ಸರ್ಕಾರಿ ಶಾಲೆಗೆ ಮಗು ದಾಖಲಿಸಿದರೆ ₹1000 ಎಫ್‌ಡಿ!

KannadaprabhaNewsNetwork |  
Published : May 21, 2026, 02:30 AM IST
ಪೋಟೊ ಕ್ಯಾಪ್ಸನ್‌:  ಎಸ್.ಎಮ್.ಪಾಟೀಲ ಕದಾಂಪುರ ಕ್ಲಸ್ಟರ್ ಸಿಆರ್ ಪಿ, ಮುಖ್ಯೋಪಾಧ್ಯಾಯ ಕೆಲೂರ.ಪೋಟೊ ಕ್ಯಾಪ್ಸನ್:ಅತ್ತಿಕಟ್ಟಿ ಸರಕಾರಿ ಶಾಲೆಯಲ್ಲಿ ಎಸ್.ಎಮ್.ಪಾಟೀಲ ಗುರುಗಳಿಗೆ ಗೌರವ ಸನ್ಮಾನ ಮಾಡಿದ ಶಿಕ್ಷಕರು, ಗ್ರಾಮಸ್ಥರು.ಪೋಟೊ ಕ್ಯಾಪ್ಸನ್: ಡಂಬಳ ಹೋಬಳಿಯ ಕೆಲೂರ ಗ್ರಾಮದ ಸರಕಾರಿ ಕನ್ನಡ ಶಾಲೆಗೆ ನೂತನ ಮುಖ್ಯೋಪಾಧ್ಯಯರಾದ ಎಸ್.ಎಮ್.ಪಾಟೀಲರಿಗೆ ಗ್ರಾಮದ ಹಿರಿಯರು, ಗುರುವೃಂದ ಸನ್ಮಾನಿಸಿ ಗೌರವಿಸಿದರು. | Kannada Prabha

ಸಾರಾಂಶ

ಈ ಶೈಕ್ಷಣಿಕ ವರ್ಷದಲ್ಲಿ ಕೆಲೂರಿನ ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಗೆ ದಾಖಲಾಗುವ ಪ್ರತಿ ಮಗುವಿಗೆ ₹1 ಸಾವಿರ ಫಿಕ್ಸ್ ಡೆಪಾಸಿಟ್ (5 ವರ್ಷ) ಇಡಲು ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್‌.ಎಂ. ಪಾಟೀಲ ಅವರು ₹10,000 ದೇಣಿಗೆಯನ್ನು ಎಸ್‌ಡಿಎಂಸಿ‌ ಸದಸ್ಯರ ಸಮ್ಮುಖದಲ್ಲಿ ಶಾಲೆಗೆ ನೀಡಿದರು. ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ತಕ್ಕಂತೆ ಹಣ ನೀಡುವುದಾಗಿ ತಿಳಿಸಿದ್ದಾರೆ.

ರಿಯಾಜಅಹ್ಮದ ದೊಡ್ಡಮನಿ

ಡಂಬಳ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಹಲವೆಡೆ ನಾನಾ ಪ್ರಯತ್ನಗಳು ನಡೆಯುತ್ತಿದ್ದು, ಇಲ್ಲೊಬ್ಬ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಸರ್ಕಾರಿ ಶಾಲೆಗೆ ದಾಖಲಾಗುವ ಪ್ರತಿ ಮಗುವಿನ ಹೆಸರಿನಲ್ಲಿ ₹1000 ಎಫ್‌ಡಿ ಇಡುತ್ತಿದ್ದಾರೆ.

ಇಂಥದ್ದೊಂದು ಯೋಜನೆಯನ್ನು ಮುಂಡರಗಿ ತಾಲೂಕಿನ ಕೆಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮುಖ್ಯೋಪಾಧ್ಯಾಯರು ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ)ಯೂ ಆಗಿರುವ ಎಸ್.ಎಂ. ಪಾಟೀಲ ಜಾರಿಗೆ ತಂದಿದ್ದಾರೆ.

ಈ ಶೈಕ್ಷಣಿಕ ವರ್ಷದಲ್ಲಿ ಕೆಲೂರಿನ ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಗೆ ದಾಖಲಾಗುವ ಪ್ರತಿ ಮಗುವಿಗೆ ₹1 ಸಾವಿರ ಫಿಕ್ಸ್ ಡೆಪಾಸಿಟ್ (5 ವರ್ಷ) ಇಡಲು ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್‌.ಎಂ. ಪಾಟೀಲ ಅವರು ₹10,000 ದೇಣಿಗೆಯನ್ನು ಎಸ್‌ಡಿಎಂಸಿ‌ ಸದಸ್ಯರ ಸಮ್ಮುಖದಲ್ಲಿ ಶಾಲೆಗೆ ನೀಡಿದರು. ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ತಕ್ಕಂತೆ ಹಣ ನೀಡುವುದಾಗಿ ತಿಳಿಸಿದ್ದಾರೆ.

