- ಬಿಜೆಪಿ ಶಾಸಕ ಹರೀಶ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಟೀಕೆ । ಎಸ್‌ಎಸ್ ಬಗ್ಗೆ ನುಡಿವಾಗ ಪ್ರಜ್ಞೆ ಇರಲಿ: ಕೆ.ಚಮನ್ ಸಾಬ್
ಕನ್ನಡಪ್ರಭ ವಾರ್ತೆ ದಾವಣಗೆರೆ
ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರನ್ನು ಟೀಕಿಸುತ್ತಾ, ಇದೀಗ ಜಿಲ್ಲಾ ಮಂತ್ರಿ ಎಸ್.ಎಸ್. ಮಲ್ಲಿಕಾರ್ಜುನ ವಿರುದ್ಧ ವಾಗ್ದಾಳಿ ನಡೆಸಿರುವ ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ್ ಹೇಳಿಕೆ, ವರ್ತನೆಗಳು ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದಕ್ಕೆ ನಿದರ್ಶನ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಟೀಕಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರದಲ್ಲಿ ಹಿಂದೊಮ್ಮೆ ಜಾತಿ ನಿಂದನೆ ಕೇಸ್, ಈಚೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ವಿರುದ್ಧ ನೀಡಿದ ಹೇಳಿಕೆಗೆ ಸಂಬಂಧಿದಂತೆ ಶಾಸಕ ಬಿ.ಪಿ.ಹರೀಶ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದೀಗ ಮತ್ತೆ ಕಾಡಜ್ಜಿ ಪ್ರಕರಣದಲ್ಲಿ ಮತ್ತೆ ಜಾತಿ ನಿಂದನೆ ಕೇಸ್ ದಾಖಲಾಗಿದೆ ಎಂದರು.
ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಓಲೈಕೆಗೆ ಹರೀಶ ಹೀಗೆಲ್ಲಾ ಹೇಳಿಕೆ ನೀಡುತ್ತಿದ್ದಾರೆ. ಹರಿಹರ ಕ್ಷೇತ್ರ ಅಭಿವೃದ್ಧಿಗೆ ಪೂರಕವಾಗಿ ಕೆಡಿಪಿ ಸಭೆಗೆ ಹಾಜರಾಗಲು ಬಿ.ಪಿ.ಹರೀಶ್‌ಗೆ ಸಮಯವಿಲ್ಲ. ಆದರೆ, ದಾವಣಗೆರೆ ಉತ್ತರ ಕ್ಷೇತ್ರದ ಕಾಡಜ್ಜಿ ಗ್ರಾಮದ ಕಡೆ ಸುತ್ತಾಡಲು ಬೇಕಾದಷ್ಟು ಸಮಯವಿದೆ. ಯಶವಂತ ರಾವ್ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಕಾರಣಕ್ಕೆ ಹರೀಶ ಅವರನ್ನು ಸಿದ್ದೇಶ್ವರ ಛೂ ಬಿಟ್ಟಿದ್ದಾರೆ ಎಂದು ಕುಟುಕಿದರು.ಲೋಕಸಭೆ ಚುನಾವಣೆ ಸೋತು ಈಗಾಗಲೇ ಭೀಮಸಮುದ್ರ ಸೇರಿರುವ ಜಿ.ಎಂ. ಸಿದ್ದೇಶ್ವರಗೆ ಇದೆಲ್ಲವೂ ತಿರುಗುಬಾಣ ಆಗಲಿವೆ. ಶಾಮನೂರು ಕುಟುಂಬದ ವಿರುದ್ಧ ಪಿತೂರಿ ಮಾಡಿದರೆ ಜನರೇ ತಕ್ಕ ಉತ್ತರ ನೀಡುತ್ತಾರೆ. ನಿಮ್ಮಂತಹ ನೂರಾರು ಜನ ಬಂದುಹೋದರೂ ಶಾಮನೂರು ಕುಟುಂಬಕ್ಕೆ ಏನೂ ಮಾಡಲಾಗುವುದಿಲ್ಲ. ಶಾಮನೂರು ಶಿವಶಂಕರಪ್ಪನವರ ಕಾಲಿನ ಧೂಳಿಗೂ ನೀವ್ಯಾರೂ ಸಮ ಇಲ್ಲ. ಶಾಸಕರಾದ ಮಾತ್ರಕ್ಕೆ ನೀವೇನು ಸರ್ವಾಧಿಕಾರಿಯೇ? ಮಹಿಳೆ ಎಂಬುದನ್ನೂ ಮರೆತು, ಎಸ್‌ಪಿ ಅವರಿಗೆ ನಾಯಿಗೆ ಹೋಲಿಸಿದಿರಿ. ಜಿಲ್ಲಾಧಿಕಾರಿ, ಜಿಲ್ಲಾಡಳಿತವನ್ನು ಕಳ್ಳರಿಗೆ ಹೋಲಿಸಿದಿರಿ. ಮಂತ್ರಿ ಮನೆಯ ಸೀರೆ ಒಗೆಯಲು ಹೋಗಿ ಅಂತೆಲ್ಲಾ ಕೂಗಾಡಿದ್ದೀರಿ. ಇದನ್ನೆಲ್ಲಾ ಹೇಳಲು ನೀವ್ಯಾರು ಎಂದು ಡಿ.ಬಸವರಾಜ ಕಿಡಿಕಾರಿದರು.
