ಸಿದ್ದೇಶ್ವರ ಶ್ರೀಗಳಂತ ಗುರು ಸಿಗಲು ಸಾಧ್ಯವಿಲ್ಲ: ಸಂಸದ ರಮೇಶ ಜಿಗಜಿಣಗಿ

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ಶ್ರೀಗಳನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ ಎಂದು ಸಿದ್ದೇಶ್ವರ ಶ್ರೀಗಳ ದೀಪನಮನ ಕಾರ್ಯಕ್ರಮದಲ್ಲಿ ಸಂಸದ ರಮೇಶ ಜಿಗಜಿಣಗಿ ಭಾವುಕರಾದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಶ್ರೀ ಸಿದ್ಧೇಶ್ವರ ಅಪ್ಪನವರನ್ನು ನಿತ್ಯ ಸಮೀಪದಿಂದ ನೋಡಿ ಕಣ್ಣು ತುಂಬಿಕೊಂಡ ನಾವೇ ಪುಣ್ಯರು. ಅವರಂತ ಗುರು ಮತ್ತೊಬ್ಬರು ಸಿಗಲು ಸಾಧ್ಯವಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದ ಜ್ಞಾನಯೋಗಾಶ್ರಮದಲ್ಲಿ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಗಳ ಗುರುನಮನ ಮಹೋತ್ಸವ ಅಂಗವಾಗಿ ನಡೆದ ದೀಪನಮನ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, ಶ್ರೀಗಳು ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ್ದರು. ಅವರಿಗಾಗಿ ನಿತ್ಯ ಹೊರಗಡೆ ಸಾವಿರಾರು ಭಕ್ತರು ಕಾಯುತ್ತಿದ್ದರು. ಒಂದು ದಿನ ನನ್ನನ್ನು ನವಲಗುಂದ ಶ್ರೀಗಳು, ಸಿದ್ದೇಶ್ವರ ಶ್ರೀಗಳು ಪೂಜೆ ಮಾಡುತ್ತಿದ್ದ ಸಮಯದಲ್ಲಿ ಕೋಣೆಗೆ ಕರೆದೊಯ್ದಿದ್ದರು. ನನ್ನನ್ನು ಶ್ರೀಗಳು ಅತ್ಯಂತ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಊಟ ಮಾಡುತ್ತಿದ್ದರು. ಅವರಂತಹ ಸಂತರನ್ನು ನನ್ನ ಇಡೀ ಜೀವನದಲ್ಲಿಯೇ ಕಂಡಿಲ್ಲ. ತಮ್ಮ ವ್ಯಕ್ತಿತ್ವದಿಂದಲೇ ಅವರು ಜಗತ್ಪ್ರಸಿದ್ಧಿ ಗಳಿಸಿದ್ದರು. ಏನನ್ನು ಬಯಸದೆ ಸದಾ ಸಮಾಜಕ್ಕೆ ನೀಡಿದಂತವರು. ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ ಎಂದು ಶ್ರೀಗಳನ್ನು ನೆನೆದು ಭಾವುಕರಾದರು.

ಮೈಸೂರಿನ ಖ್ಯಾತ ಸಾಹಿತಿ ಕೆ.ಸಿ.ಶಿವಪ್ಪ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಯವರು ದೇಶ-ವಿದೇಶಗಳಲ್ಲಿ ಪ್ರವಚನ ಮಾಡಿದರು. ಅದರಿಂದ ಕನ್ನಡಿಗರು ಅಷ್ಟೇ ಅಲ್ಲದೇ ವಿದೇಶದಲ್ಲಿರುವವರೂ ಸಹ ಶ್ರೀಗಳನ್ನು ಕಾಣುವಂತಾಯಿತು. ಅವರ ನುಡಿಗಳನ್ನು ಕೇಳುವ ಭಾಗ್ಯ ಅವರಿಗೆಲ್ಲ ಸಿಕ್ಕಿತು. ಸಮಯ ಪಾಲನೆ, ಶಿಸ್ತು, ಪರಿಸರ ರಕ್ಷಣೆ ಬಗ್ಗೆ ಇರುವ ಕಾಳಜಿ, ಹಸಿರನ್ನು ಬೆಳೆಸಲು ಅವರ ಚಿಂತನೆಗಳು ಎಲ್ಲರೂ ಅಪ್ಪನವರನ್ನು ನೋಡಿ ಕಲಿಯಬೇಕು. ಒಬ್ಬ ಸಂತನಾಗಿ ಯಾರೂ ಮಾಡದಂತಹ ಅಮೋಘ ಕೆಲಸ ಮಾಡಿದ್ದಾರೆ. ಇಡೀ ಜಗತ್ತಿಗೆ ಜ್ಞಾನದಾಸೋಹ ಮಾಡಿದ್ದಾರೆ ನಾವು ಹಾದಿ ತಪ್ಪುತ್ತಿದ್ದಾಗ ನಮ್ಮನ್ನು ಎಚ್ಚರಿಸಿದ್ದಾರೆ. ಅವರನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.

ಸೇಡಂನ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಒಬ್ಬ ಸಂತನಾಗಿ ಹೇಗಿರಬೇಕು ಮತ್ತು ಒಬ್ಬ ಒಳ್ಳೆಯ ಶಿಷ್ಯನಾಗಿ ಮಲ್ಲಿಕಾರ್ಜುನ ಸ್ವಾಮೀಜಿಯವರಿಗೆ ಚ್ಯುತಿ ಬಾರದಂತೆ ಬದುಕಿ ಇಂದು ನಮ್ಮೆಲ್ಲರಿಗೂ ಮಹಾನ್ ಗುರುವಾಗಿದ್ದಾರೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಎಂದು ಹೇಳಿದರು.

ಸೂತ್ತೂರು ಮಠದ ಉತ್ತರಾಧಿಕಾರಿ ಜಯರಾಜೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಶ್ರೇಷ್ಠರಲ್ಲಿ ಅತ್ಯಂತ ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು. ಅವರು ಇರುವಂತಹ ಸಮಯದಲ್ಲಿ ನಾವು ಇದ್ದೇವು ಎನ್ನುವುದೇ ನಮ್ಮ ಭಾಗ್ಯ ಮತ್ತು ನಮ್ಮ ಹೆಮ್ಮೆ ಎಂದರು.

ಶಿವಗಂಗೆಯ ಮಹಾಲಕ್ಷ್ಮೀ ಪೀಠದ ಜ್ಞಾನಾನಂದ ಪುರಿ ಮಹಾಸ್ವಾಮಿಗಳು ಹಾಗೂ ಗೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಈ ವೇಳೆ ಸಿದ್ದೇಶ್ವರ ಸ್ವಾಮೀಜಿ ಬರೆದ ಪುಸ್ತಕಗಳನ್ನು ಗಣ್ಯಮಾನ್ಯರು ಬಿಡುಗಡೆ ಮಾಡಿದರು. ಬಬಲೇಶ್ವರದ ಪಂಚಮಸಾಲಿ ಮಹಾಪೀಠದ ಮಹಾದೇವ ಶಿವಾಚಾರ್ಯ ಸ್ವಾಮಿಗಳು, ಕನ್ಹೇರಿ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು, ಸುತ್ತೂರು ಜಗದ್ಗುರು ವೀರಸಿಂಹಾಸನ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಬಸವಲಿಂಗ ಸ್ವಾಮೀಜಿ, ಶಾಸಕ ವಿಠ್ಠಲ ಕಟಕದೋಂಡ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಮುಂತಾದವರು ಇದ್ದರು.

Share this article