ಕನ್ನಡಪ್ರಭ ವಾರ್ತೆ ಗುಬ್ಬಿ
ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಓದಿಯೇ ಇಂದು ನ್ಯಾಯಾಧೀಶರಾಗಿದ್ದೇನೆ ಎಂಬ ಹೆಮ್ಮೆ ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಅನುಪಮಾ ತಿಳಿಸಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶಾಲೆ ಆರಂಭವಾದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಬಲವರ್ಧನೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಶಾಲೆಗಳು ಅಭಿವೃದ್ಧಿಯತ್ತ ಸಾಗಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದರು.ಸರ್ಕಾರಿ ಶಾಲೆಗಳಲ್ಲಿ ಉತ್ತಮ ಪ್ರತಿಭೆಗಳಿದ್ದು, ಅವುಗಳನ್ನು ಹುಡುಕುವ ಕೆಲಸ ಮಾಡಿದಾಗ ಖಂಡಿತವಾಗಿ ಸಾಧನೆ ಮಾಡುತ್ತಾರೆ. ಆರ್ಥಿಕವಾಗಿ ಹಿಂದುಳಿದಿರುವಂತಹ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಹೆಚ್ಚು ಸೇರುವುದರಿಂದ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳು ನೀಡುವಂತಾಗಲಿ ಎಂದು ಆರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೇಪಾಕ್ಷಪ್ಪ ಮಾತನಾಡಿ, ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿಶೇಷವಾಗಿ ಅಭಿಯಾನ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮುಂದಾಗಿದ್ದೇವೆ. ಸರ್ಕಾರಿ ಶಾಲೆಯನ್ನು ಉಳಿಸಿ ಎನ್ನುವುದಕ್ಕಿಂತ ಸರ್ಕಾರಿ ಶಾಲೆಯನ್ನ ಹೆಚ್ಚಿನ ರೀತಿಯಲ್ಲಿ ಬಲವರ್ಧನೆ ಮಾಡಿದಾಗ ಖಂಡಿತವಾಗಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.ಸರ್ಕಾರಿ ಶಾಲೆಯಲ್ಲಿ ಸರ್ಕಾರ ಹತ್ತಾರು ಯೋಜನೆ ಮಾಡುವ ಮೂಲಕ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಅದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಲು ಅವಕಾಶ ಇದೆ. ಪೋಷಕರು ಸಹಕಾರ ನೀಡಬೇಕು. ಸರ್ಕಾರ ಗುಣಮಟ್ಟದ ಶಿಕ್ಷಣವನ್ನು ನೀಡುವಂತಹ ಶಿಕ್ಷಕರನ್ನು ಆಯ್ಕೆ ಮಾಡಿಕೊಂಡಿದೆ. ನಿಮ್ಮೂರಿನ ಸರ್ಕಾರಿ ಶಾಲೆಗಳನ್ನ ಉಳಿಸುವಂತಹ ಕೆಲಸಕ್ಕೆ ತಾವೆಲ್ಲರೂ ಕೂಡ ಮುಂದಾಗಬೇಕು ಎಂದು ಮನವಿ ಮಾಡಿದರು.
ಬಂಗ್ಲೊಪಾಳ್ಯ ಸರ್ಕಾರಿ ಶಾಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಹೊಸದಾಗಿ ಸೇರಿದ 5 ವಿದ್ಯಾರ್ಥಿಗಳಿಗೆ ಹೂವು ನೀಡುವ ಮೂಲಕ ಸ್ವಾಗತ ಮಾಡಲಾಯಿತು. ತಾಲೂಕು ಆರೋಗ್ಯ ಅಧಿಕಾರಿ ಡಾ.ಬಿಂದು ಮಾಧವ, ಬಿ ಆರ್ ಸಿ ಮಧುಸೂದನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎನ್ ಟಿ ಪ್ರಕಾಶ್, ಪ್ರಾಥಮಿಕ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಎಂ ಆರ್, ಕಾರ್ಯದರ್ಶಿ ಟಿ ಎಂ ಕುಮಾರ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳು ಹಲವು ಶಿಕ್ಷಕರು ಭಾಗವಹಿಸಿದ್ದರು.