ವೃತ್ತಿ ಪ್ರಾರಂಭ: ಎಸ್‌.ಎಂ. ಪಾಟೀಲ ಅವರು ಮೂಲತಃ ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಮದವರು. ಮಲ್ಲನಗೌಡ, ಸಕ್ರಮ್ಮ ಇವರ ತಂದೆ- ತಾಯಿಗಳು. 1994ರ ಆ. 12ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಉರಗನದೊಡ್ಡಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿ 3 ವರ್ಷ ಸೇವೆ ಸಲ್ಲಿಸಿದರು.

ನಂತರ 1997ರಲ್ಲಿ ಡಂಬಳ ಗ್ರಾಮದ ಸರ್ಕಾರಿ ಡಿಪಿಇಪಿ ಶಾಲೆಯಲ್ಲಿ 12 ವರ್ಷ, ಲಕ್ಕುಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದರು. ಕದಾಂಪುರ ಕ್ಲಸ್ಟರ್‌ಗೆ ಸಿಆರ್‌ಪಿ ಆಗಿ ಸೇವೆ ಮತ್ತು ಅದರ ಜತೆಗೆ ಕೆಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ನಿಯೋಜನೆಗೊಂಡಿದ್ದಾರೆ.

ಪ್ರಶಸ್ತಿ: ಇವರ ಸಾಧನೆ ಮೆಚ್ಚಿ ಜನಮೆಚ್ಚಿದ ಶಿಕ್ಷಕ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ... ಹೀಗೆ ಅನೇಕ ಪ್ರಶಸ್ತಿಗಳನ್ನು ಲಭಿಸಿವೆ.

ವಿದ್ಯಾರ್ಥಿಗಳ ಹಿತಚಿಂತಕರು: ದಾನಿಗಳಿಂದ ₹14 ಲಕ್ಷ ಹಣ ಸಂಗ್ರಹಿಸಿ ವಿದ್ಯಾರ್ಥಿಗಳ ಹಿತಕ್ಕಾಗಿ, ಶೈಕ್ಷಣಿಕ ಪ್ರಗತಿಗಾಗಿ ಬಳಸುತ್ತಿದ್ದಾರೆ. ಬೋಧನಾ ಕೌಶಲ್ಯದ ಮೂಲಕ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ.

ಮನವಿ: ಹಿರಿಯ ಅಧಿಕಾರಿಗಳ ಸಲಹೆಯಂತೆ ಕೆಲೂರ ಶಾಲೆಯ ಒಂದನೆ ತರಗತಿಗೆ ದಾಖಲಾಗುವ ಪ್ರತಿ ಮಗುವಿಗೆ ₹1 ಸಾವಿರ ಎಫ್‌ಡಿ ಇಡುತ್ತಿದ್ದೇನೆ. ಗ್ರಾಮಸ್ಥರು ತಮ್ಮ ಮಕ್ಕಳನ್ನು ಈ ಶಾಲೆಗೆ ದಾಖಲಿಸಬೇಕು ಎಂದು ಮುಖ್ಯಾಪಾಧ್ಯಾಯರಾದ ಎಸ್.ಎಂ. ಪಾಟೀಲ ಮನವಿ ಮಾಡಿದರು.

ಪ್ರಶಂಸನೀಯ: ಎಸ್.ಎಂ. ಪಾಟೀಲ ಅವರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ. ಕೆಲೂರ ಸರ್ಕಾರಿ ಶಾಲೆಯ ಮಕ್ಕಳ ಹೆಸರಿನಲ್ಲಿ ₹1 ಸಾವಿರ ಎಫ್‌ಡಿ ಇಡುತ್ತಿರುವುದು ಪ್ರಶಂಸನೀಯ ಎಂದು ಬಿಇಒ ಗಂಗಾಧರ ಅಣ್ಣಿಗೇರಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿಯಲ್ಲಿ ಪುರಾತನ ಕಾಲದ ಆಳ್ವರ್‌ ವಿಗ್ರಹ ಪತ್ತೆ
ಕೂಡ್ಲಿಗಿಯಲ್ಲಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಆರೋಪ