ಕನ್ನಡಪ್ರಭ ವಾರ್ತೆ ಹಾಸನ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸರ್ಕಾರವು ೧೦೮ ಆರೋಗ್ಯ ಕವಚ ಸೇವೆಯಡಿ ನೇಮಕಗೊಂಡಿರುವ ಸಿಬ್ಬಂದಿಗೆ ಕನಿಷ್ಠ ವೇತನದ ಜೊತೆಗೆ ಅನುಭವ ಬೋನಸ್ ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ ನೀಡುವ ಆದೇಶ ಹೊರಡಿಸಿರುವುದನ್ನು ಸ್ವಾಗತಿಸಿದರು. ಈ ನಿರ್ಧಾರದಿಂದ ನೌಕರರಲ್ಲಿ ಆಶಾವಾದ ಮೂಡಿದ್ದು, ಸೇವೆಯನ್ನು ಇನ್ನಷ್ಟು ನಿಷ್ಠೆಯಿಂದ ನಿರ್ವಹಿಸಲು ಉತ್ತೇಜನ ಸಿಕ್ಕಿದೆ. ಆದರೆ, ಇನ್ನೂ ಹಲವು ಪ್ರಮುಖ ಬೇಡಿಕೆಗಳು ಬಾಕಿ ಉಳಿದಿದ್ದು, ಅವುಗಳನ್ನು ತ್ವರಿತವಾಗಿ ಈಡೇರಿಸಬೇಕಾಗಿದೆ ಎಂದು ಅವರು ಹೇಳಿದರು.
೨೦೦೮ರಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಒಳಪಡಿಸದೇ ನೇರ ನೇಮಕಾತಿ ಮಾಡಿಕೊಳ್ಳಬೇಕು. ದೀರ್ಘಕಾಲ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಭದ್ರತೆ ಮತ್ತು ಗೌರವ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಆಗ್ರಹಿಸಿದರು.ಪ್ರಸ್ತುತ ಜಾರಿಯಲ್ಲಿರುವ ನಾಲ್ಕು ವಲಯ (ಝೋನ್) ವ್ಯವಸ್ಥೆಯಿಂದ ವೇತನ ಮತ್ತು ಕರ್ತವ್ಯ ಹಂಚಿಕೆಯಲ್ಲಿ ಅಸಮತೋಲನ ಉಂಟಾಗುತ್ತಿದೆ, ಇದನ್ನು ಪರಿಷ್ಕರಿಸಿ ಎರಡು ವಲಯಗಳಾಗಿ ರೂಪಿಸುವ ಮೂಲಕ ಸಮಾನತೆ ತರಬೇಕು ಎಂದು ಒತ್ತಾಯಿಸಿದರು.
ಇನ್ನೂ ಹಲವರು ತಮ್ಮ ಸ್ವಂತ ಜಿಲ್ಲೆಗಳ ಹೊರಗೆ ಕಾರ್ಯನಿರ್ವಹಿಸುತ್ತಿದ್ದು, ಕುಟುಂಬ ಜೀವನಕ್ಕೂ ತೊಂದರೆ ಉಂಟಾಗಿದೆ. ಆದ್ದರಿಂದ ಅವರನ್ನು ತಮ್ಮ ಮೂಲ ಜಿಲ್ಲೆಗೆ ವರ್ಗಾವಣೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರವು ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಆದೇಶ ಮಾಡಿರುವುದನ್ನು ಕಾರ್ಯರೂಪಕ್ಕೆ ತರಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಟರಾಜು, ಸುರೇಶ್ ಇತರರು ಉಪಸ್ಥಿತರಿದ್ದರು.