ಹಗುರ ಮಾತು ಸಲ್ಲದು:ಪಾಲಿಕೆ ಮಾಜಿ ಸದಸ್ಯ ಸುರಭಿ ಎಸ್.ಶಿವಮೂರ್ತಿ ಮಾತನಾಡಿ, ಹರಿಹರದಲ್ಲಿ ಬಿಜೆಪಿ ಬ್ರಾಂಡ್‌ನಿಂದ ಹರೀಶ ಗೆದ್ದಿದ್ದೇ ಹೊರತು, ವೈಯಕ್ತಿಕ ವರ್ಚಸ್ಸಿನಿಂದಲ್ಲ. ಮೊದಲು ನಿಮ್ಮ ಕ್ಷೇತ್ರದ ಅಭಿವೃದ್ಧಿ, ಜನಪರ ಕೆಲಸ ಮಾಡಿ. ಶಾಸಕನಾಗಿದ್ದಾಗ, ನಿಮ್ಮ ಸರ್ಕಾರವಿದ್ದಾಗ ನೀವೇನು ಮರಳು ದಂಧೆಯನ್ನೇ ಮಾಡಿಲ್ಲವಾ? ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಎಂದಿಗೂ ನಿಮಗೆ ವೈಯಕ್ತಿಕವಾಗಲಿ, ನಿಮ್ಮ ಕ್ಷೇತ್ರದ ಬಗ್ಗೆಯಾಗಲೀ ಮಾತನಾಡಿದವರಲ್ಲ. ಶಿವಶಂಕರಪ್ಪ ಹೋಗಲಿ ಬಿಡು ಅಂತಾ ಎಸ್.ಎಸ್. ಮಲ್ಲಿಕಾರ್ಜುನರಿಗೆ ತಡೆಯುತ್ತಿದ್ದವರು. ಅಂತಹವರ ಬಗ್ಗೆ ಹಗುರ ಮಾತು ಸಲ್ಲದು ಎಂದು ಆಕ್ಷೇಪಿಸಿದರು.
ಪಕ್ಷದ ಮುಖಂಡರಾದ ಮಾಜಿ ಮೇಯಕ್ ವಿನಾಯಕ ಪೈಲ್ವಾನ್ ಕೆ.ಮಂಜುನಾಥ, ಡಿ.ಶಿವಕುಮಾರ, ಡಿ.ಎಸ್.ಸುರೇಶ, ಸಿ.ರಮೇಶ ಇತರರು ಇದ್ದರು.- - -
* (ಕೋಟ್-1) ಶಾಮನೂರು ಶಿವಶಂಕರಪ್ಪ ವ್ಯಕ್ತಿತ್ವದ ಬಗ್ಗೆ ಮಾತನಾಡುವ ಅರ್ಹತೆ ಬಿ.ಪಿ.ಹರೀಶ್‌ಗೆ ಇಲ್ಲ. ಎಸ್.ಎಸ್. ಮಲ್ಲಿಕಾರ್ಜುನ ಬಗ್ಗೆ ವಿರೋಧವಿದ್ದರೆ ಹೋರಾಟ ಮಾಡಲಿ. ಶಾಮನೂರು ಅವರ ವ್ಯಕ್ತಿತ್ವಕ್ಕಾದರೂ ಗೌರವ ಬೇಡವಾ? ನಾವು ನಿಮ್ಮಪ್ಪ ಅಂತೆಲ್ಲಾ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಅದೃಷ್ಟ ಯಾರಿಗಿದೆಯೋ ಅಂತಹವರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ಹಿರಿಯರಾದ ಶಾಮನೂರು ಶಿವಶಂಕರಪ್ಪ ಬಗ್ಗೆ ಮಾತನಾಡುವಾಗ ಜಾಗ್ರತೆ.- ಕೆ.ಚಮನ್ ಸಾಬ್, ಮಾಜಿ ಮೇಯರ್.
- - -(ಕೋಟ್-2) ದಾವಣಗೆರೆ ಜಿಲ್ಲೆಗೆ ಜಿ.ಎಂ. ಸಿದ್ದೇಶ್ವರ, ಬಿ.ಪಿ.ಹರೀಶ ಕೊಡುಗೆ ಏನು? ಲ್ಯಾಂಡ್ ಮಾರ್ಕ್‌ನಂತಹ ಸಾಧನೆ ಏನು ಮಾಡಿದ್ದೀರಿ? ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಸಾಕಷ್ಟು ಕೆಲಸ ಮಾಡಿದ್ದಾರೆ. ಶಾಮನೂರು ಕುಟುಂಬಕ್ಕೆ ಬಿ.ಪಿ.ಹರೀಶ, ಯಶವಂತರಾವ್ ಯಾವುದಕ್ಕೂ ಸಮವಲ್ಲ. ನಾಲ್ವರು ಮಾಜಿ ಸಿಎಂಗಳು ಭಕ್ತಿ ಪೂರ್ವಕವಾಗಿ ಶಾಮನೂರು ಶ್ರದ್ಧಾಂಜಲಿಗೆ ಬಂದಿದ್ದರೆಂದರೆ ಶಿವಶಂಕರಪ್ಪನವರ ವ್ಯಕ್ತಿತ್ವವನ್ನು ಟೀಕಾಕಾರರು ಅರಿಯಬೇಕು.
- ಸುರಭಿ ಎಸ್.ಶಿವಮೂರ್ತಿ. ಪಾಲಿಕೆ ಮಾಜಿ ಸದಸ್ಯ, ಶಾಮನೂರು ಆಪ್ತ.- - -
-22ಕೆಡಿವಿಜಿ5:ದಾವಣಗೆರೆಯಲ್ಲಿ ಗುರುವಾರ ಕಾಂಗ್ರೆಸ್ ಮುಖಂಡರಾದ ಡಿ.ಬಸವರಾಜ, ಕೆ.ಚಮನ್ ಸಾಬ್, ಸುರಭಿ ಎಸ್.ಶಿವಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾ ಬಿಜೆಪಿ ಮುಖಂಡರ ನಡೆ ಖಂಡಿಸಿದರು.