ಮೂಲ ರೂಪದಲ್ಲೇ ಯೋಗ ಅನುಸರಣೆಯಾಗಲಿ: ಸಂಸದ ಯದುವೀರ್

KannadaprabhaNewsNetwork |  
Published : Jun 22, 2024, 12:48 AM ISTUpdated : Jun 22, 2024, 12:49 AM IST
15 | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ಖ್ಯಾತಿಯ ಯೋಗಗುರು ಡಾ.ಪಿ.ಎನ್. ಗಣೇಶ್ ಕುಮಾರ್, ಯೋಗತಜ್ಞ ಹಾಗೂ ಆಯುರ್ವೇದ ವೈದ್ಯ ಡಾ.ಎ.ಎಸ್. ಚಂದ್ರಶೇಖರ್ ಅವರಿಗೆ ದಿ ಸ್ಟಾರ್ ಆಫ್ ಯೋಗ ಪ್ರಶಸ್ತಿ, ಅಂತಾರಾಷ್ಟ್ರೀಯ ಯೋಗಪಟು ಅಮೂಲ್ಯ, ಅಂಕಿತಾ ಅವರಿಗೆ ದಿ ರೈಸಿಂಗ್ ಸ್ಟಾರ್ ಆಫ್ ಯೋಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಭಾರತೀಯರಾಗಿ ನಾವು ನಮ್ಮ ಗುರು ಪರಂಪರೆ ನೀಡಿರುವ ರೀತಿಯಲ್ಲಿಯೇ ಯೋಗ ಅನುಸರಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಓದುಗ ಪ್ರಕಾಶನ, ಮೈಸೂರು ಕಲ್ಚರಲ್ ಅಸೋಸಿಯೇಷನ್, ಭಾರತೀ ಯೋಗಧಾಮ ಸಹಯೋಗದಲ್ಲಿ ಶುಕ್ರವಾರ ಮೈಸೂರಿನ ಉತ್ತನಹಳ್ಳಿಯ ವಿಜಯಗಿರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಐತಿಚಂಡ ರಮೇಶ್ ಉತ್ತಪ್ಪ ಅವರ ‘ಯೋಗ ಸಂಗೀತ, ಮೈಸೂರು ಪರಂಪರೆ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಗೀತ ಮತ್ತು ಯೋಗಕ್ಕೆ ತನ್ನದೇ ಆದ ಪರಂಪರೆ ಇದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 108 ಯೋಗಾಸನಗಳನ್ನು ಪ್ರದರ್ಶಿಸುತ್ತಿದ್ದರು. ಅದೇ ರೀತಿ ಮೈಸೂರಿನ ಯೋಗ ಗುರು ತಿರುಮಲೈ ಕೃಷ್ಣಮಾಚಾರ್ ದೇಶದಾದ್ಯಂತ ಯೋಗ ಪಸರಿಸಿದರು. ಮೂರು ಸಾವಿರಕ್ಕೂ ಹೆಚ್ಚು ಆಸನಗಳನ್ನು ಪರಿಚಯಿಸಿದರು. ಯೋಗದಲ್ಲಿ ದೇಹವನ್ನು ಸಹಜ ಸ್ಥಿತಿಯಿಂದ ಕ್ರಿಯಾಶೀಲತೆಗೆ ಹೇಗೆ ತೆಗೆದುಕೊಂಡು ಹೋಗಬೇಕೆಂಬುದನ್ನು ಹೇಳಿಕೊಟ್ಟಿದ್ದಾರೆ. ಮಾತ್ರವಲ್ಲದೇ ನಾವೆಲ್ಲರೂ ಭಾರತೀಯರಾಗಿ ಗುರು ಪರಂಪರೆ ನೀಡಿರುವ ರೀತಿಯಲ್ಲಿಯೇ ಯೋಗವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ ಎಂದರು.

ಯದುವೀರ್ ಅವರು ರವೀಂದ್ರ ಹೆಗ್ಡೆ ಅವರು ಚಿತ್ರಿಸಿದ ತಮ್ಮದೇ ಕಲಾಕೃತಿಯನ್ನು ಸ್ವೀಕರಿಸಿದರು. ಬಳಿಕ ಪ್ರಕಾಶ್ ಚಿಕ್ಕಪಾಳ್ಯ ಅವರ ಓದುಗ ಪ್ರಕಾಶನ ಸಂಸ್ಥೆಯ ಲೋಗೋ ಬಿಡುಗಡೆಗೊಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ಯೋಗಧಾಮ ಸಂಸ್ಥಾಪಕ ಡಾ.ಕೆ.ಎಲ್. ಶಂಕರನಾರಾಯಣ ಜೋಯ್ಸ್ ಮಾತನಾಡಿ, ಇತ್ತೀಚೆಗೆ ಯೋಗ ಪ್ರವರ್ಧಮಾನಕ್ಕೆ ಬಂದಿರುವುದು ಶ್ಲಾಘನೀಯ. ಆದರೆ, ಮೈಸೂರಿನಿಂದ ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ಯೋಗವನ್ನು ಮೂಲ ಸ್ಥಿತಿಯಲ್ಲಿಯೇ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ವಿದೇಶದಲ್ಲಿ ಬಳಕೆಯಾಗುತ್ತಿರುವ ಯೋಗಾಸನವನ್ನು ಗಮನಿಸಿದರೆ ಇದು ನಮ್ಮ ಕೊಡುಗೆಯೇ ಎಂಬ ಅನುಮಾನ ಬರುತ್ತದೆ. ಹಾಗಾಗಿ ಯೋಗವನ್ನು ರೂಪಾಂತರಗೊಳಿಸದೆ ಹಿರಿಯರಿಂದ ಬಳುವಳಿಯಾಗಿ ಬಂದಿರುವ ರೀತಿಯಲ್ಲಿಯೇ ಅದರ ಪರಂಪರೆಯನ್ನು ಮುಂದುವರಿಸಬೇಕು ಎಂದು ಅವರು ಸಲಹೆ ನೀಡಿದರು.

