕ್ಷರ ದಾಸೋಹ ನಿರ್ದೇಶಕ ಎನ್. ತಿಮ್ಮಾರೆಡ್ಡಿ ಮಾತನಾಡಿ, ಭಾರತೀಯ ಸನಾತನ ಪರಂಪರೆಯಲ್ಲಿ ಯೋಗ ಗುರುಗಳಿಗೆ ವಿಶೇಷ ಸ್ಥಾನ ನೀಡಲಾಗಿತ್ತು, ಪೂರ್ವಜರು ಇದಕ್ಕೆ ಒತ್ತು ನೀಡಿದ್ದರು. ನಿತ್ಯದ ಆಹಾರ ವಿಹಾರಗಳಲ್ಲಿ ಯೋಗವೂ ಒಂದಾಗಿದೆ. ಆರೋಗ್ಯದಲ್ಲಿ ಸಾಕಷ್ಟು ಏರುಪೇರು, ವ್ಯತ್ಯಾಸಗಳಿಂದ ಬಳಲುವಂತಾಗಿದ್ದು, ವಿಜ್ಞಾನಕ್ಕೂ ಸವಾಲಾಗಿರುವ ದೊಡ್ಡ ಕಾಯಿಲೆಗಳಿಗೆ ಯೋಗದಿಂದ ಪರಿಹಾರ ಸಿಕ್ಕಿದೆ ಎಂದರು.
ಈ ವೇಳೆ ಪುರಸಭೆ ಸದಸ್ಯೆ ಕವಿತಾ ಸೊಪ್ಪಿನಮಠ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎ. ಹುಲ್ಲಾಳ, ದೈಹಿಕ ಶಿಕ್ಷಣ ಪರಿವೀಕ್ಷಕ ಪಮ್ಮಾರ, ನೌಕರರ ಸಂಘದ ಅಧ್ಯಕ್ಷ ಮಹದೇವ ಕರಿಯಣ್ಣನವರ, ಎಸ್.ಯು. ಮಾಸ್ತಿ, ದಾನಪ್ಪ ಲಮಾಣಿ, ಸುಭಾಸ್ ಎಲಿ, ದ್ರಾಕ್ಷಾಯಿಣಿ ಹರಗಮಗಟ್ಟಿ, ಮಹೇಶ್ವರಿ ಪಸಾರದ, ಸುಧಾ ಹೊಸ್ಮನಿ, ಶೋಭಾ ನೋಟದ ಇನ್ನಿತರರಿದ್ದರು.