ಕೇವಲ ಆಸನ ಮಾಡುವುದು ಯೋಗವಲ್ಲ. ಸಮಚಿತ್ತದಿಂದ ಅರ್ಧ ಗಂಟೆ ಕುಳಿತುಕೊಳ್ಳುವುದೂ ಆಸನಕ್ಕಿಂತ ಮಿಗಿಲಾದ ಸ್ಥಿತಿ. ಕನಸಿನ ಸ್ಥಿತಿ, ಗಾಢವಾದ ನಿದ್ರೆಯನ್ನು ಪ್ರಚೋದಿಸುತ್ತದೆ. ಈ ರೀತಿಯ ಎಲ್ಲಾ ವಿಷಯವನ್ನು ಒಳಗೊಂಡ ಸಮಗ್ರವಾದ ಯೋಗವನ್ನು ಮಕ್ಕಳಿಗೆ ಹೇಳಿಕೊಡಬೇಕು ಎಂದರು.

ಲಕ್ಷ ವೃಕ್ಷ ಆಂದೋಲನದ ರೂವಾರಿ ಎಚ್.ವಿ. ರಾಜೀವ್ ಮಾತನಾಡಿ, ಯೋಗ ಉಳಿಸಿದ್ದು ಮೈಸೂರು ಸಂಸ್ಥಾನ. ಇದರಿಂದ ಇಡೀ ವಿಶ್ವವೇ ಯೋಗವನ್ನು ಆಚರಿಸುವಂತಾಗಿದೆ. ಇದರ ಹಿಂದೆ ಸಾವಿರಾರು ಜನರ ತಪಸ್ಸು ಇದೆ ಎಂದು ಸ್ಮರಿಸಿದರು.

ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, ಯೋಗ ಪರಂಪರೆಯ ಮೂಲ ಮೈಸೂರು ಆಗಿದ್ದರೂ ಯೋಗವನ್ನು ಸಮಗ್ರವಾಗಿ ಅರ್ಥೈಸುವ ಹಾಗೂ ಅದನ್ನು ಆಚರಿಸುವವರಿಗೆ ಬೇಕಾದ ಮಾಹಿತಿ ನೀಡುವ ಸಮಗ್ರವಾದ ಪುಸ್ತಕದ ಕೊರತೆ ಇದೆ ಎಂದರು.

ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ. ನಾಗೇಶ್, ಓದುಗ ಪ್ರಕಾಶನ ಸಂಸ್ಥೆಯ ಪ್ರಕಾಶ್ ಚಿಕ್ಕಪಾಳ್ಯ ಮೊದಲಾದವರು ಇದ್ದರು.

ಎಂ.ವಿ.ಯೋಗಾಸ್ ನ ಯೋಗಪಟುಗಳು ಕಲಾತ್ಮಕ ಯೋಗವನ್ನು ಮೂರು ವಿಭಾಗಗಳಲ್ಲಿ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. ಭಾರತೀ ಯೋಗಧಾಮದ ವಿದ್ಯಾರ್ಥಿಗಳು ಯೋಗ ಪ್ರದರ್ಶಿಸಿದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ:

ಅಂತಾರಾಷ್ಟ್ರೀಯ ಖ್ಯಾತಿಯ ಯೋಗಗುರು ಡಾ.ಪಿ.ಎನ್. ಗಣೇಶ್ ಕುಮಾರ್, ಯೋಗತಜ್ಞ ಹಾಗೂ ಆಯುರ್ವೇದ ವೈದ್ಯ ಡಾ.ಎ.ಎಸ್. ಚಂದ್ರಶೇಖರ್ ಅವರಿಗೆ ದಿ ಸ್ಟಾರ್ ಆಫ್ ಯೋಗ ಪ್ರಶಸ್ತಿ, ಅಂತಾರಾಷ್ಟ್ರೀಯ ಯೋಗಪಟು ಅಮೂಲ್ಯ, ಅಂಕಿತಾ ಅವರಿಗೆ ದಿ ರೈಸಿಂಗ್ ಸ್ಟಾರ್ ಆಫ್ ಯೋಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